ಬೆಂಗಳೂರು: ನಿಗಮ, ಮಂಡಳಿಗಳ ನೇಮಕಾತಿ ವಿಳಂಬದಿಂದ ಒಳಗೊಳಗೆ ಬುಸುಗುಡುತ್ತಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರಿಗೆ “ಅಧಿಕಾರ ಭಾಗ್ಯ’ ಕಲ್ಪಿಸಲು ಸೋಮವಾರ ದಿಲ್ಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ.
ಈ ಸಭೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೋಮವಾರ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದು, ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುಜೇìವಾಲ ಅವರೊಂದಿಗೆ ಸಭೆ ನಡೆಸಲಿದ್ದಾರೆ. ಈ ತ್ರಿಮೂರ್ತಿಗಳು ಈಗಾಗಲೇ ಬೆಂಗಳೂರಿನಲ್ಲಿ ಮೂರು ಸುತ್ತಿನ ಸಭೆ ನಡೆಸಿ ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸಬಹುದಾದ 25 ಶಾಸಕರು ಹಾಗೂ ನಾಲ್ವರು ವಿಧಾನ ಪರಿಷತ್ತಿನ ಸದಸ್ಯರ ಸಂಭವನೀಯ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್‌ಗೆ ಅನುಮೋದನೆಗೆ ಕಳುಹಿಸಿಕೊಟ್ಟಿದ್ದರು.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಆರಂಭಕ್ಕೆ ಮುನ್ನವೇ ಶಾಸಕರಿಗೆ ಅಧಿಕಾರದ ಭಾಗ್ಯ ಲಭಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಎರಡು ವಾರಗಳ ಕಾಲದ ಅಧಿವೇಶನ ಮುಕ್ತಾಯಗೊಂಡರೂ ಹೈಕಮಾಂಡ್‌ನಿಂದ ಪಟ್ಟಿ ಬಿಡುಗಡೆಯಾಗಲಿಲ್ಲ. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲವು ಶಾಸಕರು, “ನಮಗೆ ಅನುದಾನವೂ ಇಲ್ಲ, ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನವೂ ಇಲ್ಲ, ಹೀಗಾದರೆ ಹೇಗೆ’ ಎಂದು ಪ್ರಶ್ನಿಸಿದಾಗ, “ಆದಷ್ಟು ಬೇಗ ನೇಮಕ ಮಾಡಲಾಗುವುದು, ಸುಮ್ಮನಿರಿ’ ಎಂದು ಸಿಎಂ ಸಿದ್ದರಾಮಯ್ಯ ಸಮಾಧಾನಪಡಿಸಿದ್ದರು. ಶಾಸಕರಲ್ಲಿ ಅಸಮಾಧಾನ ಹೊಗೆಯಾಡುತ್ತಿರುವುದನ್ನು ಅರಿತ ಸಿಎಂ- ಡಿಸಿಎಂ ಅವರು ಕಾಂಗ್ರೆಸ್ ಹೈಕಮಾಂಡ್ ಜತೆ ಅಂತಿಮ ಸುತ್ತಿನ ಮಾತುಕತೆಗೆ ನಿರ್ಧರಿಸಿ ಈಗ ದಿಲ್ಲಿಗೆ ಪ್ರಯಾಣದ ದಿನಾಂಕ ನಿಗದಿಪಡಿಸಿದ್ದಾರೆ.
ಮೊದಲ ಕಂತಿನಲ್ಲಿ 25 ಶಾಸಕರು ಹಾಗೂ ನಾಲ್ವರು ವಿಧಾನ ಪರಿಷತ್ತಿನ ಸದಸ್ಯರಿಗೆ ಅಧಿಕಾರ ಭಾಗ್ಯ ಸಿಗುವ ಸಾಧ್ಯತೆಗಳಿವೆ. ಆದರೆ ಈ ಪಟ್ಟಿಯಲ್ಲಿರುವ ಒಂದೂವರೆ ಡಜನ್‌ಗೂ ಹೆಚ್ಚು ಶಾಸಕರು ಎರಡು ಇಲ್ಲವೇ ಮೂರು ಅವಧಿಗೂ ಹೆಚ್ಚು ಬಾರಿ ಗೆದ್ದವರಾಗಿದ್ದು, ಅವರಿಗೆ ಸಣ್ಣಪುಟ್ಟ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ಕಲ್ಪಿಸಲು ಸಾಧ್ಯವಿಲ್ಲ. ಸಚಿವ ಸಂಪುಟದಲ್ಲಿರುವ ಕೆಲವು ಸಚಿವರಿಗಿಂತ ಸಂಪುಟದ ಹೊರಗಡೆ ಇರುವ ಶಾಸಕರು ಹಿರಿಯರು, ಅನುಭವಿಗಳು ಆಗಿದ್ದಾರೆ. ಜತೆಗೆ ಈ ಹಿಂದೆ ಸಚಿವರಾಗಿ ಕೆಲಸ ಮಾಡಿದ ಅನುಭವವೂ ಇದೆ. ಹೀಗಾಗಿ ಅಂಥವರನ್ನು ಪ್ರಮುಖ ನಿಗಮ, ಮಂಡಳಿಗಳಿಗೆ ನೇಮಿಸುವಾಗ ಸಂಬಂಧಪಟ್ಟ ಇಲಾಖೆಯ ಸಚಿವರೊಂದಿಗೆ ಹೊಂದಾಣಿಕೆಯೂ ಮುಖ್ಯ.
ಹೀಗಾಗಿ ಯಾರಿಗೆ ಯಾವ ನಿಗಮ, ಮಂಡಳಿ ಎಂಬುದು ದಿಲ್ಲಿಯಲ್ಲೇ ತೀರ್ಮಾನ ಅಗಬೇಕಿದೆ. ಹೀಗಾಗಿ ಸಿದ್ದರಾಮಯ್ಯ, ಶಿವಕುಮಾರ್ ಹಾಗೂ ಸುಜೇìವಾಲ ಅವರು ಸಂಭವನೀಯ ಪಟ್ಟಿಗೆ ಅಂತಿಮ ಸ್ವರೂಪ ನೀಡಿ ಕೊನೆಯದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮೋದನೆಗೆ ಸಲ್ಲಿಸುವ ಸಾಧ್ಯತೆಗಳಿವೆ. ಖರ್ಗೆ ಅವರ ಹಂತದಲ್ಲೂ ಪಟ್ಟಿ ಪರಿಷ್ಕರಣೆಯನ್ನು ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಎಲ್ಲವೂ ಸುಸೂತ್ರವಾಗಿ ಸೋಮವಾರ ಮುಗಿದರೆ ಮುಂದಿನ ವಾರವೇ ಪಟ್ಟಿ ಹೊರಬೀಳುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆ ಬಳಿಕ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ 2ನೇ ಕಂತಿನಲ್ಲಿ ಅಧಿಕಾರದ ಭಾಗ್ಯ ಕರುಣಿಸುವ ಸಾಧ್ಯತೆಗಳಿವೆ. ಚುನಾವಣೆ ಹಿನ್ನೆಲೆಯಲ್ಲಿ ಈಗ ನೇಮಕಾತಿ ಮಾಡಿದರೆ ಸಹಜವಾಗಿಯೇ ಅಧಿಕಾರ ಸಿಗದವರು ಅಸಮಾಧಾನಗೊಂಡು ಚುನಾವಣೆಯಲ್ಲಿ ಕೆಲಸ ಮಾಡದೆ ತಟಸ್ಥವಾಗಿ ಉಳಿದರೆ ಚುನಾವಣೆ ಮೇಲೆ ಪರಿಣಾಮ ಬೀರುವ ಆತಂಕ ಇರುವುದರಿಂದ ಎಲ್ಲರನ್ನು ಒಗ್ಗಟ್ಟಿನಿಂದ ದುಡಿಸಿಕೊಳ್ಳಬೇಕಾದರೆ ಚುನಾವಣೆಯ ಅನಂತರ ನೇಮಕಾತಿ ಸೂಕ್ತ ಎಂಬ ಅಭಿಪ್ರಾಯ ಪಕ್ಷದೊಳಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಐದಾರು ತಿಂಗಳು ಕಾರ್ಯಕರ್ತರು ಕಾಯಬೇಕಿದೆ.