ಕುಂದಾಪುರ: ಕಾರ್ಪೋರೇಟ್ ಫಾರ್ಮಿಂಗ್ ಅನ್ನು ದೇಶದ ಎಲ್ಲೆಡೆ ಅನುಷ್ಠಾನಗೊಳಿಸಿದರೆ ರೈತರ ಬದುಕುವ ಹಕ್ಕನ್ನೇ ಕಿತ್ತುಕೊಂಡಂತಾಗುತ್ತದೆ. ಭಾರತದ ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಫಾರ್ಮಿಂಗ್ ಹೈಜಾಕ್ ಮಾಡಿದೆ ಎಂದು ಮ್ಯಾಗ್ಸಸೆ ಪ್ರಶಸ್ತಿ ವಿಜೇತ ಪತ್ರಕರ್ತ ಪಿ.ಸಾಯಿನಾಥ್ ಕಳವಳ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಕುಂದಾಪುರ ಜ್ಯೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ಸಮುದಾಯ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ್ದ “ಕಾರ್ಪೋರೇಟ್ ಫಾರ್ಮಿಂಗ್ ಮತ್ತು ಭಾರತದ ಕೃಷಿ ಬಿಕ್ಕಟ್ಟುಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಭೂಮಿ ಮಾತ್ರ ಕಾರ್ಪೋರೇಟ್ ಕೈಯಲ್ಲಿಲ್ಲ ಎಂಬುದನ್ನು ಹೊರತುಪಡಿಸಿದರೆ, ಇನ್ನುಳಿದಂತೆ ಗೊಬ್ಬರ, ಕೀಟನಾಶಕ, ಬೀಜ, ನೀರು, ರೈತರು ಬೆಳೆದ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸುದು ಕೂಡಾ ಕಾರ್ಪೋರೇಟ್ ಕಂಪನಿಗಳ ಕೈಯಲ್ಲಿದೆ. ತಾನು ಬೆಳೆದ ಬೆಳೆಗೆ ಬೆಲೆ ನಿಗದಿಪಡಿಸುವ ಅಧಿಕಾರ ರೈತನಿಗೆ ಇಲ್ಲ ಎಂದರು.
ನೆರೆಯ ಮಹಾರಾಷ್ಟ್ರಕ್ಕೆ ನಬಾರ್ಡ್ ಶೇ.53ರಷ್ಟು ಕೃಷಿ ಸಾಲವನ್ನು ಮುಂಬೈ ನಗರಕ್ಕೆ ಕೊಟ್ಟಿತ್ತು. ವಿಪರ್ಯಾಸವೆಂದರೆ ಮುಂಬೈ ನಗರದಲ್ಲಿ ರೈತರು ಎಲ್ಲಿದ್ದಾರೆ? ಆದರೆ ನಬಾರ್ಡ್ ತಾನು ಕೊಟ್ಟ ಸಾಲವನ್ನು ಸಮರ್ಥಿಸಿಕೊಂಡಿದೆ. ಯಾಕೆಂದರೆ ಈ ಹಣವನ್ನು ಅರ್ಬನ್ ಅಂಡ್ ಮೆಟ್ರೋ ಬ್ಯಾಂಕ್ ಬ್ರ್ಯಾಂಚ್ ಮೂಲಕ ಕೃಷಿ ಉದ್ಯಮದ ಕಂಪನಿಗಳಿಗೆ ಸಾಲ ನೀಡುವ ಯೋಜನೆ ಇದಾಗಿದೆ ಎಂದು ವಿವರಿಸಿದರು.
1991ರಿಂದ 2007ರವರೆಗೆ 3.15 ಲಕ್ಷ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಇದರಲ್ಲಿ ಮಹಿಳಾ ರೈತರ ಹೆಸರು ಸೇರ್ಪಡೆಗೊಂಡಿಲ್ಲ ಎಂದು ತಿಳಿಸಿದರು. 50 ಲಕ್ಷ ರೈತರು ಜಮೀನು ಕಳೆದುಕೊಂಡು ಕೃಷಿ ಕಾರ್ಮಿಕರಾಗಿದ್ದಾರೆ ಎಂದು ತಿಳಿಸಿದರು.
ಶಿಕ್ಷಕ ಉದಯ್ ಗಾಂವ್ಕರ್ ಅತಿಥಿಗಳನ್ನು ಸ್ವಾಗತಿಸಿದರು. ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಟ್ರಸ್ಟಿ ರಾಜಾರಾಂ ತಲ್ಲೂರು ಅವರು ಸತೀಶ್ ಆಚಾರ್ಯ ರಚಿಸಿದ ಪಿ.ಸಾಯಿನಾಥ್ ಅವರ ಕ್ಯಾರಿಕೇಚರ್ ಅನ್ನು ನೀಡಿ ಗೌರವಿಸಿದರು. ಮತ್ತೊಬ್ಬ ಕಲಾವಿದ ಚಂದ್ರಶೇಖರ್ ಶೆಟ್ಟಿ ಸಾಯಿನಾಥ್ ಅವರಿಗೆ ಕ್ಯಾರಿಕೇಚರ್ ನೀಡಿ ಗೌರವಿಸಿದರು. ಅಶೋಕ್ ತೆಕ್ಕಟ್ಟೆ ವಂದಿಸಿದರು.