Advertisement

ದುಬಾರಿ ಈ ನಗರ : ಭಾರತದಲ್ಲಿ ಮುಂಬಯಿ ಅತೀ ವೆಚ್ಚದ ನಗರ

01:17 AM Jul 03, 2022 | Team Udayavani |

ಕೊರೊನಾ ಸಾಂಕ್ರಾಮಿಕ, ರಷ್ಯಾ -ಉಕ್ರೇನ್‌ ಯುದ್ಧ, ಸಾಮಾಜಿಕ, ಆರ್ಥಿಕ ತಲ್ಲಣಗಳು ವಿಶ್ವದ ಎಲ್ಲ ಲೆಕ್ಕಚಾರಗಳನ್ನು ಬುಡಮೇಲು ಮಾಡುತ್ತಿವೆ ಎಂದರೆ ತಪ್ಪಾಗಲಾರದು. ಒಂದು ಕಾಲದಲ್ಲಿ ಎಲ್ಲರ ಪಾಲಿಗೂ ಆಶ್ರಯದಾತ ಎಂದೆನಿಸಿಕೊಂಡಿದ್ದ ಭಾರತದ ಕೆಲವು ನಗರಗಳಲ್ಲಿ ಈಗ ಜೀವನ ನಡೆಸುವುದೇ ಕಷ್ಟ ಎನ್ನುವಂಥ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಯಾಕೆಂದರೆ ಈ ನಗರಗಳು ವಿಶ್ವದಲ್ಲೇ ಅತ್ಯಂತ ದುಬಾರಿ ನಗರಗಳಾಗಿ ಗುರುತಿಸಲ್ಪಟ್ಟಿವೆೆ. 

Advertisement

ಕೊರೊನಾ ಸಾಂಕ್ರಾಮಿಕದ ಬಳಿಕ ಜಾಗತಿಕ ಸಮಸ್ಯೆಗಳು ಹೆಚ್ಚಾಗಿದ್ದು, ಇದು ಉಕ್ರೇನ್‌- ರಷ್ಯಾ ಯುದ್ಧದ ಪರಿಣಾಮದಿಂದ ಇನ್ನಷ್ಟು ವೃದ್ಧಿಸಿದೆ. ಗಗನಕ್ಕೇರುತ್ತಿರುವ ಹಣದುಬ್ಬರ, ಕರೆನ್ಸಿ ಚಂಚಲತೆ ಅಂತಾರಾಷ್ಟ್ರೀಯ ಆರ್ಥಿಕ ಅಸತೋಲನಕ್ಕೆ ಕಾರಣವಾಗುತ್ತಿದೆ. ಮಾತ್ರವಲ್ಲ ಪ್ರತಿಯೊಬ್ಬರ ಜೀವನ ವೆಚ್ಚದ ಮೇಲೂ ಪರಿಣಾಮ ಬೀರುತ್ತಿದೆ. ಜಾಗತಿಕ ಸಮಸ್ಯೆಗಳು ಉದ್ಯೋಗಿಗಳ ಸಂಬಳ ಮತ್ತು ಉಳಿತಾಯದ ಮೇಲೆ ಪರಿಣಾಮ ಬೀರಿದ್ದು, ಕಳೆದ 18 ತಿಂಗಳುಗಳಲ್ಲಿ ಏಷ್ಯಾಕ್ಕೆ ಬರುತ್ತಿರುವ ವೃತ್ತಿಪರರ ಸಂಖ್ಯೆ ಕುಸಿತಕ್ಕೆ ಕಾರಣವಾಗಿವೆ.

ಮುಂಬಯಿ ಬಲು ದುಬಾರಿ

ಜೀವನ ವೆಚ್ಚ ಸಮೀಕ್ಷೆಯ ಕುರಿತು ವಿಶ್ವಾಸಾರ್ಹ ಅಂಕಿಅಂಶಗಳನ್ನು ಒದಗಿಸುವ ಜಾಗತಿಕ ಸಲಹಾ ಸಂಸ್ಥೆಯಾದ ಮರ್ಸರ್‌ ನಡೆಸಿದ 2022ರ ಜೀವನ ವೆಚ್ಚದ ಸಮೀಕ್ಷೆಯ ಪ್ರಕಾರ ವಿದೇಶಿ ಉದ್ಯೋಗಿಗಳಿಗೆ ಮುಂಬಯಿ ಅತ್ಯಂತ ದುಬಾರಿ ನಗರವಾಗಿದೆ. ಅನಂತರದ ಸ್ಥಾನದಲ್ಲಿ  ಹೊಸದಿಲ್ಲಿ, ಚೆನ್ನೈ, ಬೆಂಗಳೂರು ಹಾಗೂ ಹೈದರಾಬಾದ್‌ ನಗರಗಳಿವೆೆ. ಈ ಶ್ರೇಯಾಂಕದಲ್ಲಿ ಪುಣೆ ಮತ್ತು ಕೋಲತಾ ಕಡಿಮೆ ವೆಚ್ಚದ ಭಾರತೀಯ ನಗರಗಳಾಗಿ ಗುರುತಿಸಿಕೊಂಡಿವೆ.

ಸಮೀಕ್ಷೆಗೆ ಆಧಾರ

Advertisement

2022ರ ಮಾರ್ಚ್‌ನಲ್ಲಿ ಸಮೀಕ್ಷೆಯನ್ನು ನಡೆಸಲಾಗಿದ್ದು, ಐದು ಖಂಡಗಳ 227 ನಗರಗಳಲ್ಲಿ ವಸತಿ, ಸಾರಿಗೆ, ಆಹಾರ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಮತ್ತು ಮನೋರಂಜನೆ ಸೇರಿದಂತೆ 200ಕ್ಕೂ ಹೆಚ್ಚು ವಸ್ತುಗಳ ತುಲನಾತ್ಮಕ ವೆಚ್ಚವನ್ನು ಅಳೆದು ವಿಶ್ವದಲ್ಲಿ ಜೀವನ ನಡೆಸಲು ದುಬಾರಿಯಾಗಿರುವ ಸ್ಥಳಗಳನ್ನು ಗುರುತಿಸಲಾಗಿದೆ. ಈ ವರ್ಷದಲ್ಲಿ  ಸಮೀಕ್ಷೆಗೆ ಸ್ಮಾರ್ಟ್‌ವಾಚ್‌, ಟ್ಯಾಬ್ಲೆಟ್‌, ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌ಗಳ ವೆಚ್ಚವನ್ನೂ ಸೇರಿಸಲಾಗಿದ್ದು,  ಸಂಗೀತ ಸಿಡಿಗಳು ಮತ್ತು ವೀಡಿಯೋ ಸಿನೆಮಾ ಬಾಡಿಗೆಗಳಂತಹ ಸಂಬಂಧವಿಲ್ಲದ ವಸ್ತುಗಳನ್ನು ತೆಗೆದುಹಾಕಲಾಗಿದೆ.

ಕಡಿಮೆ ವೆಚ್ಚದ ನಗರಗಳಿಗೆ ಹೆಚ್ಚುತ್ತಿದೆ ಬೇಡಿಕೆ

ಏಷ್ಯಾದ ಪ್ರಮುಖ 40 ಅತ್ಯಂತ ದುಬಾರಿ ನಗರಗಳಲ್ಲಿ ಗುರುತಿಸಿಕೊಂಡಿರುವ ಮುಂಬಯಿ ಭಾರತದ ಹಣಕಾಸಿನ ಪ್ರಮುಖ ಕೇಂದ್ರ. ಬಹುರಾಷ್ಟ್ರೀಯ ಸಂಸ್ಥೆಗಳ ಕಾರ್ಯಾಚರಣೆಗೆ ಸೂಕ್ತ ಮತ್ತು ಜನಪ್ರಿಯ ಸ್ಥಳವಾಗಿದ್ದರೂ ಇಲ್ಲಿನ ಜೀವನ ವೆಚ್ಚದ ಕಾರಣ ಕಡಿಮೆ ವೆಚ್ಚದ ಪ್ರದೇಶಗಳಾದ ಹೈದರಾಬಾದ್‌, ಚೆನ್ನೈ,

ಬೆಂಗಳೂರು, ಪುಣೆ, ಕೋಲತಾ ಎಲ್ಲರ ಗಮನಸೆಳೆಯುತ್ತವೆ. ಐಟಿ ಸೇವೆ, ಬಿಎಫ್ಎಸ್‌ಐ ಮತ್ತು ಔಷಧೀಯ ವಲಯಗಳ‌ ಕಂಪೆನಿಗಳು ಭಾರತದಲ್ಲಿ ಕಾರ್ಯಾಚರಣೆ ನಡೆಸಲು ಕಡಿಮೆ ವೆಚ್ಚದ ನಗರಗಳನ್ನೇ ಪರಿಗಣಿಸುತ್ತಿವೆ.  ದೈನಂದಿನ ವೆಚ್ಚಗಳಿಗೆ ಕೊಡುಗೆ ನೀಡುವ ಅಂಶಗಳನ್ನೂ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಇದರಲ್ಲಿ ಹಾಲು, ಬ್ರೆಡ್‌, ತರಕಾರಿಗಳು ಕಡಿಮೆ ವೆಚ್ಚದಲ್ಲಿ ಕೋಲತಾದಲ್ಲಿ ದೊರೆಯುತ್ತದೆ. ಇದು ಮುಂಬಯಿ, ಹೊಸದಿಲ್ಲಿಯಲ್ಲಿ ದುಬಾರಿಯಾಗಿವೆ. ಇನ್ನು ಮನೆಗೆ ಅಗತ್ಯವಾದ ವಿದ್ಯುತ್‌, ಫೋನ್‌ ವೆಚ್ಚಗಳೂ ಇಲ್ಲಿ ದುಬಾರಿಯಾಗಿದ್ದು, ಚೆನ್ನೈ, ಹೈದರಾಬಾದ್‌ನಲ್ಲಿ ಅತ್ಯಂತ ಕಡಿಮೆ ಇದೆ. ಮನೋರಂಜನೆಯ ವಿಚಾರದಲ್ಲೂ ಮುಂಬಯಿ ನಗರ ಅತ್ಯಂತ ದುಬಾರಿ ಸ್ಥಾನದಲ್ಲಿದ್ದು, ಹೈದರಾ

ಬಾದ್‌ನಲ್ಲಿ ಇದು ಅಗ್ಗವಾಗಿದೆ. ಇನ್ನು ಭಾರತದ ಎಲ್ಲ ನಗರಗಳಲ್ಲೂ ಪೆಟ್ರೋಲ್‌ ಬೆಲೆಗಳು ಹೆಚ್ಚಾಗಿರುವುದರಿಂದ ಹೊಸ ಕಾರು ಖರೀದಿ, ನಿರ್ವಹಣೆ ವೆಚ್ಚಗಳು ದುಬಾರಿಯಾಗುತ್ತಿವೆೆ.

ವಿಶ್ವದ ಅತ್ಯಂತ ದುಬಾರಿ ನಗರಗಳು

ವಿದೇಶಿ ಉದ್ಯೋಗಿಗಳಿಗೆ ಹಾಂಕಾಂಗ್‌ ವಿಶ್ವದಲ್ಲೇ ಅತ್ಯಂತ ದುಬಾರಿ ಸ್ಥಳವಾಗಿದೆ. ಸ್ವಿಟ್ಸರ್ಲೆಂಡ್‌ನ‌ ನಾಲ್ಕು ನಗರಗಳಾದ ಜ್ಯೂರಿಚ್‌, ಜಿನೀವಾ, ಬಾಸೆಲ್‌ ಮತ್ತು ಬೆರ್ನ್ ಕ್ರಮವಾಗಿ ಎರಡರಿಂದ ಐದನೇ ಸ್ಥಾನದಲ್ಲಿದೆ. ಏಷ್ಯಾದ ಮೂರು ನಗರಗಳಲ್ಲಿ ಸಿಂಗಾಪುರ, ಟೋಕಿಯೊ ಮತ್ತು ಬೀಜಿಂಗ್‌ 8, 9, 10ನೇ ಸ್ಥಾನದಲ್ಲಿದೆ.

ಅಗ್ಗದ ನಗರಗಳು

ಟರ್ಕಿಯ ಅಂಕಾರಾ, ಕಿರ್ಗಿಸ್ಥಾನ್‌ನ ಬಿಶೆRಕ್‌ ಮತ್ತು ತಜಕಿಸ್ಥಾನದ ದುಶಾನ್ಬೆ ಸೇರಿದಂತೆ ಇನ್ನು ಕೆಲವು ನಗರಗಳು ವಿದೇಶಿ ಉದ್ಯೋಗಿಗಳಿಗೆ ಅಗ್ಗದ ಸ್ಥಳಗಳಾಗಿವೆ.

ಬದಲಾಗುತ್ತಿದೆ ಪರಿಸ್ಥಿತಿ

ಕೊರೊನಾ ಸಾಂಕ್ರಾಮಿಕದ ಬಳಿಕ ಸಾಕಷ್ಟು ಬದಲಾವಣೆಗಳಾಗಿವೆ. ಭಾರತೀಯ ಬಹುರಾಷ್ಟ್ರೀಯ ಕಂಪೆನಿಗಳು ಮಹಾನಗರಗಳನ್ನು ಹೊರತುಪಡಿಸಿ ಇತರ ನಗರಗಳಲ್ಲೂ ಉಪ ಕಚೇರಿಗಳನ್ನು ತೆರೆಯುತ್ತಿವೆ. ಇದರಿಂದ ಜನರು ಸ್ಥಳಾಂತರಗೊಳ್ಳುವ ಬದಲು ತಮ್ಮ ಊರು ಅಥವಾ ಹತ್ತಿರದ ಪ್ರದೇಶಗಳಲ್ಲಿ ಕೆಲಸ ಮಾಡಲು ಬಯಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಲೆಕ್ಕಾಚಾರದಲ್ಲಿ ವ್ಯತ್ಯಾಸಗಳಾಗುವ ಎಲ್ಲ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next