ಹೊಸನಗರ: ನಾಗೋಡಿ ನಿಟ್ಟೂರು ಗ್ರಾಪಂನಲ್ಲಿ ನರೇಗಾ ಕುರಿತ ಗ್ರಾಮಸಭೆಯನ್ನು ಸೂಕ್ತ ಮಾಹಿತಿ ನೀಡದೆ ನಡೆಸಿದ್ದು, ಯೋಜನೆಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಯತ್ನಿಸಲಾಗಿದೆ ಎಂದು ಗ್ರಾಪಂ ಮಾಜಿ ಸದಸ್ಯ ಮಂಜಪ್ಪ, ನಾಗೇಂದ್ರ ಜೋಗಿ, ರವೀಶ ಮಡೋಡಿ, ಚಂದ್ರೇಗೌಡ ನಾಗೋಡಿ ಆರೋಪಿಸಿದ್ದಾರೆ.
ನಾಗೋಡಿ ನಿಟ್ಟೂರು ಗ್ರಾಪಂನಲ್ಲಿ ಸೋಮವಾರ ನಡೆದ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಆರಂಭವಾಗುತ್ತಿದ್ದಂತೆ ಸಭೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ 4 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದರೂ ಯಾರಿಗೂ ಮಾಹಿತಿ ನೀಡದೆ ತರಾತುರಿಯಲ್ಲಿ ಸಭೆ ನಡೆಸಲಾಗಿದೆ ಎಂದು ಆರೋಪಿಸಿದರು.
14ನೇ ಹಣಕಾಸು ಯೋಜನೆಯಡಿ ನಾಗೋಡಿ ಗ್ರಾಮದ ಸನಂ 305ರಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕದ ಸುತ್ತ ಪ್ರವಾಹ ಕಾಲುವೆ ನಿರ್ಮಿಸಿದ್ದು ಇದರಲ್ಲಿ ಸ್ಥಳೀಯರಿಗೆ ಕೆಲಸ ನೀಡದೆ ಬೇರೆ ಊರಿನ ಕಾರ್ಮಿಕರನ್ನು ಕರೆತಂದು ಕಾಮಗಾರಿ ನಿರ್ವಹಿಸಲಾಗಿದೆ. ಈ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಪ್ರಕರಣವನ್ನು ಮುಚ್ಚಿ ಹಾಕುವ ಸಲುವಾಗಿ ಮಾಹಿತಿ ನೀಡದೆ ಗ್ರಾಮಸಭೆ ನಡೆಸಲಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ :ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ -ಪ್ರತಿಭಟನೆ
ಈ ಸಂಬಂಧ ನರೇಗಾ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಅಧ್ಯಕ್ಷರಿಗೆ ಮನವಿ ನೀಡಿದ ಅವರು, ಕಾಮಗಾರಿಗಳ ಸಮಗ್ರ ತನಿಖೆ ನಡೆಯಬೇಕು. ಇದರಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಳ್ಳಬೇಕು. ಬಳಿಕ ಪಂಚಾಯತ್‌ನಿಂದ ಎಲ್ಲಾ ಜನರಿಗೂ ಮುಂಚಿತವಾಗಿ ಸೂಕ್ತ ಮಾಹಿತಿ ನೀಡಿ ಗ್ರಾಮಸಭೆ ನಡೆಸಬೇಕು ಎಂದು ಒತ್ತಾಯಿಸಿದರು.