ಬೆಂಗಳೂರು: ರಾಜ್ಯದ ಕಾಂಗ್ರೆಸ್ ನಾಯಕರು ಮತ್ತೆ ದಿಲ್ಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಇದರ ಬೆನ್ನಲ್ಲೇ ನಿಗಮ-ಮಂಡಳಿಗಳ ಅಧ್ಯಕ್ಷರ ಆಕಾಂಕ್ಷಿಗಳಲ್ಲಿ ನಿರೀಕ್ಷೆಗಳು ಮತ್ತೆ ಗರಿಗೆದರಿದ್ದು, ಸಂಕ್ರಾಂತಿಗೂ ಮೊದಲೇ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ.
ಈ ಮೊದಲೇ ನಿಗದಿಯಾದಂತೆ ಬುಧವಾರ ಸಂಜೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ದಿಲ್ಲಿಗೆ ತೆರಳಿದ್ದಾರೆ. ಗುರುವಾರ ಪಕ್ಷದ ಹೈಕಮಾಂಡ್ ಭೇಟಿಯಾಗಲಿರುವ ಅವರು, ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಸಹಿತ ಹಲವು ವಿಷಯಗಳ ಕುರಿತು ಚರ್ಚಿಸಲಿದ್ದಾರೆ.
ಹೈಕಮಾಂಡ್ ಸೂಚನೆಯಂತೆ ಪಕ್ಷದ ಹಿರಿಯ ಕಾರ್ಯಕರ್ತರ ಪಟ್ಟಿಯನ್ನೂ ಜತೆಗೆ ತೆಗೆದುಕೊಂಡು ಹೋಗಿರುವ ಇಬ್ಬರೂ ನಾಯಕರು (ಸಿಎಂ-ಡಿಸಿಎಂ), ತಿಂಗಳುಗಳಿಂದ ನನೆಗುದಿಗೆ ಬಿದ್ದಿರುವ ನಿಗಮ- ಮಂಡಳಿಗಳ ಅಧ್ಯಕ್ಷರ ಪಟ್ಟಿ ಬಿಡುಗಡೆ ಸಂಬಂಧ ರಾಷ್ಟ್ರೀಯ ನಾಯಕರ ಮೇಲೆ ಒತ್ತಡ ಹಾಕಲಿದ್ದಾರೆ. “ಹೊಸ್ತಿಲಲ್ಲೇ ಲೋಕಸಭಾ ಚುನಾವಣೆ ಇದೆ. ಈ ಹಂತದಲ್ಲೂ ಆಯ್ಕೆ ಅಂತಿಮಗೊಳ್ಳದಿದ್ದರೆ, ಇದು ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂಬುದನ್ನು ತಮ್ಮ ನಾಯಕರಿಗೆ ಮನದಟ್ಟು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಷ್ಟಕ್ಕೂ ಶಾಸಕರ ನೇಮಕಾತಿ ಪಟ್ಟಿ ಅಂತಿಮಗೊಂಡಿದೆ. ಯಾರಿಗೆ ಯಾವ ನಿಗಮ ಅಥವಾ ಮಂಡಳಿ ಎನ್ನುವುದು ಕೂಡ ಬಹುತೇಕ ಪೂರ್ಣಗೊಂಡಿದೆ. ಕಾರ್ಯಕರ್ತರನ್ನೂ ಪಟ್ಟಿಯಲ್ಲಿ ಸೇರಿಸುವುದು ಬಾಕಿ ಇದೆ. ಆ ಪ್ರಕ್ರಿಯೆ ಪೂರ್ಣಗೊಳಿಸಿ ಆದಷ್ಟು ಬೇಗ ಬಿಡುಗಡೆ ಮಾಡಿದರೆ ಪಕ್ಷದಲ್ಲಿ ಹೊಸ ಹುರುಪು ತುಂಬಿದಂತಾಗಲಿದೆ. ಈ ಹಿನ್ನೆಲೆಯಲ್ಲಿ ಒಂದೆರಡು ದಿನಗಳಲ್ಲೇ ಪಟ್ಟಿ ಪ್ರಕಟಿಸುವಂತೆ ಮನವಿ ಮಾಡಲಿದ್ದಾರೆ ಎಂದು ಪಕ್ಷದ ಪದಾಧಿಕಾರಿಗಳು ತಿಳಿಸಿದ್ದಾರೆ.
ಪರಿಷತ್ ಸದಸ್ಯರಿಗೆ ಅನುಮಾನ?
ಪಕ್ಷದ ವರಿಷ್ಠರ ಭೇಟಿಗೂ ಮುನ್ನ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಸಿಎಂ ಮತ್ತು ಡಿಸಿಎಂ ಮಾತುಕತೆ ನಡೆಸಲಿದ್ದಾರೆ. ಮೊದಲ ಹಂತದಲ್ಲಿ 32ರಿಂದ 35 ಜನರ ಆಯ್ಕೆ ಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆ ಇದ್ದು, ಇದರಲ್ಲಿ ಶಾಸಕರು ಮತ್ತು ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ವಿಧಾನ ಪರಿಷತ್ತಿನ ಸದಸ್ಯರು ಅನುಮಾನ ಎನ್ನಲಾಗಿದೆ.
ಪ್ರಮುಖ ಅಂಶ
– ನೇಮಕಾತಿಗಳನ್ನು ಬೇಗನೆ ಮಾಡುವಂತೆ ಅನೇಕ ಶಾಸಕರಿಂದ ತೀವ್ರ ಒತ್ತಾಯ.
– ಅನೇಕ ಬಾರಿ ಮುಂದೂಡಿಕೆ ಹಿನ್ನೆಲೆಯಲ್ಲಿ ಇನ್ನೂ ತಡ ಮಾಡದಿರಲು ನಿರ್ಧಾರ.
– ಲೋಕಸಭಾ ಚುನಾವಣೆ ಹತ್ತಿರ ಇರುವುದ ರಿಂದ ನಿಗಮ, ಮಂಡಳಿಗಳಿಗೆ ನೇಮಿಸದಿದ್ದರೆ ಚುನಾವಣೆ ವೇಳೆ ಪರಿಣಾಮ ಬೀರುವ ಸಾಧ್ಯತೆ.
– ಹೈಕಮಾಂಡ್ ನಾಯಕರ ಮುಂದೆ ವಾದ ಮಂಡಿಸಲು ಸಿಎಂ, ಡಿಸಿಎಂ ಸಿದ್ಧತೆ.