Advertisement

ಭ್ರಷ್ಟಾಚಾರ-ಸ್ವಜನ ಪಕ್ಷ ಪಾತ ಮುಕ್ತ ಕಸಾಪ ನನ್ನ ಗುರಿ: ಮುಲಾಲಿ

03:27 PM Nov 14, 2021 | Shwetha M |

ವಿಜಯಪುರ: ಶತಮಾನದ ಹಿಂದೆ ಹಿರಿಯರು ಮಹತ್ವಾಕಾಂಕ್ಷೆಯಿಂದ ಕಟ್ಟಿದ ಕನ್ನಡಿಗರ ಪ್ರಾತಿನಿಧಿಕ ಏಕೈಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್‌. ಇಂಥ ಸಂಸ್ಥೆ ಇದೀಗ ಸ್ವಜನ ಪಕ್ಷಪಾತ, ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಾಗಿ ಈ ದುರವಸ್ಥೆಗೆ ತೆರೆ ಎಳೆಯಲು ನಾನು ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ, ನನ್ನ ಪರ ರಾಜ್ಯದ ಮತದಾರರ ಸ್ಪಂದನೆ ಸಿಕ್ಕಿದೆ ಎಂದು ರಾಜಶೇಖರ ಮುಲಾಲಿ ಹೇಳಿದರು.

Advertisement

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸಾಮಾಜಿಕ ಹೋರಾಟಗಾರ ನಾನು, ಕನ್ನಡ ಸಾಹಿತ್ಯ ಪರಿಷತ್‌ ಕನ್ನಡ ನಾಡಿನ ಅಸ್ಮಿತೆ ಎಂಬ ಮೂಲ ಆಶಯವನ್ನು ಜನಮನದಲ್ಲಿ ಬಿತ್ತುವ ಕೆಲಸ ಮಾಡುತ್ತೇನೆ ಎಂದರು.

ಮೈಸೂರು ರಾಜ್ಯದ ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ, ಸರ್‌ ಎಂ.ವಿಶ್ವೇಶ್ವರಯ್ಯ ಅವರಿಂದ 1915ರಲ್ಲಿ ಚಾಲನೆ ಪಡೆದುಕೊಂಡ ಕನ್ನಡ ಸಾಹಿತ್ಯ ಪರಿಷತ್‌ ದೇಶದಲ್ಲೇ ಶತಮಾನ ಕಂಡ ಬೃಹತ್‌ ಸಂಖ್ಯೆಯ ಆಜೀವ ಸದಸ್ಯತ್ವ ಇರುವ ಸಂಸ್ಥೆ ಎಂಬ ಹಿರಿಮೆ ಹೊಂದಿದೆ. ಪರಿಷತ್‌ ಎಚ್‌.ವಿ. ನಂಜುಂಡಯ್ಯ, ಡಾ| ಮಾಸ್ತಿ, ಡಾ| ಹಂಪನಾ, ಪ್ರೊ| ಚಂಪಾ, ಡಾ| ಸಾ.ಶಿ.ಮರುಳಯ್ಯ, ರೇವರೆಂಡ್‌ ಉತ್ತಂಗಿ ಚನ್ನಪ್ಪ ಅವರಂಥ ಮಹನೀಯರು ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿ ಆ ಸ್ಥಾನಕ್ಕೆ ಘನತೆ, ಗೌರವ, ಗಾಂಭೀರ್ಯ ತಂದು ಕೊಟ್ಟಿದ್ದರು. ಆದರೆ ಕಾಲಾನಂತರದಲ್ಲಿ ಸಾಹಿತ್ಯ ಪರಿಷತ್‌ ರಾಜಕಾರಣದ ಸಂಕೋಲೆಗೆ ಸಿಲುಕಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಲ್ಲಿ ಮುಳುಗಿದೆ ಎಂದು ದೂರಿದರು.

ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್‌ ಸಂಸ್ಥೆ 4700 ಸ್ಥಳೀಯರನ್ನು ಕೆಲಸದಿಂದ ವಜಾ ಮಾಡಿತ್ತು. ಆಗ ಕನ್ನಡ ನೆಲದಲ್ಲಿ ಕನ್ನಡಿಗರನ್ನೇ ಒಕ್ಕಲೆಬ್ಬಿಸುವ ಕೃತ್ಯದ ವಿರುದ್ಧ ನಾನು ಹೋರಾಟ ಮಾಡಿದ್ದು, ಉದ್ಯೋಗ ಕಳೆದುಕೊಂಡ ಎಲ್ಲರೂ ಮರಳಿ ಕೆಲಸಕ್ಕೆ ಸೇರುವಂತೆ ಆಯಿತು. ಉಳಿದಂತೆ ನಾನು ಮಾಡಿರುವ ಹಾಗೂ ಮಾಡುತ್ತಿರುವ ಸಾಮಾಜಿಕ ಕೆಲಸಗಳು, ನನ್ನ ಬದ್ಧತೆಯ ಬಗ್ಗೆ ನಾಡಿನ ಜನರಿಗೆ ಅರಿವಿದೆ. ಹೀಗಾಗಿ ನನ್ನ ಬಗ್ಗೆ ಆವರಿಗೆ ಹೆಚ್ಚೇನು ಹೇಳುವ ಅಗತ್ಯವಿಲ್ಲ ಎಂದರು.

ಕನ್ನಡ ನಾಡಿನಲ್ಲಿಯೇ ಅತ್ಯಂತ ವಿಶಿಷ್ಟ, ಚರಿತ್ರಾರ್ಹ ನೆಲವಾಗಿರುವ ವಿಜಯಪುರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್‌ ಮತದಾರರು, ದಿನದ 24 ಗಂಟೆಯೂ ಕನ್ನಡ ಕಟ್ಟುವಿಕೆಗಾಗಿ ಬದುಕನ್ನು ಮೀಸಲೀಡಲು ತಯಾರಾಗಿರುವ ನನಗೆ ಮತ ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಲು ಬಂದಿದ್ದು, ಎಲ್ಲೆಡೆ ಉತ್ತಮ ಸ್ಪಂದನೆ ಸಿಕ್ಕಿದೆ. ಜನರ ಸ್ಪಂದನೆ ನನ್ನ ಅಯ್ಕೆಯನ್ನು ಸುಲಭಗೊಳಿಸುತ್ತಿದೆ ಎಂದರು.

Advertisement

ಕನ್ನಡ ನಾಡು ಕೂಡ ಹಲವು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಗಡಿ ಗಲಾಟೆ, ಅಂತರ ರಾಜ್ಯ ನೆಲ-ಜಲ ವಿವಾದಗಳು, ಖಾಸಗಿ ವಲಯದಲ್ಲಿ ಕನ್ನಡಿಗರ ಉದ್ಯೋಗದ ಸಮಸ್ಯೆ, ಗಡಿ ಭಾಗದ ಕನ್ನಡ ಶಾಲೆಗಳ ದು:ಸ್ಥಿತಿ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳು ನಾಡಿನ ತುಂಬ ಎದ್ದು ಕಾಣುತ್ತಿವೆ. ಇಂಥ ಸಮಸ್ಯೆಗಳ ಪರಿಹಾರಕ್ಕೆ ಆಳುವ ಸರ್ಕಾರಗಳನ್ನು ಬಡಿದೆಬ್ಬಿಸುವ ಯಾವೊಂದು ಪ್ರಾಮಾಣಿಕ ಚಟುವಟಿಕೆಗಳು ಕನ್ನಡ ಸಾಹಿತ್ಯ ಪರಿಷತ್‌ನ ಅಧಿಕಾರದಲ್ಲಿ ಇದ್ದವರಿಂದ ಆಗಿಲ್ಲ. ಕನ್ನಡಿಗರ ಆಸ್ಮಿತೆಯ ಕಸಾಪ ಸಂಸ್ಥೆ ಕುರ್ಚಿ ಮೇಲೆ ಕುಳಿತವರು ಇಂಥ ಸಮಸ್ಯೆಗಳು ತಮಗೆ ಸಂಬಂಧಿಸಿದ್ದಲ್ಲ ಎಂಬಂತಿದ್ದಾರೆ. ನಾನು ಗೆಲ್ಲುವುದರಿಂದ ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ತಡೆಯಲು ನಿರಂತರ ಹೋರಾಟ ನಡೆಯಲಿದೆ ಎಂದು ಹೇಳಿದರು.

ಕಸಾಪ ಕಚೇರಿ ಹಾಗೂ ಆಡಳಿತ ನಡೆಸಿದವರು ಪಾರದರ್ಶಕ ಆಡಳಿತಕ್ಕೆ ತೆರೆ ಎಳೆದಿದ್ದಾರೆ. ಭ್ರಷ್ಟಾಚಾರದ ಚಿಗುರು ಸಾಹಿತ್ಯ ಪರಿಷತ್‌ನ ಅಂಗಳದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆದಿದೆ. ಇವೆಲ್ಲದರ ಪರಿಣಾಮದಿಂದ ಯುವ ಜನಾಂಗ ಮತ್ತು ಇಚ್ಛಾಶಕ್ತಿಯುಳ್ಳ ಸಾಹಿತ್ಯಿಕ ಕೃಷಿಯಲ್ಲಿ ತೊಡಗಿರುವ ಯುವ ಪ್ರತಿಭೆಗಳು ಸಾಹಿತ್ಯ ಪರಿಷತ್‌ ಯಾವೊಂದು ವಲಯದಲ್ಲೂ ಗುರುತಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ಸಾಮಾಜಿಕ ಹೋರಾಟಗಾರನಾದ ನಾನು ಕಸಾಪದಲ್ಲಿನ ಭ್ರಷ್ಟಾ ಚಾರ, ಸ್ವಜನ ಪಕ್ಷಪಾತ ಮುಕ್ತ ವ್ಯವಸ್ಥೆ ಜಾರಿಗಾಗಿ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ನನ್ನ ಮೇಲೆ ಕಸಾಪ ಮತದಾರರಿಗೆ ವಿಶ್ವಾಸ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next