ಸುರತ್ಕಲ್: ನೂರಾರು ವರ್ಷ ಇತಿಹಾಸವಿರುವ ಕುಳಾಯಿ ಬಳಿಯ ಬಗ್ಗುಂಡಿ ಕೆರೆ ಕಾಯಕಲ್ಪಕ್ಕೆ ಆದ್ಯತೆ ನೀಡಲಾಗಿದ್ದು ಡ್ರೋನ್ ಸರ್ವೇ ನಡೆಸಲು ಮಂಗಳೂರು ಮಹಾನಗರ ಪಾಲಿಕೆ ಟೆಂಡರ್ ಆಹ್ವಾನಿಸಿದೆ.
ದರಸೂಚಿ ಸಲ್ಲಿಸಲು ಅ.20ರವರೆಗೆ ಕಾಲಾವಕಾಶ ನೀಡಲಾಗಿದೆ. ಬೃಹತ್ ಕೆರೆ ಇದಾಗಿದ್ದು 60 ಎಕರೆ ವ್ಯಾಪ್ತಿಯಲ್ಲಿ ವಿಸ್ತರಿಸಿದೆ.
ಕೆರೆಯಲ್ಲಿ ವರ್ಷಪೂರ್ತಿ ನೀರಿನ ಒರತೆಯಿದೆ ಮಾತ್ರವಲ್ಲ ಬಹಳಷ್ಟು ಆಳ ವಿದ್ದು ಸರ್ವೇ ಕಾರ್ಯ ಮಾಡುವುದು ಸವಾಲಾಗಿದೆ. ಬಗ್ಗುಂಡಿ ಕೆರೆಗೂ ಕುಳಾಯಿ ಬಳಿ ಇರುವ ಕೋಟೆದ ಬಬ್ಬು ದೈವಸ್ಥಾನಕ್ಕೂ ನಂಟಿದ್ದು ಪ್ರತಿವರ್ಷ ಮಾರ್ಚ್‌ನಲ್ಲಿ ಬರುವ ಮೀನ ಸಂಕ್ರಮಣದಂದು ಈ ದೈವಸ್ಥಾನದ ನೇಮ ಸಂದರ್ಭ ಕೆರೆಯಲ್ಲಿ ಮೀನು ಹಿಡಿಯುವ ಜಾತ್ರೆ ನಡೆಯುತ್ತದೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಕೆರೆ ಸುತ್ತಮುತ್ತ ಇರುವ ಕೈಗಾರಿಕೆ ಹಾಗೂ ಇದೀಗ ಬಡಾವಣೆಗಳಿಂದಲೂ ಮಲೀನ ನೀರು ಕೆರೆಯನ್ನು ತುಂಬಿ ಮೀನುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕುಳಾಯಿ ಗ್ರಾಮದ ಪರಿಸರಕ್ಕೆ ಒಂದು ಕಾಲದಲ್ಲಿ ತಾಲೂಕಿನ ಜೀವನಾಡಿಯಾಗಿದ್ದ ಐತಿಹಾಸಿಕ ಬಗ್ಗುಂಡಿ ಕೆರೆ, ಪ್ರಕೃತಿಯ ಸುಂದರ ತಾಣದಲ್ಲಿ ನೆಲೆಗೊಂಡಿದ್ದು, ವಿವಿಧ ಜಾತಿಯ ನೀರು ಹಕ್ಕಿಗಳ ಕಲರವ ನಿತ್ಯ ಕಾಣಸಿಗುತ್ತದೆ.
ಉಳಿದಂತೆ ವರ್ಷಪೂರ್ತಿ ನೀರಸೆಲೆ ಇರುವುದರಿಂದ ಮೊಟ್ಟೆಯಿಡಲು ಬೇರೆ ಬೇರೆ ತಾಣದಿಂದ ಹಕ್ಕಿಗಳು ಇಲ್ಲಿ ಬರುತ್ತವೆ. ಪ್ರಯತ್ನ ಪಟ್ಟರೆ ಅತ್ಯಂತ ಸುಂದರ ಪ್ರವಾಸಿ ಸ್ಥಳವನ್ನಾಗಿ ಮಾಡಬಹುದು. ಬೋಟಿಂಗ್, ಕೆರೆಯ ಸುತ್ತ ವಾಕಿಂಗ್ ಟ್ರ್ಯಾಕ್, ಸೈಲ್ ರೈಡಿಂಗ್ ಮತ್ತಿತರ ಸೌಲಭ್ಯಕ್ಕೆ ಸಾಕಷ್ಟು ಅವಕಾಶಗಳಿವೆ.
ಅಭಿವೃದ್ಧಿಗೆ ಕ್ರಮ: ಐತಿಹಾಸಿಕ ಕೆರೆಯನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಮೊದಲ ಹಂತವಾಗಿ ಡ್ರೋನ್ ಸರ್ವೇ ಮಾಡಿ ಇದರ ವಿಸ್ತಾರ ನೀಲಿ ನಕ್ಷೆ ರೂಪಿಸಲಾಗುತ್ತದೆ. ಸ್ಮಾರ್ಟ್ ಸಿಟಿ ಅನುದಾನ, ಕೆಐಎಡಿಬಿ ಇಲ್ಲವೇ ಇತರ ಮೂಲಗಳಿಂದ ಅನುದಾನ ಹೊಂದಿಸಿ ಪ್ರವಾಸಿ ಸ್ಥಳವನ್ನಾಗಿ ಮಾಡುವ ಯೋಜನೆಯಿದೆ. ಹೆದ್ದಾರಿ ಸಮೀಪವೇ ಇರುವುದರಿಂದ ಮುಂದಿನ ದಿನಗಳಲ್ಲಿ ಆಕರ್ಷಣೆಯ ಕೇಂದ್ರವಾಗಲಿದೆ. –
ಡಾ| ಭರತ್ ಶೆಟ್ಟಿ ವೈ., ಶಾಸಕರು