Advertisement

ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಭ್ರಷ್ಟಾಚಾರ: ಆರೋಪ

04:33 PM May 21, 2022 | Team Udayavani |

ದೇವನಹಳ್ಳಿ: ವಿಜಯಪುರ ಹೋಬಳಿ ಭಟ್ರೇನಹಳ್ಳಿ ಕೆರೆಕಟ್ಟೆಯ ಪಕ್ಕದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಭಟ್ರೇನಹಳ್ಳಿ ಕೆರೆಕಟ್ಟೆಯನ್ನು ಸ್ವಾರ್ಥ ಲಾಭಕ್ಕಾಗಿ ಬೃಹತ್‌ ಯಂತ್ರಗಳ ಮೂಲಕ ಒಡೆದು ಮಣ್ಣು ತೆಗೆದು ಶಿಥಿಲಗೊಳಿಸಿದ್ದು, ಕಟ್ಟೆ ಮೇಲೆ ಸುಮಾರು ವರ್ಷಗಳಿಂದ ಬೆಳೆದಿದ್ದ ಮರಗಳನ್ನು ಮನಸೋ ಇಚ್ಛೆ ಮುರಿದು ಬಿಸಾಡಿದ್ದಾರೆ. ಕಟ್ಟೆ ಕೆಳಗಿರುವ ಚರಂಡಿಯನ್ನು ಭಾಗಶಃ ಕಿತ್ತು ಹಾಕಿದ್ದು, ಮಣ್ಣು ಮುಚ್ಚಿ ಸಾರ್ವಜನಿಕ ಆಸ್ತಿಗೆ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳು ಹಾನಿ ಮಾಡಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ ಜಿಲ್ಲಾ ಉಸ್ತುವಾರಿ ಬಿ.ಕೆ.ಶಿವಪ್ಪ ಆರೋಪಿಸಿದ್ದಾರೆ.

Advertisement

ಮೂರು ಕಾಮಗಾರಿಗಳ ವೆಚ್ಚವು 25 ಕೋಟಿ ರೂ. ಆಗಿದ್ದು, ಇದು ಸಾರ್ವಜನಿಕರ ತೆರಿಗೆ ಹಣವಾಗಿರುವುದರಿಂದ ಪೋಲಾಗುತ್ತಿರುವುದನ್ನು ಗಮನಿಸಿ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ಮನವಿ ಸಲ್ಲಿಸುವುದರ ಮೂಲಕ ತನಿಖೆಗೆ ಆಗ್ರಹಿಸಲಾಗಿದೆ.

ಕಾಮಗಾರಿಯೂ ಸಂಪೂರ್ಣವಾಗಿ ಕಳಪೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವುದರಿಂದ ಜಿಲ್ಲಾಧಿಕಾರಿ ಕೂಡಲೇ ತನಿಖೆ ಕೈಗೊಳ್ಳಬೇಕು. ಕ್ಷೇತ್ರದ ಜೆಡಿಎಸ್‌ ಶಾಸಕರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ: ವಿಧಾನಸಭಾ ಕ್ಷೇತ್ರದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಕ್ರಾಸ್‌ ನಿಂದ ರಾಜಾನುಕುಂಟೆ ಕ್ರಾಸ್‌ ರಸ್ತೆ ಅಗಲೀಕರಣ ದುರಸ್ತಿ, ವಿಜಯಪುರದಿಂದ ಭಟ್ರೇನಹಳ್ಳಿ ಗಡಿವರೆಗೂ ಶಿಡ್ಲಘಟ್ಟ ರಸ್ತೆ ಅಗಲೀಕರಣ ಮತ್ತು ವಿಜಯಪುರ ಬೈಪಾಸ್‌ ರಸ್ತೆ ಅಗಲೀಕರಣ ದುರಸ್ತಿ ಕಾಮಗಾರಿಗಳ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಠಾಣೆಗೆ ದೂರು: ಈಗಾಗಲೇ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌, ಜಿಪಂ ಸಿಇಒ ಕೆ.ರೇವಣಪ್ಪ, ದೇವನಹಳ್ಳಿ ತಾಪಂ ಇಒ ಎಚ್‌.ಡಿ.ವಸಂತ್‌ಕುಮಾರ್‌, ತಹ ಶೀಲ್ದಾರ್‌ ಶಿವರಾಜ್‌, ಎಇಇ ರವೀಂದ್ರಸಿಂಗ್‌, ಜಿಪಂ ಎಇಇ ಕೃಷ್ಣಕುಮಾರ್‌, ವಲಯ ಅರಣ್ಯಾಧಿಕಾರಿ ಧನಲಕ್ಷ್ಮೀ, ಸಂಬಂಧಪಟ್ಟ ಗ್ರಾಪಂ ಪಿಡಿಒ ಮತ್ತು ವಿಜಯಪುರ ಪೊಲೀಸ್‌ ಠಾಣೆಗೆ ಲಿಖಿತ ದೂರವನ್ನು ಸಲ್ಲಿಸಲಾಗಿದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಕಾಮಗಾರಿ ಹೆಸರಿನಲ್ಲಿ ಆಗುತ್ತಿರುವ ಮತ್ತು ಆಗಿರುವ ಭ್ರಷ್ಟಾಚಾರದ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next