ಹಾಸನ: ಹಿರಿತನ ಕಡೆಗಣಿಸಿ ನೋಂದಣಿ ಮಾಡುವುದು ಸೇರಿದಂತೆ ಹಾಸನದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದರು.
ಹಾಸನದ ಕುವೆಂಪು ನಗರದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಮಾಹಿತಿ ಪಡೆದ ಅವರು, ಸಬ್ ರಿಜಿಸ್ಟ್ರಾರ್ ಮತ್ತು ಜಿಲ್ಲಾ ರಿಜಿಸ್ಟ್ರಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಶೇ.10 ಲಂಚ: ಕಳೆದ ಏಪ್ರಿಲ್‌ನಿಂದ ಆನ್ ಲೈನ್‌ನಲ್ಲಿ ಮನವಿ ಸಲ್ಲಿಸಿ ಹಿರಿತನ ಆಧರಿಸಿ ನೋಂದಣಿ ಮಾಡಬೇಕು. ಆದರೆ ಹಾಸನ ಸಬ್‌ರಿಜಿಸ್ಟರ್ ಕಚೇರಿಯಲ್ಲಿ ಹಿರಿತನ ಪಾಲಿಸದರೆ ಲಂಚ ಕೊಟ್ಟವರಿಗೆ ನೋಂದಣಿ ಮಾಡಲಾಗುತ್ತಿದೆ. 10 ಲಕ್ಷ ರೂ. ಆಸ್ತಿ ನೋಂದಣಿಗೆ 10 ಸಾವಿರ ರೂ., 20 ಲಕ್ಷ ರೂ. ಆಸ್ತಿ ನೋಂದಣಿಗೆ 20 ಸಾವಿರ ರೂ. ನಂತೆ ಶೇ.10 ರಷ್ಟು ಲಂಚದ ವ್ಯವಹಾರ ನಡೆಯುತ್ತಿದೆ ಎಂಬ ದೂರಿದೆ.
ಏಜೆಂಟರ್ಯಾರು ತಿಳಿಸಿ: ಪ್ರತಿ ತಿಂಗಳೂ 4 ಲಕ್ಷ ರೂ.ಗಳನ್ನು ಮಾಮೂಲಿ ಕೊಡಬೇಕೆಂದು ನೋಂದಣಿಗೆ ಬರುವವರನ್ನು ಸುಲಿಗೆ ಮಾಡಲಾಗುತ್ತಿದೆ. ಯಾರಿಗೆ ಪ್ರತಿ ತಿಂಗಳೂ ಯಾವ ರಾಜಕಾರಣಿಗೆ ಅಥವಾ ಅಧಿಕಾರಿಗೆ ಮಾಮೂಲಿ ಕೊಡುತ್ತಿದ್ದೀರಿ ಹೇಳಿ. ಲಂಚ ವಸೂಲಿಗೆ ಕಚೇರಿಯಲ್ಲಿಯೇ ಒಬ್ಬ ಏಜೆಂಟ್‌ನನ್ನು ನೇಮಿಸಿಕೊಂಡಿದ್ದೀರಿ ಎಂಬ ಮಾಹಿತಿ ಇದೆ. ಯಾರು ಆತ ತಿಳಿಸಿ ಎಂದು ಪಟ್ಟು ಹಿಡಿದರು.
ನಿಯಮ ಉಲ್ಲಂಘಿಸಿದ್ದೀರಿ: ಸೋಮವಾರ ನೋಂದಣಿಯಾಗಿರುವ ಮಾಹಿತಿ ಪಡೆದ ರೇವಣ್ಣ, ಬೆಳಗ್ಗೆ 9 ಗಂಟೆಯಿಂದ 11 ಗಂಟೆವರೆಗೆ 7 ನೋಂದಣಿಯಾಗಿದ್ದು, ಸಂಜೆ 5 ಗಂಟೆಗೆ ನೋಂದಣಿಯಾಗಬೇಕಾಗಿದ್ದ 71ನೇ ಪ್ರಕರಣದ ನೋಂದಣಿ 11 ಗಂಟೆ ಯೊಳಗೆ ಮುಗಿದಿದೆ. ಕೇವಲ ಎರಡು ಗಂಟೆಯಲ್ಲೇ ಎರಡು ಹಿರಿತನದ ಪ್ರಕರಣ ಗಳನ್ನು ಏಕೆ ನಿಯಮ ಉಲ್ಲಂ ಸಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ರಿಜಿಸ್ಟರ್ ಅವರನ್ನೂ ಕಚೇರಿಗೆಕರೆಸಿಕೊಂಡು ಅಕ್ರಮಗಳ ಬಗ್ಗೆ ತರಾಟೆಗೆ ತೆಗೆದುಕೊಂಡ ಅವರು ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ದುದ್ದ ಮತ್ತು ಶಾಂತಿಗ್ರಾಮ ಹೋಬಳಿಗಳ ಜನರು ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರೂ ಹಿರಿತನ ಕಡೆಗಣಿಸಿ ತಿಂಗಳುಗಟ್ಟಲೆ ನೋಂದಣಿ ಮಾಡದೆ ಸತಾಯಿಸುತ್ತಿದ್ದೀರಿ. ಹಾಗೆಯೇ ಸಕಲೇಶಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಹಾಸನ ತಾಲೂಕು ಕಟ್ಟಾಯ ಹೋಬಳಿ ಜನರ ಪ್ರಕರಣಗೂ ಸಕಾಲದಲ್ಲಿ ನೋಂದಣಿಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಮಾರು ಅರ್ಧಗಂಟೆ ಕಚೇರಿಯಲ್ಲಿಯೇ ಕುಳಿತು ಸಬ್ ರಿಜಿಸ್ಟ್ರಾರ್, ರಿಜಿಸ್ಟಾರ್‌ರನ್ನು ತರಾಟೆಗೆ ತೆಗೆದುಕೊಂಡ ರೇವಣ್ಣ ಅವರು, ಯಾವುದೋ ರಾಜಕಾರಣಿಯ ಒತ್ತಡಕ್ಕೆ ಮಣಿದು ಏಜೆಂಟರನ್ನು ಇಟ್ಟುಕೊಂಡು ಜನರಿಂದ ವಸೂಲಿ ಮಾಡಿ ಪ್ರತಿ ತಿಂಗಳೂ ಮಾಮೂಲಿ ಕೊಡುವುದನ್ನು ಬಿಡಿ. ಇಲ್ಲದಿದ್ದರೆ ನನ್ನ ಜನರನ್ನು ಬಿಟ್ಟು ಕಮಿಷನ್ ಏಜೆಂಟರನ್ನು ಅಟ್ಟಾಡಿಸಿ ಹೊಡೆಸುತ್ತೀನಿ ಎಂದು ಎಚ್ಚರಿಕೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಅನಿವಾರ್ಯ ಸಂದರ್ಭಗಳಲ್ಲಿ ಒಂದೆರಡು ಪ್ರಕರಣಗಳನ್ನು ಹಿರಿತನ ಕಡೆಗಣಿಸುವುದನ್ನು ಸಹಿಸಬಹುದು. ಆದರೆ ಲಂಚಕ್ಕಾಗಿ ನಿಯಮ ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಇನ್ನು ಮುಂದೆ ಹಾಸನದ ಯಾವುದೇ ಕಚೇರಿಯಲ್ಲಿಯೂ ಭ್ರಷ್ಟಾಚಾರ ನಡೆಯದಂತೆ ಹದ್ದಿನ ಕಣ್ಣಿಡುತ್ತೇವೆ ಎಂದು ಹೇಳಿದರು.