Advertisement
ಜಿಪಂ ಅಧ್ಯಕ್ಷೆ ಗೀತಮ್ಮ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಸಭೆಗೆ ನಿಗದಿಪಡಿಸಿದ್ದ 11 ಗಂಟೆ ಸಭೆಗೆ ಉಪಾಧ್ಯಕ್ಷೆ ಕೆ.ಯಶೋದಾ ಮತ್ತು ಮ್ಯಾಕಲಗಡ್ಡ ನಾರಾಯಣಸ್ವಾಮಿ, ತೂಪಲ್ಲಿ ನಾರಾಯಣಸ್ವಾಮಿ ಹಾಗೂ ದಳಸನೂರು ಶ್ರೀನಿವಾಸ್ ಮಾತ್ರವೇ ಹಾಜರಾಗಿದ್ದರು.
Related Articles
Advertisement
ಸಭೆ ನಡೆಸಲು ಪ್ರಯತ್ನ: ಅವಿಶ್ವಾಸ ಸಭೆಯನ್ನು ನಡೆಸಿ ಸೋಲುಂಟಾಗುವಂತೆ ಮಾಡಲು ಸಭೆಯಲ್ಲಿ ಹಾಜರಿದ್ದ ತೂಪಲ್ಲಿ ನಾರಾಯಣಸ್ವಾಮಿ, ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷೆ ಕೆ.ಯಶೋದಾರಿಗೆ ಸಭೆಯನ್ನು ಚರ್ಚೆಯ ಮೂಲಕ ಆರಂಭಿಸುವಂತೆ ಒತ್ತಡ ಹೇರಿದರು. ಆದರೆ, ಸಭೆ ಆರಂಭಿಸಲು ಕೋರಂ ಕೊರತೆ ಇರುವುದರಿಂದ ಸಾಧ್ಯವಿಲ್ಲ ಎಂದು ಹೇಳಲಾಯಿತು.
ಕೋರಂಗೆ ಅಗತ್ಯ ಸದಸ್ಯರ ಹಾಜರಾತಿ ಇಲ್ಲದಿದ್ದರಿಂದ ಅನಿವಾರ್ಯವಾಗಿ ಸಭೆ ಮುಂದೂಡುವ ನಿರ್ಧಾರವನ್ನು ಸಿಇಒ ತೆಗೆದುಕೊಳ್ಳಬೇಕಾಯಿತು. ಈ ನಿರ್ಧಾರ ತೆಗೆದುಕೊಂಡ ನಂತರ ಸಭೆಗೆ ಅಧ್ಯಕ್ಷರ ವಿರೋಧಿ ಬಣದ ಸದಸ್ಯರಾದ ಡಿ.ಕೆ.ಹಳ್ಳಿ ಸದಸ್ಯ ಬಿ.ಪಿ.ಮಹೇಶ್, ಕ್ಯಾಸಂಬಳ್ಳಿ ಸದಸ್ಯ ಜಯಪ್ರಕಾಶ್ ಮತ್ತು ಮುಳಬಾಗಿಲು ಆವಣಿಯ ಪ್ರಕಾಶ್ ರಾಮಚಂದ್ರ ಆಗಮಿಸಿದರಾದರೂ ಅವರನ್ನು ಹಾಜರಾತಿಗೆ ಪರಿಗಣಿಸಲಿಲ್ಲ.
ರೆಸಾರ್ಟ್, ಸುದೀರ್ಘ ಪ್ರವಾಸ: ಅವಿಶ್ವಾಸಕ್ಕೆ ಕರೆದಿದ್ದ ಸಭೆಗೆ ಕೋರಂ ಕೊರತೆ ಇರುವುದರಿಂದ ಸಭೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ. ಇದರಿಂದ ಅವಿಶ್ವಾಸ ಜೀವಂತವಾಗಿದೆ. ಅದಕ್ಕೆ ಸೋಲುಂಟಾಗುತ್ತದೆಯೆಂಬ ನಿರೀಕ್ಷೆಯಲ್ಲಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಅಧ್ಯಕ್ಷೆ ಗೀತಮ್ಮ ಸೇರಿ ಅವರ ಬಣದ ಸದಸ್ಯರು ಗುರುವಾರ ಸಂಜೆ ವೇಳೆಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಅಧ್ಯಕ್ಷರ ವಿರೋಧಿ ಬಣವೂ ಸುದೀರ್ಘ ಪ್ರವಾಸ ಮತ್ತು ರೆಸಾರ್ಟ್ ವಾಸ್ತವ್ಯದ ನಂತರ ಮನೆಗಳಿಗೆ ತೆರಳಿದ್ದಾರೆ. ಅವಿಶ್ವಾಸಕ್ಕೆ ಉಪಾಧ್ಯಕ್ಷೆ ಯಶೋದಾ ಸಹಿ ಹಾಕಿರುವುದರಿಂದ ಹಾಗೂ ಈಗ ಮುಂದೂಡಲ್ಪಟ್ಟಿರುವ ಸಭೆಯನ್ನು ಕರೆಯುವ ಜವಾಬ್ದಾರಿಯೂ ಉಪಾಧ್ಯಕ್ಷರ ಮೇಲೆಯೇ ಇರುವುದರಿಂದ ಅಧ್ಯಕ್ಷೆ ಗೀತಮ್ಮ ವಿರೋಧಿ ಬಣವು ಚಾಣಾಕ್ಷತನದಿಂದ ಚೆಂಡನ್ನು ತಮ್ಮ ಅಂಗಳದಲ್ಲಿಯೇ ಉಳಿಸಿಕೊಂಡಿದ್ದಾರೆ.
ಏಳು ದಿನಗಳ ಕಾಲಾವಕಾಶ ನೀಡಿದ ನಂತರ ಮುಂದಿನ ಸಭೆ ಕರೆಯಲು ಅವಕಾಶ ಇರುವುದರಿಂದ ಮುಂದಿನ 10 ದಿನಗಳ ಒಳಗಾಗಿ ಮತ್ತೂಂದು ಸಭೆ ಕರೆಯಲು ನಿರ್ಧರಿಸಲಾಗಿದೆ. ಅಷ್ಟರೊಳಗಾಗಿ ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟವಾದರೆ ಮಾತ್ರವೇ ಅಧ್ಯಕ್ಷೆ ಗೀತಮ್ಮರ ವಿರುದ್ಧದ ಅವಿಶ್ವಾಸಕ್ಕೆ ತೊಡಕುಂಟಾಗುತ್ತದೆ. ಇಲ್ಲವಾದರೆ ಮುಂದಿನ 10 ದಿನಗಳೊಳಗಾಗಿ ಮತ್ತೆ ಅವಿಶ್ವಾಸ ಮಂಡನೆ ಸಭೆ ನಡೆಯಬೇಕಾಗುತ್ತದೆ.
ಉರುಳಿಸುವ ಉಳಿಸುವ ಆಟ: ಅಧ್ಯಕ್ಷೆ ಗೀತಮ್ಮ ಅವರನ್ನು ಉರುಳಿಸುವ ಉಳಿಸುವ ಆಟದಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ಸ್ಪೀಕರ್ ರಮೇಶ್‌ಕುಮಾರ್ ಬಣಗಳು ರಾಜಕೀಯವಾಗಿ ಚಾಪೆ ಕೆಳಗೆ ರಂಗೋಲಿ ಕೆಳಗೆ ನುಗ್ಗುವ ಆಟವಾಡುತ್ತಿರುವುದು ಜಿಲ್ಲೆಯ ಜನತೆಗೆ ಚರ್ಚೆಯ ವಸ್ತುವಾಗಿದೆ. ಜಿಲ್ಲೆಯು ಬಿರು ಬೇಸಿಗೆಗೆ ಹೆಜ್ಜೆ ಇಡುತ್ತಿರುವಾಗಲೇ ಜಿಪಂ ಅಧ್ಯಕ್ಷೆ, ಉಪಾಧ್ಯಕ್ಷೆ,
ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಬೇಸಿಗೆಯನ್ನು ಎದುರಿಸುವ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮುಖಂಡರ ಸ್ವಪ್ರತಿಷ್ಠೆಗೆ ತಕ್ಕಂತೆ ಪ್ರವಾಸ, ರೆಸಾರ್ಟ್ ವಾಸ್ತವ್ಯಗಳಲ್ಲಿ ತೊಡಗಿರುವುದು ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗಿದೆ. ಇದೀಗ ಮತ್ತೆ ಅವಿಶ್ವಾಸ ಸಭೆ ಮುಂದೂಡಿರುವುದರಿಂದ ಹೊಸದಾಗಿ ಸಭೆಗೆ ದಿನಾಂಕ ನಿಗದಿಯಾಗುವವರೆಗೂ ಕುದುರೆ ವ್ಯಾಪಾರಕ್ಕೆ ಹೇರಳ ಅವಕಾಶ ಮಾಡಿಕೊಟ್ಟಂತಾಗಿದೆ.