Advertisement

ಭ್ರಷ್ಟಾಚಾರ, ಅನ್ಯಾಯ ಕೈ, ದಳದ ನೀತಿ, ಸಿದ್ಧಾಂತ

09:17 PM Nov 23, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಭ್ರಷ್ಟಾಚಾರ ಹಾಗೂ ಅನ್ಯಾಯ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ನೀತಿ, ಸಿದ್ಧಾಂತವಾಗಿದ್ದು, ಅಭಿವೃದ್ಧಿ ಹಾಗೂ ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ಕೊಡುವ ಬಿಜೆಪಿ ಪಕ್ಷವನ್ನು ಉಪ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಶ್ರಮ ವಹಿಸಿ ಗೆಲ್ಲಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ತಿಳಿಸಿದರು.

Advertisement

ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಶನಿವಾರ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪಕ್ಷಕ್ಕಾಗಿ ಹಗಲಿರುಳು ದುಡಿಯುವ ಕಾರ್ಯಕರ್ತರಿಗೆ ಟಿಕೆಟ್‌ ಕೊಡದೇ ಜೆಡಿಎಸ್‌ ಇಲ್ಲಿ ನೆಂಟರಿಗೆ ಟಿಕೆಟ್‌ ಕೊಟ್ಟಿದೆ. ನೆಂಟರು ಮನೆಯಲ್ಲಿ ಇರಬೇಕು, ಕಾರ್ಯಕರ್ತರು ರಾಜಕಾರಣದಲ್ಲಿ ಇರಬೇಕೆಂದು ಜೆಡಿಎಸ್‌ ವಿರುದ್ಧ ಸಂತೋಷ್‌ ವಾಗ್ಧಾಳಿ ನಡೆಸಿದರು.

ಜಿಲ್ಲೆಯಲ್ಲಿ ಕಮಲ ಖಾತೆ ತೆರೆಯಬೇಕು: ಅನರ್ಹ ಶಾಸಕರು ಕೈಗೊಂಡ ದೃಢ ನಿರ್ಧಾರದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಪಕ್ಷದ ಕಾರ್ಯಕರ್ತರು ಅವರ ಬೆಂಬಲಕ್ಕೆ ನಿಲ್ಲಬೇಕು. ರಾಜ್ಯದಲ್ಲಿ ಚಿಕ್ಕಬಳ್ಳಾಪುರ, ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆದಿಲ್ಲ. ಈ ಉಪ ಚುನಾವಣೆ ಮೂಲಕ ಚಿಕ್ಕಬಳ್ಳಾಪುರ ಹಾಗೂ ಮಂಡ್ಯದಲ್ಲಿ ಕಮಲ ತನ್ನ ಖಾತೆ ತೆರೆಯಬೇಕಿದೆ. ಆ ಮೂಲಕ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ರನ್ನು ಗೆಲ್ಲಿಸಿ ಪಕ್ಷದ ಕಾರ್ಯಕರ್ತರು ಹೊಸ ರಾಜಕೀಯ ಇತಿಹಾಸ ಸೃಷ್ಟಿಸಬೇಕೆಂದರು.

ಸ್ಥಿರ ಸರ್ಕಾರ: ಭ್ರಷ್ಟಾಚಾರ ಹಾಗೂ ಅನ್ಯಾಯವನ್ನು ಮೈತುಂಬಿಕೊಂಡಿರುವ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಿಗೆ ಮತದಾರರು ತಕ್ಕಪಾಠ ಕಲಿಸಬೇಕೆಂದರು. 2020 ರೊಳಗೆ ದೇಶದಲ್ಲಿ ಪ್ರತಿಯೊಬ್ಬರಿಗೂ ಮನೆ, ವಿದ್ಯುತ್‌, ಶೌಚಾಲಯ, ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸ್ಥಿರ ಸರ್ಕಾರ ನೀಡುತ್ತಿದ್ದು, ಕನಕಪುರದಲ್ಲಿ ಜೋಡಿ ರಸ್ತೆ ಆಗಿದ್ದರೆ ಅದು ಯಡಿಯೂರಪ್ಪ ಕಾಲದಲ್ಲಿ ಮಾತ್ರ ಎಂದು ಮಾಜಿ ಸಚಿವ ಡಿಕೆಶಿಗೆ ಟಾಂಗ್‌ ನೀಡಿದರು.

ವೇದಿಕೆಯಲ್ಲಿ ಸಂಸದ ಪಿ.ಸಿ.ಮೋಹನ್‌, ತಿಪಟೂರು ಶಾಸಕ ನಾಗೇಶ್‌, ಕಡೂರು ಶಾಸಕ ಬೆಳ್ಳಿ ಪ್ರಕಾಶ್‌, ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ, ಪಕ್ಷದ ಜಿಲ್ಲಾಧ್ಯಕ್ಷ ಡಾ.ಜಿ.ವಿ.ಮಂಜುನಾಥ, ಉಸ್ತುವಾರಿಗಳಾದ ಶಿವಕುಮಾರ್‌, ಗೀತಾ, ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಶೇಖರ್‌ ಉಪಸ್ಥಿತರಿದ್ದರು.

Advertisement

ಗುಪ್ತಚರ ವರದಿಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾತನಾಡಿ, ಗುಪ್ತಚರ ಇಲಾಖೆ ವರದಿ ಪ್ರಕಾರ ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಬರಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು. ಪಕ್ಷಾಂತರವಾಗಿರುವ ಅನರ್ಹ ಶಾಸಕರನ್ನು ಗೆಲ್ಲಿಸುವ ಹೊಣೆ ಪಕ್ಷದ ಕಾರ್ಯಕರ್ತರ ಮೇಲಿದೆ.

ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಜನ ನಾಯಕರನ್ನಾಗಿ ಮಾಡುವ ಪಕ್ಷ ಬಿಜೆಪಿ. ಪರಿಶ್ರಮ ಹಾಗೂ ನಿಷ್ಠೆ ತೋರುವ ಕಾರ್ಯಕರ್ತರಿಗೆ ಸ್ಥಾನಮಾನ ಸಿಕ್ಕೇ ಸಿಗುತ್ತದೆ. ಅದಕ್ಕೆ ನಾನೇ ನಿರ್ದೇಶನ. ಸುಳ್ಳಿನ ಸರದಾರ ವೀರಪ್ಪ ಮೊಯ್ಲಿರನ್ನು ಮನೆಗೆ ಕಳುಹಿಸಿದ್ದು ಆಯಿತು. ಈಗ ಕ್ಷೇತ್ರದಲ್ಲಿ ವಿಳಾಸ ಇಲ್ಲದವರು ಸ್ಪರ್ಧಿಸಿದ್ದು, ಅಭಿವೃದ್ಧಿ ಹಾಗೂ ಸ್ವಾಭಿಮಾನದ ದೃಷ್ಟಿಯಿಂದ ಬಿಜೆಪಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್‌, ಜೆಡಿಎಸ್‌ ಅಪವಿತ್ರ ಮೈತ್ರಿ – ಸುಧಾಕರ್‌: ಸಭೆಯಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌, ಕಾಂಗ್ರೆಸ್‌, ಜೆಡಿಎಸ್‌ ಯಾವುದೇ ಆಶಯಕ್ಕಾಗಿ ಅಥವಾ ಸಿದ್ಧಾಂತಕ್ಕೆ ಮೈತ್ರಿ ಮಾಡಿಕೊಳ್ಳದೇ ಅಧಿಕಾರ ದಾಹಕ್ಕೆ ಅಪವಿತ್ರ ಮೈತ್ರಿ ಮಾಡಿಕೊಂಡಿತ್ತು ಎಂದು ವಾಗ್ಧಾಳಿ ನಡೆಸಿದರು. ಸ್ವಾಭಿಮಾನಕ್ಕಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ ವಿನಃ ಯಾವುದೇ ಆಸೆ, ಆಮಿಷಕ್ಕೆ ಅಲ್ಲ. ಜನರ ವಿರೋಧ ಕಟ್ಟಿಕೊಂಡು ಯಾರು ಅಧಿಕಾರ ನಡೆಸಬಾರದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ಚಿಕ್ಕಬಳ್ಳಾಪುರದಲ್ಲಿ ಕಮಲದ ಶಕ್ತಿ ಕಡಿಮೆ ಇರಬಹುದು. ಆದರೆ ಕ್ಷೇತ್ರದ ಜನ ಸ್ವಾಭಿಮಾನಿಗಳು. ಈಗಾಗಲೇ ನಾಮಪತ್ರ ಸಲ್ಲಿಸುವ ವೇಳೆ ಕೇಸರಿ ಶಕ್ತಿ ಪ್ರದರ್ಶನ ಆಗಿದೆ ಎಂದರು. ನಿಜವಾದ ದೇಶ ಪ್ರೇಮ ಬಿಜೆಪಿಯಿಂದ ಕಲಿಯಬೇಕು. ಕಾಂಗ್ರೆಸ್‌ಗಿಂತ ಸಾಮಾಜಿಕ ನ್ಯಾಯ, ಸಮಾನನೆಗೆ ಬಿಜೆಪಿ ಒತ್ತು ಕೊಡುತ್ತಿದೆ. ಮಂತ್ರಿಯಾದವರು ರಾಜ್ಯಕ್ಕೆ ಮಂತ್ರಿ. ಆದರೆ ಒಂದು ತಾಲೂಕಿಗೆ ಮಂತ್ರಿ ಅಲ್ಲ ಎಂದು ಹೇಳುವ ಮೂಲಕ ಜಿಲ್ಲೆಯಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ವಿರೋಧಿಸಿದ್ದ ಮಾಜಿ ಸಚಿವ ಡಿಕೆಶಿ ವಿರುದ್ಧ ಕಿಡಿಕಾರಿದರು.

ಹೆಚ್ಚು ಸ್ಥಾನ ಗೆದ್ದವರಿಗೆ ಅಧಿಕಾರ: ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದ ಬಿ.ಎಲ್‌.ಸಂತೋಷ್‌, ಹೆಚ್ಚು ಸೀಟು ಗೆದ್ದವರಿಗೆ ಅಧಿಕಾರ ಬಿಡಬೇಕು. ಅದೇ ರೀತಿ ಬಿಜೆಪಿ ಪರ ಜನಾದೇಶ ಇತ್ತು. ಹಾಗಾಗಿ ಪಕ್ಷ ಅಧಿಕಾರ ಹಿಡಿದಿದೆ. ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರ ರಚನೆ ಕೂಡ ಅದೇ ರೀತಿ ಆಗಿದ್ದು, ಈಗ ಮಹಾರಾಷ್ಟ್ರದಲ್ಲಿ ಅದೇ ಆಯಿತು ಎಂದರು. ನಮ್ಮ ಜೊತೆ ಇದ್ದು ಅಧಿಕಾರ ತಪ್ಪಿಸಲು ನಡೆಸಿದ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಜನರ ಅಶೀರ್ವಾದದಂತೆ ಅತಿ ದೊಡ್ಡ ಪಕ್ಷ ಅಧಿಕಾರಕ್ಕೆ ಬರಬೇಕು. ಅದೇ ರೀತಿ ಈಗ ಮಹಾರಾಷ್ಟ್ರದಲ್ಲಿ ಆಗಿದ್ದು, ಹಲವು ಪಕ್ಷಗಳಿಗೆ ಪಾಠ ಆಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next