ಮಂಗಳೂರು: ರೆಚಲ್ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್‌ನಡಿ ನಿರ್ಮಾಣಗೊಂಡ ರೊನಾಲ್ಡ್ ಮಾರ್ಟಿಸ್ ನಿರ್ಮಾಣ ಹಾಗೂ ಶರತ್ ಎಸ್.ಪೂಜಾರಿ ನಿರ್ದೇಶನದ “ಕಂಬಳಬೆಟ್ಟು ಭಟ್ರೆನ ಮಗಳ್’ ತುಳು ಸಿನೆಮಾ ಕರಾವಳಿಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಕೋಸ್ಟಲ್‌ವುಡ್‌ನ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಸಿನೆಮಾ ಈಗಾಗಲೇ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಬದಲಾವಣೆಯ ಹೊಸ ಇತಿಹಾಸ ಬರೆಯುತ್ತಿದೆ ಎಂದು ಚಿತ್ರತಂಡ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ರಮೇಶ್ ರೈ, ಪ್ರಕಾಶ್ ತುಮಿನಾಡು, ಶಿವಪ್ರಕಾಶ್ ಪೂಂಜ, ಐಶ್ವರ್ಯಾ ಆಚಾರ್ಯ, ಶೈಲೇಶ್ ಬಿರ್ವ, ಶರತ್ ಪೂಜಾರಿ, ಪ್ರದೀಪ್ ಜೆ. ಶೆಟ್ಟಿ ಅವರು ಅಭಿನಯಿಸಿದ್ದು, ತುಳು ಸಿನೆಮಾರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಶಿನೋಯ್ ವಿ. ಜೋಸೆಫ್ ಅವರ ಸಂಗೀತ ಚಿತ್ರಕ್ಕೆ ಹೊಸ ಬೆಳಕು ನೀಡಿದ್ದು, ತುಳುನಾಡಿನ ಕಥೆಯನ್ನು ವಿಭಿನ್ನ ನೆಲೆಯಲ್ಲಿ ಜನರ ಮುಂದೆ ಪ್ರಸ್ತುತಪಡಿಸಲಾಗಿದೆ ಎಂದು ನಿರ್ದೇಶಕ ಶರತ್ ಎಸ್.ಪೂಜಾರಿ ಬಗ್ಗತೋಟ ತಿಳಿಸಿದ್ದಾರೆ.
ಕಂಬಳಬೆಟ್ಟು ಎಂಬ ಊರಿನ ಮನೆಯೊಂದರಲ್ಲಿ ನಡೆದ ಘಟನೆ ಆಧಾರಿತವಾಗಿ ಸಿದ್ಧಗೊಂಡ ಸಿನೆಮಾವಿದು. ಮನೆಯ ಮಗಳ ಕಥೆಯೇ ಈ ಸಿನೆಮಾದ ಮೂಲಧಾತು. ಅದು ಯಾವ ರೀತಿಯ ಕಥೆ ಹಾಗೂ ಆಕೆ ಏನಾಗಿದ್ದಳು? ಯಾಕೆ ಆಕೆಗೆ ಮಹತ್ವ? ಎಂಬೆಲ್ಲ ವಿಚಾರಗಳು ಸಿನೆಮಾದಲ್ಲಿ ವಿಭಿನ್ನ ಯೋಚನೆಯನ್ನು ಸೃಷ್ಟಿಸಿದೆ. ಕೆಲವೇ ತಿಂಗಳಿನಲ್ಲಿ ಇದೇ ಸಿನೆಮಾ ಕನ್ನಡದಲ್ಲಿಯೂ ತೆರೆಕಾಣಲಿದೆ ಎಂದವರು ಹೇಳಿದರು.