Advertisement

ಹಾಸನ, ಶಿವಮೊಗ್ಗದಲ್ಲಿ ಕೊರೊನಾ ಪರೀಕ್ಷಾ ಕೇಂದ್ರ

12:23 AM Mar 08, 2020 | Sriram |

ಬೆಂಗಳೂರು: ಕೊರೊನಾ ವೈರಸ್‌ ಸೋಂಕಿನ ಶಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆ ಹೊಸದಾಗಿ ರಾಜ್ಯದ ಮೂರು ವೈದ್ಯಕೀಯ ಕಾಲೇಜುಗಳಲ್ಲಿ ಸೋಂಕು ಪರೀಕ್ಷಾ ಕೇಂದ್ರ ಮತ್ತು ಎರಡು ವೈದ್ಯಕೀಯ ಕಾಲೇಜುಗಳಲ್ಲಿ ಶಂಕಿತರ ಗಂಟಲು ದ್ರಾವಣ ಮಾದರಿ ಸಂಗ್ರಹ ಕೇಂದ್ರಗಳನ್ನು ಶೀಘ್ರದಲ್ಲಿ ಆರಂಭಿಸಲಾಗುತ್ತಿದೆ.

Advertisement

ರಾಜ್ಯಾದ್ಯಂತ ಕೊರಾನಾ ಶಂಕಿತರು ಹೆಚ್ಚಳವಾದ ಹಿನ್ನೆಲೆಯಲ್ಲಿ ಮೈಸೂರು, ಹಾಸನ, ಶಿವಮೊಗ್ಗ ವೈದ್ಯಕೀಯ ಕಾಲೇಜುಗಳಲ್ಲಿ ಸೋಂಕು ಪರೀಕ್ಷಾ ಕೇಂದ್ರವನ್ನು ಶೀಘ್ರವೇ ತೆರೆಯಲಾಗುತ್ತಿದೆ.ಜತೆಗೆ ಬಳ್ಳಾರಿಯ ವಿಜಯನಗರ ವೈದ್ಯಕೀಯ ಕಾಲೇಜು ಮತ್ತು ಕಲಬುರಗಿ ವೈದ್ಯಕೀಯ ಕಾಲೇಜುಗಳಲ್ಲಿ ಸೋಂಕು ಪರೀಕ್ಷೆಗೆ ಅಗತ್ಯವಿರುವ ಗಂಟಲು ದ್ರಾವಣ ಹಾಗೂ ರಕ್ತ ಮಾದರಿ ಸಂಗ್ರಹ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ.

“ಪರೀಕ್ಷಾ ಕೇಂದ್ರ ಆರಂಭಿಸಲು ಈಗಾಗಲೇ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ಸಮ್ಮತಿಯು ದೊರೆತಿದ್ದು, ಪ್ರಾಯೋಗಿಕವಾಗಿ ಪರೀಕ್ಷೆಯನ್ನು ಮಾಡಲಾಗಿದೆ. ಸೋಮ ವಾರ ಈ ಪರೀಕ್ಷಾ ಕೇಂದ್ರಗಳು ಹಾಗೂ ಸಂಗ್ರಹ ಕೇಂದ್ರಗಳು ಕಾರ್ಯಾರಂಭಿಸಲಿವೆ ಎಂದು ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ| ಓಂಪ್ರಕಾಶ್‌ ಪಾಟೀಲ್‌ ತಿಳಿಸಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿಗಳ ನಿಯೋಜನೆ
ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ತಪಾಸಣ ಕಾರ್ಯವನ್ನು ಮತ್ತಷ್ಟು ಬಲಗೊಳಿಸಿರುವ ಆರೋಗ್ಯ ಇಲಾಖೆ ವಿಮಾನ ನಿಲ್ದಾಣ ಮತ್ತು ಆಸ್ಪತ್ರೆಗಳಲ್ಲಿ ಪ್ರಯಾಣಿಕರ ತಪಾಸಣೆ ಮತ್ತು ಶಂಕಿತರ ಸರ್ವೇಕ್ಷಣೆ ನಡೆಸಲು ವೈದ್ಯಕೀಯ ಮಹಾವಿದ್ಯಾಲಯಗಳ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ನಿಯೋಜನೆ ಮಾಡಿದೆ.

ಸೋಂಕಿತರ ಮಾಹಿತಿ
ಅನಾರೋಗ್ಯದಿಂದ ಬಳಲುತ್ತಿರುವ 400 ಮಂದಿಯನ್ನು ಶಂಕಿತರು ಎಂದು ಗುರುತಿಸಿ ಸೋಂಕು ಪರೀಕ್ಷೆ ಮಾಡಲಾಗಿದೆ. ಈ ಪೈಕಿ 326 ಮಂದಿಯ ವರದಿ ಈಗಾಗಲೇ ಬಂದಿದ್ದು, ಯಾರಲ್ಲೂ ಸೋಂಕು ದೃಢಪಟ್ಟಿಲ್ಲ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ 9 ಮಂದಿ ಶಂಕಿತರನ್ನು ರಾಜ್ಯದ ವಿವಿಧೆಡೆ ಆಸ್ಪತ್ರೆಯಲ್ಲಿ ಇರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಕಾಲರ್‌ ಟ್ಯೂನ್‌ನಲ್ಲಿ ಕೊರೊನಾ ಜಾಗೃತಿ
ಕೇಂದ್ರ ಸರಕಾರದ ಸೂಚನೆ ಮೇರೆಗೆ ಶನಿವಾರ ದಿಂದ ಬಿಎಸ್‌ಎನ್‌ಎಲ್‌, ಜಿಯೋ ಟೆಲಿಕಾಂ ಸಂಸ್ಥೆಗಳು ತನ್ನ ಸಿಮ್‌ಗಳ ಕಾಲರ್‌ ಟ್ಯೂನ್‌ ಮೂಲಕ ಕೊರೊನಾ ಜಾಗೃತಿ ಅಭಿಯಾನ ಆರಂಭಿಸಿವೆ.

ವೈದ್ಯಕೀಯ ಕಾಲೇಜುಗಳಿಗೆ ಸುತ್ತೋಲೆ
ಎಲ್ಲ ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಸಂಸ್ಥೆಗಳು ಕೊರೊನಾ ಶಂಕಿತರಿಗೆ ಹಾಗೂ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಔಷಧ, ಚಿಕಿತ್ಸಾ ಪರಿಕರಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಸುತ್ತೋಲೆ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next