Advertisement

ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತಾಂಡವ: ನ್ಯಾ|ನಾಗರಾಜ

11:39 AM Oct 08, 2018 | Team Udayavani |

ಕಲಬುರಗಿ: ನ್ಯಾಯಾಂಗ, ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳು ಸದ್ಯ ಕಲುಷಿತಗೊಂಡಿವೆ. ಭ್ರಷ್ಟಾಚಾರ, ಜಾತೀಯತೆ ಹಾಗೂ ಪಕ್ಷಪಾತ ತುಂಬಿಕೊಂಡಿದೆ ಎಂದು ಹೈಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಗಂಗಾವತಿ ವಿಷಾದ ವ್ಯಕ್ತಪಡಿಸಿರು.

Advertisement

ನಗರದ ಭವಾನಿ ನಗರದ ಬಬಲಾದ ಮಠದ ಶ್ರೀ ಗುರು ಚನ್ನವೀರೇಶ್ವರ ಮಂಟಪದಲ್ಲಿ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘ ಹಮ್ಮಿಕೊಂಡಿದ್ದ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸಹಾಯಕ ಭದ್ರತಾ ನಿರೀಕ್ಷಕರಾಗಿ ಸೇವಾ ನಿವೃತ್ತಿ ಹೊಂದಿದ ಕುಪೇಂದ್ರ ಬಿರಾದಾರ ಮರಗುತ್ತಿ ಅವರ ಸನ್ಮಾನ ಸಮಾರಂಭದ ಅಂಗವಾಗಿ ರವಿವಾರ ವಿವಿಧ ಕ್ಷೇತ್ರಗಳ ಸಾಧಕರಿಗೆ “ಮೋಡದಲ್ಲಿ ಮಿನುಗುವ ನಕ್ಷತ್ರ’ ಪ್ರಶಸ್ತಿ ಪ್ರದಾನ ಹಾಗೂ ಗೌರವ ಸತ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು 30 ವರ್ಷಗಳ ಹಿಂದೆ ಕಠಿಣ ಕಾನೂನು ಜಾರಿಯಾಗಿದೆ. ಆದರೂ ಭ್ರಷ್ಟಾಚಾರ ಮಾತ್ರ ಹೆಚ್ಚಾಗುತ್ತಲೇ ಇದೆ. ಉನ್ನತ ಹುದ್ದೆಗೇರಿದ ನ್ಯಾಯಮೂರ್ತಿಗಳೂ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗುತ್ತಿದ್ದಾರೆ. ಇದೇ ರೀತಿ ಶಿಕ್ಷಣ, ಆರೋಗ್ಯ, ಸಾಹಿತ್ಯ ಮತ್ತು ಮಠ-ಮಾನ್ಯಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಶೇ.90ರಷ್ಟು ರಾಜಕಾರಣಿಗಳು ಭ್ರಷ್ಟರಿದ್ದಾರೆ ಎಂದು ಹೇಳಿದರು. 

ಭ್ರಷ್ಟಾಚಾರವನ್ನು ಹೀಗೆ ಬಿಟ್ಟರೆ ಭವಿಷ್ಯತ್‌ ನಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಭ್ರಷ್ಟಾಚಾರ ವಿರುದ್ಧ ಯುವಕರು ಈಗಲೇ ಜಾಗೃತಗೊಳ್ಳಬೇಕು. ಆಯಸ್ಸು, ಆರೋಗ್ಯ ಮತ್ತು ಅವಕಾಶ ಬಳಸಿಕೊಂಡು ಭ್ರಷ್ಟಾಚಾರ ತೊಡೆದು ಹಾಕಲು ಹೋರಾಡಲು ಸ್ವಾಮೀಜಿಗಳು, ಹಿರಿಯರು, ಸಾರ್ವಜನಿಕರು ಸಾಥ್‌ ನೀಡಬೇಕು ಎಂದು ಹೇಳಿದರು.

ಮಾಜಿ ಸಚಿವ ಎಸ್‌.ಕೆ. ಕಾಂತಾ ಮಾತನಾಡಿ, ಉತ್ತಮ ಸಮಾಜಕ್ಕೆ ಸಮಾನತೆಯೇ ಪ್ರಮುಖವಾಗಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆ ಇದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು. 

Advertisement

ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು, ಯಳಸಂಗಿಯ ಮುತ್ಯಾನ ಬಬಲಾದನ ಗುರುಪಾದಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.

ಪ್ರಶಸ್ತಿ ಪುರಸ್ಕೃತರು: ನ್ಯಾಯವಾದಿ ಸುಭಾಷ್‌ ಚಂದ್ರ ಬಾಣಿ (ಕಾನೂನು), ನರರೋಗ ತಜ್ಞ ಡಾ| ಅನಿಲಕುಮಾರ ಬಿ. ಪಾಟೀಲ (ವೈದ್ಯಕೀಯ), ಮಹಾಂತಪ್ಪ ಎಂ. ಬಿರಾದಾರ (ಸಮಾಜ ಸೇವೆ), ಶ್ರೀಶೈಲ ಪವಾಡಶೆಟ್ಟಿ (ಸಮಾಜಸೇವೆ), ಸೂರ್ಯಕಾಂತ ಪೋದ್ದಾರ (ಶಿಕ್ಷಣ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಗೌರವ ಸತ್ಕಾರ: ಮಲ್ಲಿಕಾರ್ಜುನ ಎಸ್‌. ಧೂಳಬಾ ಫೀರೋಜಾಬಾದ್‌ (ಕೃಷಿ, ಸಮಾಜ ಸೇವೆ), ಕಸ್ತೂರಬಾಯಿ ಎಸ್‌. ಕಲ್ಲಾ(ರಾಜಕೀಯ), ಕ್ಷೇಮಲಿಂಗ ಸಲಗರ (ಸಮಾಜ ಸೇವೆ), ಸಂಗಮೇಶ ವೈ. ಹೂಗಾರ(ಸಾಹಿತ್ಯ), ಸಂಗಣ್ಣಗೌಡ ಸಿದ್ದಗೊಂಡ (ಆರೋಗ್ಯ ಸೇವೆ) ಅವರನ್ನು ಸತ್ಕರಿಸಲಾಯಿತು. 

ನ್ಯಾಯವಾದಿ ಹಣಮಂತರಾಯ ಎಸ್‌. ಅಟ್ಟೂರ ಅಧ್ಯಕ್ಷತೆ ವಹಿಸಿದ್ದರು. ದಾಲ್‌ಮಿಲ್‌ ಅಸೋಸಿಯೇಶನ್‌ ಅಧ್ಯಕ್ಷ ಡಾ| ಚಿದಂಬರರಾವ್‌ ಪಾಟೀಲ ಮರಗುತ್ತಿ, ಗುಂಡಣ್ಣ ಡಿಗ್ಗಿ, ರೇವಣಸಿದ್ದಯ್ಯ ಸ್ವಾಮಿ, ಡಾ| ಬಾಬುರಾವ್‌ ಶೇರಿಕಾರ್‌, ಶ್ರಾವಣಕುಮಾರ ಮಠ, ಶರಣು ಜೆ. ಪಾಟೀಲ, ದೇವಿಂದ್ರಪ್ಪ ಗೋಗಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next