ಮಹಾನಗರ: ಬಹುಚರ್ಚಿತ ನಗರದ ಏಕಮುಖ ಲೂಪ್ ರಸ್ತೆ ಮತ್ತು ಜಂಕ್ಷನ್‌ಗಳ ಅಭಿವೃದ್ಧಿಯ ಬಗ್ಗೆ ಮಂಗಳೂರು ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿ ಜನಾಭಿಪ್ರಾಯ ಸಂಗ್ರಹಿಸಿದ್ದು, ಸುಮಾರು 90ಕ್ಕೂ ಹೆಚ್ಚಿನ ಮಂದಿ ತಮ್ಮ ಸಲಹೆಗಳನ್ನು ನೀಡಿದ್ದಾರೆ.
ನಗರದ ಕ್ಲಾಕ್‌ಟವರ್‌ನಿಂದ-ಎ.ಬಿ. ಶೆಟ್ಟಿ ವೃತ್ತ, ಹ್ಯಾಮಿಲ್ಟನ್ ವೃತ್ತ, ರಾವ್ ಆ್ಯಂಡ್ ರಾವ್ ವೃತ್ತ ಮತ್ತು ಅಲ್ಲಿಂದ ಕ್ಲಾಕ್ ಟವರ್‌ವರೆಗೆ ಕೆಲ ತಿಂಗಳ ಹಿಂದೆಯೇ ಏಕಮುಖ ರಸ್ತೆಯನ್ನಾಗಿ ಮಾರ್ಪಾಡು ಮಾಡಲಾಗಿತ್ತು. ಸ್ಮಾರ್ಟ್ ಸಿಟಿಯ ಕೆಲವೊಂದು ನಿರ್ಧಾರಗಳಿಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಸ್ಮಾರ್ಟ್‌ಸಿಟಿ ಜಾಲತಾಣ, ಫೇಸ್‌ಬುಕ್, ಟ್ವಿಟರ್, ಇನಾóಗ್ರಾಮ್‌ನಲ್ಲಿ ಲಭ್ಯವಿರುವ ಗೂಗಲ್ ಫಾರ್ಮ್ ಲಿಂಕ್ ಮುಖಾಂತರ ಪ್ರಸ್ತಾವನೆ ಕುರಿತು ಅಭಿಪ್ರಾಯ ನೀಡುವಂತೆ ಕೋರಲಾಗಿತ್ತು. ಸೆ. 4ರಂದು ಕೊನೆಯ ದಿನವಾಗಿದ್ದು, ಸುಮಾರು 90ಕ್ಕೂ ಹೆಚ್ಚಿನ ಅಭಿಪ್ರಾಯಗಳು ಬಂದಿದೆ ಎನ್ನುತ್ತಾರೆ ಅಧಿಕಾರಿಗಳು.
ಶಾಸಕರು, ಮೇಯರ್ ಸಹಿತ ಸ್ಮಾರ್ಟ್‌ಸಿಟಿ, ಪಾಲಿಕೆ ಅಧಿಕಾರಿಗಳು ಚರ್ಚೆ ನಡೆಸಿ, ಸಾರ್ವಜನಿಕರ ಸಲಹೆಗಳನ್ನು ಕ್ರೋಡೀಕರಿಸಿ ಸೂಕ್ತವೆನಿಸಿದ ಸಲಹೆಯನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ.
ಇದೇ ಭಾಗದ ಎ.ಬಿ. ಶೆಟ್ಟಿ ವೃತ್ತ ಪ್ರದೇಶ ಅಭಿವೃದ್ಧಿಗೊಳಿಸಲಾಗಿದೆ. ಈ ಹಿಂದೆ ಇದ್ದ ವೃತ್ತವನ್ನು ಕೆಡಹಿ ಸದ್ಯ ಸ್ಮಾರ್ಟ್‌ಸಿಟಿಯಿಂದ ಆ ಭಾಗದಲ್ಲಿ ಟ್ರಾಫಿಕ್ ಐಲ್ಯಾಂಡ್ ನಿರ್ಮಾಣಗೊಂಡಿದೆ. ಈ ಐಲ್ಯಾಂಡ್ ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದ್ದು, ಆ ಐಲ್ಯಾಂಡ್ ಗೆ “ಎ.ಬಿ. ಶೆಟ್ಟಿ’ ಅವರ ಹೆಸರಿಡಲಾಗುವುದು. ಅಭಿವೃದ್ಧಿ ಕೆಲಸ ಸದ್ಯದಲ್ಲೇ ಆರಂಭಿಸಲಾಗಲಿದೆ.
ಜನಾಭಿಪ್ರಾಯ ಪರಿಶೀಲಿಸಿ ಕ್ರಮ: ನಗರದಲ್ಲಿನ ಲೂಪ್ ರಸ್ತೆ ಮತ್ತು ಅಭಿವೃದ್ಧಿಪಡಿಸಿರುವ ಜಂಕ್ಷನ್‌ಗಳ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಪಾಲಿಕೆ ಮುಂದಾಗಿತ್ತು. ನಗರದ ಸುಮಾರು 90ಕ್ಕೂ ಹೆಚ್ಚಿನ ಮಂದಿ ಅಭಿಪ್ರಾಯ ತಿಳಿಸಿದ್ದಾರೆ. ಅವುಗಳ ಪರಿಶೀಲನೆ ನಡೆಸಿ, ಶಾಸಕರು, ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿ ಅಧಿಕಾರಿಗಳು ಜಂಟಿಯಾಗಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. –
ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್