ತುಳು ಚಿತ್ರರಂಗ ಶತಕದ ಹೊಸ್ತಿಲಲ್ಲಿದೆ . 94ನೇ ಸಿನೆಮಾ ‘ದಗಲ್‌ಬಾಜಿಲು’ ಮೊನ್ನೆ ತಾನೆ ರಿಲೀಸ್ ಆಗಿದ್ದು, ಇನ್ನು 6 ಸಿನೆಮಾ ಬಂದರೆ ಅಲ್ಲಿಗೆ ಕೋಸ್ಟಲ್‌ವುಡ್ ಸೆಂಚುರಿ ಬಾರಿಸುವುದು ಖಚಿತ. ಪ್ರಾದೇಶಿಕ ಚೌಕಟ್ಟಿನಲ್ಲಿಯೇ ಇದ್ದುಕೊಂಡು ಸೀಮಿತ ಪ್ರೇಕ್ಷಕರ ಮನ ಗೆಲ್ಲುವಂತೆ ಮಾಡಿರುವ ತುಳು ಸಿನೆಮಾಗಳು ಇಷ್ಟು ರೇಂಜಿನಲ್ಲಿ ಸದ್ದು ಮಾಡುವುದು ಆಶ್ಚರ್ಯ ಹಾಗೂ ಕುತೂಹಲ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮಧ್ಯಭಾಗಕ್ಕೆ ತುಳು ಚಿತ್ರರಂಗಕ್ಕೆ ಹೇಳಿಕೊಳ್ಳುವಂತಹ ಸಂಭ್ರಮವೇನೂ ಇರಲಿಲ್ಲ. ಯಾಕೆಂದರೆ, ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಕಡಿಮೆ. ಆದರೆ, ಬಿಡುಗಡೆಯ ತವಕದಲ್ಲಿ ಹಲವಾರು ಸಿನೆಮಾ ಇರುವುದರಿಂದ ಕೋಸ್ಟಲ್‌ವುಡ್‌ನಲ್ಲಿ ಹೊಸ ನಿರೀಕ್ಷೆ ಮೂಡಿದ್ದಂತು ಸತ್ಯ. ಫೆಬ್ರವರಿಯಲ್ಲಿ ‘ಬಲೇ ಪುದರ್ ದೀಕ ಈ ಪ್ರೀತಿಗ್’ ಸಿನೆಮಾ, ಮಾರ್ಚ್‌ನಲ್ಲಿ ‘ಅಪ್ಪೆ ಟೀಚರ್’ ಮತ್ತು ‘ತೊಟ್ಟಿಲು’ ರಿಲೀಸ್ ಆಗಿತ್ತು. ಇದರಲ್ಲಿ ‘ಅಪ್ಪೆ ಟೀಚರ್’ 100 ದಿನ ಪೂರೈಸಿ ಗಮನ ಸೆಳೆಯಿತು. ವಿಶೇಷ ಎಂಬಂತೆ ಮಹಿಳಾ ಸಂಘಟನೆಗಳು ಈ ಸಿನೆಮಾದ ವಿರುದ್ಧ ಸ್ವರ ಎತ್ತಿದರು. ಬಳಿಕ ‘ಪೆಟ್ ಕಮ್ಮಿ’, ‘ಅಮ್ಮೆರ್ ಪೊಲೀಸಾ’, ‘ಪಡ್ಡಾಯಿ’ ಬಂದು ಈಗ ‘ದಗಲ್ಬಾಜಿ’ಯಲ್ಲಿ ನಿಂತಿದೆ.
ಇದಿಷ್ಟು ಈ ವರ್ಷದ ಇಲ್ಲಿಯವರೆಗಿನ ಸಿನೆಮಾ ಕಥೆಯಾದರೆ, ಮುಂದೆ ಸಾಲು ಸಾಲು ಸಿನೆಮಾಗಳು ತೆರೆಗೆ ಬರುವ ಕಾತುರದಲ್ಲಿದೆ ಎಂಬುದು ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ. ಪಮ್ಮಣ್ಣೆ ದಿ ಗ್ರೇಟ್, ಪತ್ತೀಸ್ ಗ್ಯಾಂಗ್, ಏರಾ ಉಲ್ಲೆರ್‌ಗೆ, ಮೈ ನೇಮ್ ಈಸ್ ಅಣ್ಣಪ್ಪೆ, ಕಟಪಾಡಿ ಕಟ್ಟಪ್ಪೆ, ಉಮಿಲ್, ಕೋರಿ ರೊಟ್ಟಿ, ಗೋಲ್ ಮಾಲ್, ಕರ್ಣೆ, ಎಕ್ಕೂರು, ಜುಗಾರಿ, ಗಂಟ್ ಕಲ್ವೆರ್‌ಸಹಿತ ಹಲವು ಸಿನೆಮಾಗಳು ಮುಂದಿನ ತಿಂಗಳಿನಿಂದ ತೆರೆಕಾಣಲು ತುದಿಗಾಲಲ್ಲಿ ನಿಂತಿವೆ.
ಯಾವ ಸಿನೆಮಾ ಯಾವ ಕಾಲದಲ್ಲಿ ಬರಲಿದೆ ಎಂಬುದು ಈಗ ಹೇಳಲು ಆಗದು. ಯಾಕೆಂದರೆ ಒಂದೇ ದಿನ ಎರಡು ಸಿನೆಮಾಗಳು ರಿಲೀಸ್ ಆದ ಉದಾಹರಣೆ ಮಂಗಳೂರಿನಲ್ಲಿ ಇರುವುದರಿಂದ ಯಾವ ಸಿನೆಮಾ?ಯಾವಾಗ ರಿಲೀಸ್? ಎಂಬುದು ಕುತೂಹಲ ಮೂಡಿಸಿದೆ. ಅಂದಹಾಗೆ, 1971ರಲ್ಲಿ ‘ಎನ್ನ ತಂಗಡಿ’ ಪ್ರಥಮ ತುಳು ಸಿನೆಮಾವು ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತ್ತು.
2014ರಲ್ಲಿ ಅದೇ ಜ್ಯೋತಿ ಚಿತ್ರಮಂದಿರದಲ್ಲಿ ‘ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ’ ಬಿಡುಗಡೆಗೊಂಡು 50ನೇ ತುಳು ಸಿನೆಮಾವಾಗಿ ದಾಖಲೆ ಮಾಡಿತ್ತು. ಆರಂಭದ 10 ವರ್ಷದ ಅವಧಿಯಲ್ಲಿ 17 ತುಳು ಸಿನೆಮಾಗಳ ಕೊಡುಗೆ ನೀಡಿತು. ಅನಂತರ ಸ್ವಲ್ಪ ಆಮೆಗತಿಯಲ್ಲಿ ಸಾಗುತ್ತಾ 20 ವರ್ಷದ ಅವಧಿಯಲ್ಲಿ ಕೇವಲ 15 ಸಿನೆಮಾಗಳು ಮಾತ್ರ ಬಂದಿತ್ತು. ಬಳಿಕ 5 ವರ್ಷ ಸ್ಥಗಿತಗೊಂಡ ತುಳುಚಿತ್ರರಂಗ ಮತ್ತೆ 2006ರಲ್ಲಿ ಚೇತರಿಕೆಗೊಂಡು, 2013ರವರೆಗೆ 14 ಸಿನೆಮಾಗಳು ತೆರೆಕಂಡವು. 75ರ ಸಿನೆಮಾವಾಗಿ ‘ಪನೊಡಾ ಬೊಡ್ಚಾ’ ದಾಖಲಾಯಿತು.
ವಿಶೇಷವೆಂದರೆ, 50 ಸಿನೆಮಾ ಆಗಬೇಕಾದರೆ 44 ವರ್ಷ ಬೇಕಾಯಿತು. ಆದರೆ, 2- 3 ವರ್ಷಗಳ ಒಳಗೆ ಸುಮಾರು 30ರಷ್ಟು ಸಿನೆಮಾ ಬರುವಂತಾಯಿತು.!
ಬರೋಬ್ಬರಿ 46ನೇ ವರ್ಷದಲ್ಲಿ ತುಳು ಸಿನೆಮಾವಿದೆ. ಒಂದೊಂದೇ ಸಿನೆಮಾಗಳು ತೆರೆಕಾಣುವ ಮೂಲಕ ತುಳು ಚಿತ್ರ ನಡಿಗೆ ಮುಂದೆ ಸಾಗುತ್ತಿದೆ. 25- ಬೆಳ್ಳಿಹಬ್ಬ, 40- ಮಾಣಿಕ್ಯ, 50- ಸುವರ್ಣ, 60- ವಜ್ರ ಸಂಭ್ರಮ, 75- ಅಮೃತ ಮಹೋತ್ಸವವನ್ನು ದಾಟಿ ತುಳು ಸಿನೆಮಾಗಳು ಮುಂದೆ ಸಾಗಿದ್ದು, ಈಗ 94ನೇ ಸಿನೆಮಾ ‘ದಗಲ್ಬಾಜಿಲು’ ಪ್ರದರ್ಶನದಲ್ಲಿದೆ.