Advertisement
ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿರುವ ಕಾರಣ ನಗರದ ಭವಿಷ್ಯದ ದೃಷ್ಟಿಯಿಂದ ನೀರು ರೇಷನಿಂಗ್ ಮಾಡುವುದು ಅನಿವಾರ್ಯ ಎಂಬ ಪರಿಸ್ಥಿತಿಯನ್ನು ಮಂಗಳೂರು ಪಾಲಿಕೆ ಮನಗಂಡಿದೆ. ಹೀಗಾಗಿ ಕೆಲವೇ ದಿನದಲ್ಲಿ ರೇಷನಿಂಗ್ ನಿಯಮ ಜಾರಿಗೆ ಬರುವ ಎಲ್ಲ ಸಾಧ್ಯತೆಗಳಿವೆ. ಮೊದಲಿಗೆ 2 ದಿನಕ್ಕೊಮ್ಮೆ ನೀರು ನಿಯಮ ಜಾರಿಗೆ ತರಲು ಪಾಲಿಕೆ ಯೋಚನೆ ಮಾಡಿದೆ.
ನಗರದ ವ್ಯಾಪ್ತಿಯಲ್ಲಿ ಕೆಲವು ಕಡೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಅಪಾರ್ಟ್‌ಮೆಂಟ್, ಹೊಟೇಲ್, ವಾಣಿಜ್ಯ ಸಂಕೀರ್ಣಗಳು, ಪಿ.ಜಿ.ಗಳು, ಕೆಲವು ಶಿಕ್ಷಣ ಸಂಸ್ಥೆಗಳು ಖಾಸಗಿಯಾಗಿ ಟ್ಯಾಂಕರ್‌ಗಳ ಮೂಲಕ ನೀರು ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಎತ್ತರದ ಪ್ರದೇಶದ “ಎಂಡ್ ಪಾಯಿಂಟ್’ಗಳಿಗೆ ಪೈಪ್ ನೀರು ತಲುಪುವಲ್ಲಿ ಸಮಸ್ಯೆಯಾಗುತ್ತಿದೆ. ಅಂತಹ ಸ್ಥಳಗಳಿಗೆ ಪಾಲಿಕೆಯಿಂದಲೂ ನೀರು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿದೆ.
Related Articles
Advertisement
ಟ್ಯಾಂಕರ್ ಡಿಮ್ಯಾಂಡ್ಟ್ಯಾಂಕರ್ಗಳು ನೀರು ಪಡೆಯುತ್ತಿರುವ ನಗರದ ಕೆಲವು ಜಲ ಮೂಲಗಳಲ್ಲಿಯೂ ನೀರಿನ ಮಟ್ಟ ಕಡಿಮೆಯಾಗಿದೆ. ಕದ್ರಿ ಪಿಂಟೋಸ್ ಲೇನ್ ಬಳಿಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಟ್ಯಾಂಕರ್‌ಗಳು ಬಾವಿ, ಬೋರ್‌ವೆಲ್‌ನಿಂದ ನೀರು ತೆಗೆದು ಪೂರೈಕೆ ಮಾಡುತ್ತವೆ. ಸುಮಾರು 6 ಕಡೆಗಳಿಂದ ನೀರು ತೆಗೆಯಬಹುದಾಗಿದ್ದು, ಇಲ್ಲಿಯೂ ನೀರಿನ ಲಭ್ಯತೆ ಕಡಿಮೆಯಾಗಿದೆ. ಅತ್ತಾವರ ನಂತೂರಿನಲ್ಲಿಯೂ ಈ ಸಮಸ್ಯೆ ಇದೆ. ಮತ್ತೊಮ್ಮೆ ಎಎಂಆರ್ ನೀರು?
ಮೂಲಗಳ ಪ್ರಕಾರ ಎಎಂಆರ್‌ನಿಂದ ಕೈಗಾರಿಕೆಗಳಿಗೆ ನೀರು ಸರಬರಾಜು ನಿಲ್ಲಿಸಲಾಗಿದೆ. ಡ್ಯಾಂನಲ್ಲಿರುವ ನೀರು ಬಿರುಬಿಸಿಲಿಗೆ ಆವಿಯಾಗುತ್ತಿದೆ. ಕೆಲವು ದಿನಗಳವರೆಗೆ ನೀರು ಆವಿಯಾಗುವ ಸಾಧ್ಯತೆಯೇ ಅಧಿಕ. ಹೀಗಾಗಿ ಮತ್ತೊಮ್ಮೆ ತುಂಬೆ ಡ್ಯಾಂಗೆ ನೀರು ಹರಿಸುವ ಬಗ್ಗೆ ಜಿಲ್ಲಾಡಳಿತ/ಪಾಲಿಕೆ ಚಿಂತನೆ ನಡೆಸಬೇಕಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪಾಲಿಕೆ ಆಯುಕ್ತ ಚನ್ನಬಸಪ್ಪ ಅವರ ಪ್ರಕಾರ “ಸದ್ಯ ತುಂಬೆ ಡ್ಯಾಂನಲ್ಲಿ 5.57 ಮೀ. ನೀರು ಸಂಗ್ರಹವಿದೆ. ಮತ್ತೂಮ್ಮೆ ಎಎಂಆರ್‌ನಿಂದ ನೀರು ಹರಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುವುದು’ ಎನ್ನುತ್ತಾರೆ. ಮಳೆಯಾಗಲಿ…
ನೇತ್ರಾವತಿಯಲ್ಲಿ ನೀರು ಹರಿಯಬೇಕಾದರೆ ಘಟ್ಟದ ತಪ್ಪಲಲ್ಲಿ ಉತ್ತಮ ಮಳೆಯಾಗಬೇಕು. ಸುಬ್ರಹ್ಮಣ್ಯ ಭಾಗದಲ್ಲಿ ಮಳೆಯಾದರೆ ಕುಮಾರಧಾರಾ ನದಿಯೂಲ್ಲೂ ನೀರಿನ ಹರಿಯುವಿಕೆ ಹೆಚ್ಚಾಗುತ್ತದೆ. ಇದು ಕೂಡ ನೇತ್ರಾವತಿಯೊಂದಿಗೆ ಸಂಗಮವಾಗುವುದರಿಂದ ನೇತ್ರಾವತಿಯಲ್ಲಿ ನೀರು ಹೆಚ್ಚಾಗುತ್ತದೆ. ಸದ್ಯ ನೇತ್ರಾವತಿಯಲ್ಲಿ ನೀರಿನ ಹರಿವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕಳೆದ ವರ್ಷ ಎಪ್ರಿಲ್ ಅಂತ್ಯ- ಮೇ ತಿಂಗಳಲ್ಲಿ ಉತ್ತಮ ಮಳೆ ಸುರಿದು ನೇತ್ರಾವತಿ ಸಹಿತ ವಿವಿಧ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು. ರೇಷನಿಂಗ್ ಅನಿವಾರ್ಯ
ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಮಳೆ ಕೂಡ ಬರುತ್ತಿಲ್ಲ. ನೀರಿನ ಬಳಕೆ ಕೂಡ ಅಧಿಕವಾಗಿದೆ. ಭವಿಷ್ಯದ ದೃಷ್ಟಿಯಿಂದ ನೀರು ಸರಬರಾಜಿನಲ್ಲಿ ರೇಷನಿಂಗ್ ಮಾಡುವ ಅನಿವಾರ್ಯವಿದೆ. ಕೆಲವೇ ದಿನದಲ್ಲಿ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
– ಚನ್ನಬಸಪ್ಪ, ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ -ದಿನೇಶ್ ಇರಾ