ವಾಷಿಂಗ್ಟನ್: ಕೋವಿಡ್ -19ಗೆ ಲಸಿಕೆ ಸಂಶೋಧನೆಯಲ್ಲಿ ನಿರತವಾಗಿರುವ ಜಾನ್‌ಸನ್ ಆ್ಯಂಡ್ ಜಾನ್‌ಸನ್ ಸಂಸ್ಥೆಯು ತಾನು ಜುಲೈ ಮಧ್ಯಭಾಗದಿಂದ ಮಾನವನ ಮೇಲೆ ಈ ಲಸಿಕೆ ಪ್ರಯೋಗವನ್ನು ನಡೆಸಲಿದೆ ಎಂದು ಹೇಳಿಕೊಂಡಿದೆ. ತನ್ನ ಲಸಿಕೆಯು ಕೋವಿಡ್ ವಿರುದ್ಧ ಕೆಲಸ ಮಾಡಲಿದೆ ಎಂಬುದು ಖಚಿತವಾಗುವ ಮೊದಲೇ ಸಂಸ್ಥೆಯು ಅಮೆರಿಕ ಸರಕಾರದೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದೆ. 2021ರಲ್ಲಿ 1 ಬಿಲಿಯನ್ ಡೋಸ್ ಔಷಧ ಉತ್ಪಾದನೆಯ ಗುರಿ ಹೊಂದಿದೆ. ಅದಕ್ಕೆ ಬೇಕಾದ ಉತ್ಪಾದನಾ ಸಾಮರ್ಥ್ಯಕ್ಕಾಗಿ ಒಪ್ಪಂದವನ್ನು ಮಾಡಿಕೊಂಡಿದೆ.
ಸಂಸ್ಥೆಯು ತನ್ನ ಲಸಿಕೆಯ ಸುರಕ್ಷೆ ಮತ್ತು ರೋಗ ನಿರೋಧಕ ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು 18ರಿಂದ 55 ವರ್ಷ ಪ್ರಾಯದ ಸುಮಾರು 1.045 ಆರೋಗ್ಯವಂತ ಜನರ ಮೇಲೆ ಪ್ರಯೋಗ ನಡೆಸಲು ನಿರ್ಧರಿಸಿದೆ. ಜತೆಗೆ 65 ವರ್ಷ ಮೇಲ್ಪಟ್ಟವರ ಮೇಲೂ ಈ ಪ್ರಯೋಗವನ್ನು ನಡೆಸಲಾಗುವುದು ಎಂದು ಜೆ ಆ್ಯಂಡ್ ಜೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯೋಗವು ಅಮೆರಿಕ ಮತ್ತು ಬೆಲ್ಜಿಯಂ ದೇಶಗಳಲ್ಲಿ ನಡೆಯಲಿದೆ.
ಇಲ್ಲಿಯವರೆಗೆ ನಾವು ಕಂಡುಕೊಂಡ ಕ್ಲಿನಿಕಲ್‌ಪೂರ್ವ ಅಂಕಿಅಂಶ ಹಾಗೂ ರೆಗ್ಯುಲೇಟರಿ ಅಧಿಕಾರಿಗಳೊಂದಿನ ಮಾತುಕತೆ ಆಧಾರದಲ್ಲಿ ನಾವು ಪ್ರಯೋಗಾಲಯ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿಕೊಳ್ಳಲು ಸಮರ್ಥರಾಗಿದ್ದೇವೆ ಎಂದು ಜೆ ಆ್ಯಂಡ್ ಜೆ ಮುಖ್ಯ ವೈಜ್ಞಾನಿಕ ಅಧಿಕಾರಿ ಪೌಲ್ ಸ್ಟಾಫ್ಲೆಸ್ ಅವರು ಹೇಳಿದ್ದಾರೆ.
ಮೊದಲ ಹಂತದ ಅಧ್ಯಯನ ಮತ್ತು ನಿಯಂತ್ರಣ ಮಂಡಳಿಯ ಅಂಗೀಕಾರ ಬಳಿಕ ಲಸಿಕೆ ಕುರಿತು ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ಹಾಗೂ ಗಂಭೀರ ಸ್ಥಿತಿಯಲ್ಲಿರುವ ರೋಗಿಯ ಮೇಲೆ ಪರೀಕ್ಷೆ ನಡೆಸಲು ನೇಶನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಆ್ಯಂಡ್ ಇನ್‌ಫೆಕ್ಷಸ್ ಡಿಸೀಸಸ್ ಜತೆಗೆ ಕಂಪೆನಿ ಮಾತುಕತೆ ನಡೆಸುತ್ತಿದೆ. ಲಸಿಕೆ ತಯಾರಿಯಲ್ಲಿ ಮುಂಚೂಣಿಯಲ್ಲಿರುವ ಮೋಡೆರ್ನಾ ಇಂಕ್ ಸಂಸ್ಥೆಯು ಈಗಾಗಲೇ ನೋಂದಣಿ ಮಾಡಿಕೊಂಡಿರುವ ಕಡಿಮೆ ತೀವ್ರತೆಯ 600 ರೋಗಿಗಳ ಮೇಲೆ ಔಷಧವನ್ನು ಪರೀಕ್ಷೆ ನಡೆಸಲು ಆರಂಭಿಸಿದೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಮೇಲೆ ಜುಲೈಯಲ್ಲಿ ಪ್ರಯೋಗ ನಡೆಸಲಿದೆ.
ಕೋವಿಡ್ 19ಗೆ ಸುಮಾರು 10 ಲಸಿಕೆಯು ಮಾನವನ ಮೇಲೆ ಪರೀಕ್ಷೆಗೆ ಸಿದ್ದವಾಗಿದೆ. ಒಂದು ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸಲು ಸುಮಾರು 12ರಿಂದ 18 ತಿಂಗಳು ಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ.