ಬೆಂಗಳೂರು: ನಾಗರಿಕರಿಗೆ ಸಂವಿಧಾನಬದ್ಧವಾಗಿ ನೀಡಲಾಗಿರುವ ಹಕ್ಕುಗಳ ವಂಚನೆ ಮತ್ತು ಸರ್ಕಾರದ ಸೌಲಭ್ಯಗಳಿಗೆ ಲಂಚದ ಬೇಡಿಕೆ ಇಡುವುದು ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ. ಹೀಗಾಗಿ ಮಾನವಹಕ್ಕುಗಳ ವ್ಯಾಪಕ ಉಲ್ಲಂಘನೆಗೆ ಭ್ರಷ್ಟಾಚಾರ ಕಾರಣ ಎಂದು ಕರ್ನಾಟಕ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾ. ಎಸ್.ಆರ್. ನಾಯಕ್ ಹೇಳಿದ್ದಾರೆ.
“ಹ್ಯೂಮನ್ ರೈಟ್ಸ್ ಡಿಫೆಂಡರ್ ಫೋರಂ’ ವತಿಯಿಂದ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ಕುರಿತ ವಿಚಾರಸಂಕಿರಣ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಂಘಟನೆಗಳ ಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, “ಮಾನವಹಕ್ಕುಗಳ ರಕ್ಷಣೆಗೆ ಸಂವಿಧಾನವಿದೆ, ಕಾನೂನುಗಳಿವೆ. ಆದರೆ, ಸಮಾಜದ ಎಲ್ಲ ಹಂತಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿರುವ ಭ್ರಷ್ಟಾಚಾರ ಇದಕ್ಕೆ ಬಹುದೊಡ್ಡ ತೊಡಕಾಗಿದೆ.
ಹಾಗಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಾಗ ಮಾತ್ರ ಮಾನವ ಹಕ್ಕುಗಳ ಉಲ್ಲಂಘನೆ ತಡೆಯಲು ಸಾಧ್ಯ. ಭ್ರಷ್ಟಾಚಾರ ನಿರ್ಮೂಲನೆ ಮಾಡಿದರೆ ಮಾನವ ಹಕ್ಕುಗಳ ರಕ್ಷಣೆಯ ಜೊತೆಗೆ ಆತನ ವ್ಯಕ್ತಿ ಘನತೆಯನ್ನು ಎತ್ತಿಹಿಡಿಯಬಹುದು. ಇದಕ್ಕಾಗಿ ಸಮಾಜದ ಪ್ರತಿಯೊಬ್ಬರು ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಬೇಕು,’ ಎಂದು ನ್ಯಾ. ನಾಯಕ್ ಕರೆ ನೀಡಿದರು.
“ಮಾನವ ಹಕ್ಕುಗಳು ಮನುಷ್ಯನ ಏಳಿಗೆಗೆ ಮತ್ತು ಸಮಾಜದ ಪ್ರಗತಿಗೆ ಪೂರಕವಾಗಿದ್ದು, ದಬಾrಳಿಕೆ, ದೌರ್ಜನ್ಯ, ಅನ್ಯಾಯಗಳಿಂದ ನಲುಗುತ್ತಿರುವ ಪ್ರತಿಯೊಬ್ಬರನ್ನು ರಕ್ಷಿಸುವ ಧ್ಯೇಯ ಹೊಂದಿವೆ. ಆದರೆ, ಇತ್ತೀಚಿಗೆ ದೇಶ ಸೇರಿದಂತೆ ವಿಶ್ವದೆಲ್ಲಡೆ ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆ ನಡೆಯುತ್ತಿದೆ.
ಆ ಮೂಲಕ ಮನುಕುಲದ ಶಾಂತಿ ಮತ್ತು ಭದ್ರತೆ ಅಪಾಯಕ್ಕೊಳಗಾಗುತ್ತಿದೆ. ಹಾಗಾಗಿ ಮಾನವ ಹಕ್ಕುಗಳ ರಕ್ಷಣೆಗೆ ಕೇವಲ ಕಾನೂನುಗಳನ್ನು ಜಾರಿಗೆ ತಂದರೆ ಆಗದು, ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ವ್ಯವಸ್ಥೆ ಮತ್ತು ಸಮಾಜವನ್ನು ಜಾಗೃತಗೊಳಿಸಬೇಕು,’ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನುಗುಂದ್, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ, ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಡಾ. ಕೃಪಾ ಆಳ್ವ, ಹ್ಯೂಮನ್ ರೈಟ್ಸ್ ಡಿಫೆಂಡರ್ ಫೋರಂನ ರಾಜ್ಯಾಧ್ಯಕ್ಷ ಎನ್. ಶ್ರೀನಿವಾಸ ಮತ್ತಿತರರು ಇದ್ದರು.