Advertisement

ಕಾರ್ಯಕರ್ತರಿಗೇ ನಿಗಮ-ಮಂಡಳಿ ಹುದ್ದೆ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರಕಾರದ ಕ್ರಮ

01:49 AM Jul 13, 2022 | Team Udayavani |

ಬೆಂಗಳೂರು: ಬಿ.ಎಸ್‌. ಯಡಿಯೂರಪ್ಪ ಸಿಎಂ ಆಗಿದ್ದಾಗ ನೇಮಕಗೊಂಡಿದ್ದ 52 ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಆದೇಶ ರದ್ದುಪಡಿಸಿರುವ ಬೆನ್ನಲ್ಲೇ ಆ ಎಲ್ಲ ಹುದ್ದೆಗಳನ್ನು ಕಾರ್ಯಕರ್ತರಿಗೆ ನೀಡಲು ಸರಕಾರ ಮುಂದಾ ಗಿದೆ.

Advertisement

ವಿಧಾನಸಭೆ ಚುನಾವಣೆಗೆ ಹತ್ತು ತಿಂಗಳು ಉಳಿದಿರುವಾಗ ಪಕ್ಷದ ಕಾರ್ಯ ಕರ್ತರಿಗೆ ಅವಕಾಶ ಕಲ್ಪಿಸುವ ಉದ್ದೇಶ ದಿಂದಲೇ ಈ 52 ನಿಗಮ ಮಂಡಳಿ ಅಧ್ಯಕ್ಷ ರನ್ನು ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರಕಾರ ಹುದ್ದೆಯಿಂದ ಕೈಬಿಟ್ಟಿದ್ದು, ಇನ್ನೆರಡು ದಿನಗಳಲ್ಲಿ ಹೊಸಬರನ್ನು ನೇಮಿಸಲು ನಿರ್ಧರಿಸಿದೆ.

ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಅವಧಿ ಯಲ್ಲಿ ನೇಮಕಗೊಂಡ ಪಕ್ಷದ ಶಾಸಕರು ಮತ್ತು ಮಾಜಿ ಶಾಸಕರನ್ನು ಹೊರತುಪಡಿಸಿ ಕನಿಷ್ಠ ಒಂದೂ ವರೆ ವರ್ಷ ಪೂರೈಸಿರುವ ನಿಗಮ ಮಂಡಳಿ ಅಧ್ಯಕ್ಷರನ್ನು ಈಗಾಗಲೇ ಬದಲಾಯಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು ಅವರು ಬಿಎಸ್‌ವೈ ಜತೆಗೆ ಚರ್ಚಿಸಿಯೇ ತೀರ್ಮಾನ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದರ ನಡುವೆಯೂ ಕೆಲವರು ಕೊನೆಯ ಘಳಿಗೆಯಲ್ಲಿ ಯಡಿಯೂರಪ್ಪ ಅವರ ಮೂಲಕ ಸಿಎಂ ಮೇಲೆ ಒತ್ತಡ ಹೇರಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಮುಖವಾಗಿ ಕೆಆರ್‌ಐಡಿಎಲ್‌ ಅಧ್ಯಕ್ಷ ಎಂ. ರುದ್ರೇಶ್‌, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮ ಶಿವಯ್ಯ, ಕೆಎಸ್‌ಟಿಡಿಎಸ್‌ ಅಧ್ಯಕ್ಷ ಕಾಪು ಸಿದ್ದಲಿಂಗಸ್ವಾಮಿ, ದೇವರಾಜ ಅರಸು ನಿಗಮದ ಅಧ್ಯಕ್ಷ ಆರ್‌. ರಘು ಕೌಟಿಲ್ಯ, ಕರ್ನಾಟಕ ಅರಣ್ಯ ನಿಗಮದ ಅಧ್ಯಕ್ಷೆ ತಾರಾ ಅವರನ್ನು ಉಳಿಸಿಕೊಳ್ಳಲಾಗಿದೆ.

Advertisement

ಇನ್ನೊಂದು ಪಟ್ಟಿ
ಕೈಬಿಡಲಾಗುವ ನಿಗಮ-ಮಂಡಳಿ ಅಧ್ಯಕ್ಷರ ಇನ್ನೊಂದು ಪಟ್ಟಿಯೂ ಸಿದ್ಧಗೊಂಡಿದೆ. ಅದರಲ್ಲಿ ಒಂದೂವರೆ ವರ್ಷ ಪೂರೈಸಿರುವ ಇನ್ನೂ ಹತ್ತರಿಂದ ಹನ್ನೆರಡು ನಿಗಮ ಮಂಡಳಿಗಳ ಅಧ್ಯಕ್ಷರಿದ್ದಾರೆ. ಇದನ್ನು ಶೀಘ್ರವೇ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಿಗಮ ಮಂಡಳಿ ಅಧ್ಯಕ್ಷರನ್ನು ಬದಲಾಯಿಸಲು ತೀರ್ಮಾನಿಸಲಾಗಿತ್ತು. ಆದರೆ ಬಹುತೇಕರು ಮಾಜಿ ಸಿಎಂ ಯಡಿಯೂರಪ್ಪ ಅವರ ಬೆಂಬಲಿಗರೇ ಆಗಿದ್ದುದರಿಂದ ಅವರನ್ನು ಬದಲಾಯಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಕ್ಷ ಹಿಂದೇಟು ಹಾಕಿತ್ತು.

ಈಗ ಖಾಲಿಯಾಗಿರುವ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನಗಳಿಗೆ ಈಗಾಗಲೇ ವಿವಿಧ ಜಿಲ್ಲೆಗಳಿಂದ ಸಂಭಾವ್ಯರ ಪಟ್ಟಿಯನ್ನು ಪಡೆಯಲಾಗಿದ್ದು, ಅಂತಿಮ ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next