ಬೆಂಗಳೂರು : ಇಲ್ಲಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ನಟರಾಜನ್ ಅವರು ತನ್ನ ವಯಸ್ಸು ಹಾಗೂ ಕಳಪೆ ಆರೋಗ್ಯದ ಕಾರಣ ತನಗೆ ಇನ್ನೂ ಒಳ್ಳೆಯ ಸೌಕರ್ಯಗಳನ್ನು ಒದಗಿಸುವಂತೆ ಕೋರಿದ್ದಾರೆ.
ಒಂದು ಮಂಚ, ಒಂದು ಟೇಬಲ್ ಫ್ಯಾನ್, ಒಂದು ಮ್ಯಾಟ್ರೆಸ್ ಮತ್ತು ಆಟ್ಯಾಚ್‌ಡ್ ಬಾತ್ ರೂಮ್ ಸೌಕರ್ಯವನ್ನು ಕಲ್ಪಿಸುವಂತೆ ಶಶಿಕಲಾ ಜೈಲು ಅಧಿಕಾರಿಗಳನ್ನು ಕೋರಿದ್ದಾರೆ. ತನ್ನನ್ನು ತಮಿಳು ನಾಡಿನ ಜೈಲಿಗೆ ಸ್ಥಳಾಂತರಿಸುವಂತೆ ಶಶಿಕಲಾ ಅವರು ಈಗಾಗಲೇ ಕೋರಿದ್ದಾರೆ.
ಕರೆದಾಗ ಬರುವ ವೈದ್ಯರು, ವಾರಕ್ಕೆರಡು ಬಾರಿ ನಾನ್ ವೆಜ್ ಆಹಾರ, ಮಿನರಲ್ ವಾಟರ್ ಇತ್ಯಾದಿಗಳನ್ನು ಒದಗಿಸಬೇಕೆಂಬ ಶಶಿಕಲಾ ಕೋರಿಕೆಯನ್ನು ಜೈಲು ಅಧಿಕಾರಿಗಳು ಈಗಾಗಲೇ ನಿರಾಕರಿಸಿದ್ದಾರೆ.
ಘೋಷಿತ ಆದಾಯಕ್ಕೆ ಮೀರಿದ ಅಕ್ರಮ ಆಸ್ತಿಪಾಸ್ತಿ ಹೊಂದಿರುವ ಪ್ರಕರಣದಲ್ಲಿ ಜೈಲು ಪಾಲಾಗಿರುವ ಶಶಿಕಲಾ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯಾಗಿದೆ. ಆಕೆಯ ಜತೆಗೆ ಆಕೆಯ ಸೋದರ ಸಂಬಂಧಿ ವಿ ಕೆ ಸುಧಾಕರನ್, ಅತ್ತಿಗೆ ಇಳವರಸಿ ಅವರಿಗೂ ಜೈಲು ಶಿಕ್ಷೆಯಾಗಿದೆ.
ಇಳವರಸಿ ಮತ್ತು ಶಶಿಕಲಾ ಅವರನ್ನು ಅಕ್ಕಪಕ್ಕದ ಜೈಲು ಕೋಣೆಯಲ್ಲಿ ಇರಿಸಲಾಗಿದೆ. ಇತರ ಕೈದಿಗಳಿಗೆ ನೀಡಲಾಗುವ ಸಾಮಾನ್ಯ ಸೌಕರ್ಯಗಳನ್ನೇ ಇವರಿಗೂ ನೀಡಲಾಗುತ್ತಿದೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.
ಶಶಿಕಲಾ ಅವರು ಕಳೆದ ವರ್ಷ ತಮ್ಮ 4 ವರ್ಷಗಳ ಜೈಲು ಶಿಕ್ಷೆಯಲ್ಲಿ 21 ದಿನಗಳ ಶಿಕ್ಷೆಯನ್ನು ಅನುಭವಿಸಿದ್ದಾರೆ. ಸುಪ್ರೀಂ ಕೋರ್ಟ್ ಆಕೆಗೆ 10 ಕೋಟಿ ರೂ.ಗಳ ದಂಡವನ್ನೂ ವಿಧಿಸಿದ್ದು ಅದನ್ನು ಪಾವತಿಸಲು ಆಕೆ ವಿಫಲಳಾದಲ್ಲಿ ಹೆಚ್ಚುವರಿಯಾಗಿ 13 ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗಿದೆ.