Advertisement

ಭ್ರಷ್ಟಚಾರ ಮುಕ್ತ ಸಮಾಜ ನಿರ್ಮಾಣ: ಪತ್ರಕರ್ತರ ಪಾತ್ರ ಪ್ರಮುಖ

07:50 AM Aug 03, 2017 | Team Udayavani |

ಮಡಿಕೇರಿ: ಭ್ರಷ್ಟಾಚಾರದಿಂದ ಹಾದಿ ತಪ್ಪುತ್ತಿರುವ ಸಮಾಜವನ್ನು ಸರಿದಾರಿಗೆ ತರುವ ಹಕ್ಕು ಮತ್ತು ಕರ್ತವ್ಯ ಮಾಧ್ಯಮ ಕ್ಷೇತ್ರದ ಮೇಲಿದೆ ಎಂದು ಮಾಜಿ ಅರಣ್ಯ ಸಚಿವರಾದ ಬಿ.ಎ. ಜೀವಿಜಯ ಅಭಿಪ್ರಾಯಪಟ್ಟಿದ್ದಾರೆ.

Advertisement

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕೊಡಗು ಪ್ರಸ್‌ ಕ್ಲಬ್‌ನ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ  ಭವನದ   ಸಭಾಂಗಣದಲ್ಲಿ   ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ವ್ಯವಸ್ಥೆಯಲ್ಲಿನ ಬೆಳವಣಿಗೆಗಳು ಆತಂಕವನ್ನು ಹುಟ್ಟು ಹಾಕುತ್ತಿದ್ದು, ದಾರಿ ತಪ್ಪುತ್ತಿರುವ ವ್ಯವಸ್ಥೆಯನ್ನು ಸರಿದಾರಿಗೆ ತರುವುದು ನ್ಯಾಯಾಂಗ ವ್ಯವಸ್ಥೆಯಿಂದ ಮಾತ್ರ ಸಾಧ್ಯವೆ ಎಂದು ಪ್ರಶ್ನಿಸಿದರು.

ಪ್ರಜಾಸತ್ತಾತ್ಮಕ ವ್ಯವಸ್ಥೆಯಡಿ   ಜನತೆ  ನೀಡಿದ ಅಧಿಕಾರದ ಹಕ್ಕನ್ನು ತನ್ನದೇ ಎಂದು ಪರಿಭಾವಿಸುವ ದುರಾಲೋಚನೆ ಅತ್ಯಂತ ಗಂಭೀರ‌ ಮತ್ತು ಆತಂಕಕಾರಿ. ಹಣಬಲದಿಂದ ಅಧಿಕಾರವನ್ನು ಪಡೆದವರು, ಪಡೆದ ಅಧಿಕಾರವನ್ನು ಬಳಸಿಕೊಂಡು ಶೋಷಣೆಯ ಮೂಲಕ ತಮ್ಮ ಸಂಪತ್ತನ್ನು ವೃದ್ಧಿಸಿಕೊಳ್ಳುತ್ತಿರುವ ಆತಂಕ ನಮ್ಮ ಮುಂದಿದೆ. ಈ ಹಿನ್ನೆಲೆಯಲ್ಲಿ ನಮ್ಮನ್ನು ಆಳುವವರ ತಪ್ಪು ಒಪ್ಪುಗಳನ್ನು ಪರಾಮರ್ಶಿಸುವ ಹಕ್ಕು ಮತ್ತು ಜವಾಬ್ದಾರಿ ಮಾಧ್ಯಮಗಳಿಗೂ ಇರುವುದಾಗಿ ಜೀವಿಜಯ ಹೇಳಿದರು.

ಮಾಧ್ಯಮಗಳ ಮಿತಿ
ಮುಖ್ಯ ಭಾಷಣ ಮಾಡಿದ ಹಿರಿಯ ಪತ್ರಿಕೋದ್ಯಮಿಗಳಾದ ಜಿ. ರಾಜೇಂದ್ರ, ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಅಂಗಗಳಾಗಿರುವ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಬದ್ಧತೆಯಲ್ಲಿ ಮುನ್ನಡೆಯಬೇಕಾದ ಸಾಕಷ್ಟು ಮಿತಿಗಳು ಮಾಧ್ಯಮ ರಂಗಕ್ಕೆ ಇವೆ. ಇದನ್ನು ಮೀರಿದಾಗ ಆಡಳಿತ ವ್ಯವಸ್ಥೆಯೆ ನಮ್ಮನ್ನು ಮಟ್ಟ ಹಾಕುವ ಪ್ರಯತ್ನಗಳಿಗೂ ಮುಂದಾಗಬಹುದೆಂದು ಅಭಿಪ್ರಾಯಪಟ್ಟರು.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಹರಡಿರುವ ಭ್ರಷ್ಟಾಚಾರವನ್ನು ಕಾರ್ಯಾಂಗ ಮತ್ತು ಶಾಸಕಾಂಗದ ಬೆಂಬಲವಿದ್ದರೆ  ನಿಗ್ರಹಿಸಬಹುದು. ಆದರೆ, ಈಗಿನ ವ್ಯವಸ್ಥೆಯಲ್ಲಿ ಆಡಳಿತದಲ್ಲಿನ ಭ್ರಷ್ಟತೆಯನ್ನು ತೋರುವ ವರದಿಗಳು ಮಾಧ್ಯಮಗಳಲ್ಲಿ ಬಂದರೆ ಅದನ್ನು ಆಡಳಿತ ವ್ಯವಸ್ಥೆಯೆ ಮುಚ್ಚಿ ಹಾಕುವ ಕಾರ್ಯ ನಡೆಸುತ್ತದೆಂದು ವಿಷಾದಿಸಿ ಇಂತಹ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರದ ನಿರ್ಮೂ ಲನವಿರಲಿ ಅದರ ಆಳ ಅಗಲಗಳನ್ನು ಪತ್ತೆಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿ.ರಾಜೇಂದ್ರ ಕಳವಳ ವ್ಯಕ್ತಪಡಿಸಿದರು.

Advertisement

ಮಾಧ್ಯಮಗಳ ಮೂಲಕ ಜನಸಮುದಾಯವನ್ನು ಎಚ್ಚರಿಸುವ, ಮೂಲಭೂತ ಸಮಸ್ಯೆಗಳ ಬಗ್ಗೆ ಕಣ್ತೆರೆಸುವ ವಿಚಾರವನ್ನು ಬರೆಯಬಹುದು. ಈ ಹಂತದಲ್ಲಿ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸದಂತೆ ಎಚ್ಚರಿಕೆ ವಹಿಸಿವುದು ಅಗತ್ಯವೆಂದು  ಸಲಹೆ ನೀಡಿದ ರಾಜೇಂದ್ರ$›, ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವ ಸಂದರ್ಭ ಸಂಕಷ್ಟಕ್ಕೆ ಸಿಲುಕುವವರ ರಕ್ಷಣೆಗೆ ಸಂಘ ಮುಂದಾಗಬೇಕೆಂದರು.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಪತ್ರಕರ್ತರಾದ ಟಿ.ಎಲ್‌. ಶ್ರೀನಿವಾಸ್‌, ಅಮ್ಮುಣಿಚಂಡ ಪ್ರವಿಣ್‌, ಸವಿತಾ ರೈ, ಎಚ್‌.ಟಿ. ಅನಿಲ್‌, ಐತಿಚಂಡ ರಮೇಶ್‌ ಉತ್ತಪ್ಪ, ಚಟ್ಟಂಗಡ ರವಿ ಸುಬ್ಬಯ್ಯ, ಅಲ್ಲಾರಂಡ ವಿಠಲ ನಂಜಪ್ಪ, ಮುರಳೀಧರ್‌, ಭಾಸ್ಕರ್‌, ಎಸ್‌.ಎಂ. ಚಂಗಪ್ಪ ಮತ್ತು ಅಜ್ಜಮಾಡ ರಮೇಶ್‌ ಕುಟ್ಟಪ್ಪ ಅವರನ್ನು ಅತಿಥಿ ಗಣ್ಯರು ಸಮ್ಮಾನಿಸಿ ಗೌರವಿಸಿದರು. ಇದೇ ಸಂದರ್ಭ ಶೇ. 90ಕ್ಕೂ ಹೆಚ್ಚಿನ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳನ್ನು ಸಮ್ಮಾನಿಸಿ ಪ್ರೋತ್ಸಾಹಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಂಘ‌ದ ಅಧ್ಯಕ್ಷ ಅಜ್ಜಮಾಡ ರಮೇಶ್‌ ಕುಟ್ಟಪ್ಪ ಮಾತನಾಡಿದರು. ರಾಷ್ಟ್ರೀಯ ಪತ್ರಕರ್ತರ ಸಂಘದ ಸದಸ್ಯ ಲೋಕೇಶ್‌ ಸಾಗರ್‌, ರಾಜ್ಯ ಸಮಿತಿ ಸದಸ್ಯ ಮುರಳೀಧರ್‌, ಸಂಘದ ಸೋಮವಾರಪೇಟೆ ತಾಲೂಕು ಸಂಘದ ಅಧ್ಯಕ್ಷ ತೇಲಪಂಡ ಕವನ್‌ ಕಾರ್ಯಪ್ಪ, ವೀರಾಜಪೇಟೆ ತಾಲ್ಲೂಕು ಅಧ್ಯಕ್ಷ ಕುಪ್ಪಂಡ ದತ್ತಾತ್ರಿ ಮಾತನಾಡಿದರು. ರಾಜ್ಯ ಸಮಿತಿ ಸದಸ್ಯ ಅನು ಕಾರ್ಯಪ್ಪ ಉಪಸ್ಥಿತರಿದ್ದರು.

ಪಳೆಯಂಡ ಪಾರ್ಥ ಚಿಣ್ಣಪ್ಪ ಸ್ವಾಗತಿಸಿದರು. ಕುಡೆಕಲ್‌ ಸಂತೋಷ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next