Advertisement

ಪರ್ಸೆಂಟೇಜ್ ರಾಜಕಾರಣ; ಕಾಂಗ್ರೆಸ್ ‌ನವರು ಏನೂ ಮಾಡಿಯೇ ಇಲ್ವೇ ?: ಎಚ್.ಡಿ.ದೇವೇಗೌಡ

03:28 PM Apr 16, 2022 | Team Udayavani |

ಶ್ರೀರಂಗಪಟ್ಟಣ : ಪರ್ಸೆಂಟೇಜ್  ರಾಜಕಾರಣದಲ್ಲಿ ಯಾರು ಸತ್ಯವಂತರು ? ಅವರ ಮೇಲೆ ಇವರು, ಇವರ ಮೇಲೆ ಅವರು ಮಾತನಾಡುತ್ತಾರೆ.ಕಾಂಗ್ರೆಸ್ ‌ನವರು ಏನೂ ಮಾಡಿಯೇ ಇಲ್ಲವೇ ? ಯಾರು ಸಾಚ ಇದ್ದಾರೆ ಹೇಳಿ ? ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವ್ಯಂಗ್ಯವಾಡಿದ್ದಾರೆ.

Advertisement

ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ 10 % ಸರ್ಕಾರ ಅಂತ ಪ್ರಧಾನಿಯೇ ಆರೋಪ ಮಾಡಿದ್ದರು. ಆಗಲೂ ನಾನು ಆರೋಪ ಮಾಡಲಿಲ್ಲ. ಈಗಲೂ ಅಷ್ಟೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು.

ಭ್ರಷ್ಟಾಚಾರ ಎಲ್ಲ ಕಡೆ ತುಂಬಿ ಹೋಗಿದೆ. ರಾಜಕಾರಣ ಹೇಳಲಾಗದಷ್ಟು ಕೆಟ್ಟು ಹೋಗಿದೆ. ನೀರಿನ ವಿಚಾರ ಬಂದಾಗ ತಮಿಳುನಾಡಿನ ಎಲ್ಲ ಪಕ್ಷಗಳೂ ಒಂದಾಗುತ್ತವೆ ಆದರೆ ನಮ್ಮ ರಾಜ್ಯದಲ್ಲಿ ಯಾರೂ ಒಂದಾಗಲ್ಲ , ಮಹದಾಯಿ ವಿಚಾರದಲ್ಲೂ ಸಾಕಷ್ಟು ನೋವಿದೆ ಇದರ ಬೆನ್ನಲ್ಲೇ ಜಲ ಸಂಪನ್ಮೂಲ ಸಚಿವರು ನನಗೆ ಮೂರು ಬಾರಿ ಅಪಾಯಿಂಟ್ಮೆಂಟ್ ಕೊಟ್ಟರು. ಮನೆಗೆ ಹೋದಾಗ ಚಕ್ಕರ್ ಹಾಕಿದ್ದರು ಎಂದು ವ್ಯಂಗ್ಯವಾಡಿದರು.

ಬಿಜೆಪಿ ಜತೆ ಚುನಾವಣಾ ಪೂರ್ವ ಮೈತ್ರಿ ವಿಚಾರ, ಕೆಲವರು ಉತ್ಪ್ರೇಕ್ಷೆಯಿಂದ ಮಾತನಾಡುತ್ತಾರೆ. ಜೆಡಿಎಸ್ ಕಾರ್ಯಕ್ರಮಗಳನ್ನು ನೋಡಿ ಒಂದಲ್ಲಾ ಒಂದು ಬಣ್ಣ ಕಟ್ಟುತ್ತಾರೆ ನಮ್ಮ ಜೊತೆ ಬಿಜೆಪಿಯ ಯಾರಾದರೂ ಇಲ್ಲಿಗೆ ಬಂದಿದ್ದಾರಾ ? ಸುಮ್ಮನೆ ಯಾರೋ ಏನೋ ಹೇಳುತ್ತಾರೆ ಹೇಳಲಿ ಬಿಡಿ ಎಂದರು.

Advertisement

ಗುತ್ತಿಗೆದಾರರ ಸಂಘದಿಂದ ಪರ್ಸೆಂಟೇಜ್ ಆರೋಪ ವಿಚಾರ ನನಗೆ ಸಂಬಂಧವಿಲ್ಲ ನನ್ನ ಮಗ ಪಿಡಬ್ಲ್ಯೂಡಿ ಮಿನಿಸ್ಟರ್ ಆಗಿದ್ದಾನಾ ? ನೀರಾವರಿ ಸಚಿವ ಆಗಿದ್ದಾನಾ ? ಎಂದು ಪ್ರಶ್ನಿಸಿದರು. ನನ್ನ ಮಗ ಸಚಿವ ಆಗಿದ್ದರೆ ಮಾತನಾಡುತ್ತಿದ್ದೆ. ಆರೋಪ‌ ಮಾಡಿಕೊಳ್ಳಲಿ ಬಿಡಿ ನಮಗೇನು ? ಎಂದರು.

ಕೃಷ್ಣರಾಜ ಸಾಗರ ಜಲಾಶಯದ ಬಳಿ ಜನತಾ ಜಲಧಾರೆಗೆ ಚಾಲನೆಗೂ ಮುನ್ನ ಮಾಜಿ ಪ್ರಧಾನಿ ಡ್ಯಾಂ ಮುಂಭಾಗ ಇರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು. ಬಳಿಕ ಜಲಧಾರೆ ರಥಕ್ಕೆ ಚಾಲನೆ ನೀಡಿದರು.

ಪೂರ್ಣಕುಂಭ, ಕಲಾತಂಡದೊಂದಿಗೆ ದೇವೇಗೌಡರಿಗೆ ಸ್ವಾಗತ ನೀಡಲಾಯಿತು. ವೇದಬ್ರಹ್ಮ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಜಲಧಾರೆ ಕಾರ್ಯಕ್ರಮದ ಪೂಜಾ ವಿಧಿಗಳನ್ನು ನಡೆಸಲಾಯಿತು. ಜೆಡಿಎಸ್ ಶಾಸಕರಾದ ಸಿಎಸ್ ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ತಮ್ಮಣ್ಣ, ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next