Advertisement

ಕೊರೋನಾ ಕಳವಳ : ಚೀನದಲ್ಲಿ ಅಂತ್ಯಸಂಸ್ಕಾರಕ್ಕೂ ನಿರ್ಬಂಧ!

07:39 PM Mar 20, 2020 | Hari Prasad |

ಬೀಜಿಂಗ್‌/ಹೊಸದಿಲ್ಲಿ: ಕೊರೊನಾವೈರಸ್‌ನ ಅಬ್ಬರಕ್ಕೆ ಚೀನ ತತ್ತರಿಸಿ ಹೋಗಿದ್ದು, ಸಾವಿನ ಸಂಖ್ಯೆ ಯಲ್ಲಿ ಇಳಿಮುಖ ಕಾಣುತ್ತಲೇ ಇಲ್ಲ. ವೈರಸ್‌ಗೆ ಬಲಿಯಾದವರ ಸಂಖ್ಯೆ ರವಿವಾರ 305 ಕ್ಕೇರಿಕೆ ಯಾಗಿದೆ. ಚೀನದಿಂದ ಫಿಲಿಪ್ಪೀನ್ಸ್‌ಗೆ ತೆರಳಿದ್ದ ವ್ಯಕ್ತಿಯೂ ಸಾವಿಗೀಡಾಗಿದ್ದು, ವಿದೇಶದಲ್ಲಾದ ಮೊದಲ ಕೊರೊನಾವೈರಸ್‌ ಸಾವು ಇದಾಗಿದೆ.

Advertisement

ಭಾರತ, ಅಮೆರಿಕ, ಯುಕೆ, ರಷ್ಯಾ ಸೇರಿ ದಂತೆ 25 ರಾಷ್ಟ್ರಗಳಲ್ಲಿ ಕೊರೊನಾ ವ್ಯಾಪಿಸಿದೆ. ಚೀನ ದಲ್ಲಿ ಸೋಂಕಿತರ ಸಂಖ್ಯೆ 14 ಸಾವಿರ ದಾಟಿದ್ದು, ವಿಶ್ವಾದ್ಯಂತ ಆತಂಕ ಸೃಷ್ಟಿಮಾಡಿದೆ. ಇದೇ ವೇಳೆ, ಮೃತರ ಅಂತ್ಯ ಸಂಸ್ಕಾರಗಳನ್ನು ನೆರವೇರಿಸದಂತೆ ಕುಟುಂಬಗಳಿಗೆ ನಿರ್ಬಂಧ ಹೇರಲಾಗಿದೆ. ವೈರಸ್‌ನಿಂದಾಗಿ ಸಾವಿಗೀಡಾದವರ ಅಂತ್ಯಸಂಸ್ಕಾರವನ್ನು ಸರಕಾರದ ವತಿಯಿಂದಲೇ ಅವರವರ ಮನೆಗಳಿಗೆ ಸಮೀಪದ ಲ್ಲಿರುವ ಸ್ಮಶಾನಗಳಲ್ಲಿ ನೆರವೇರಿಸಲಾಗುತ್ತಿದೆ.

ಯುಎಇಯಲ್ಲಿ 5ನೇ ಪ್ರಕರಣ ಪತ್ತೆ: ಯುಎಇ ಯಲ್ಲಿ ರವಿವಾರ ಮತ್ತೂಂದು ಕೊರೊನಾವೈರಸ್‌ ಪ್ರಕರಣ ಪತ್ತೆಯಾಗಿದ್ದು, ದೃಢಪಟ್ಟವರ ಸಂಖ್ಯೆ 5ಕ್ಕೇರಿದೆ. ವುಹಾನ್‌ನಿಂದ ಆಗಮಿಸಿದ ವ್ಯಕ್ತಿಗೆ ಸೋಂಕು ಕಂಡುಬಂದಿದ್ದು, ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಸೋಂಕಿತರ ಆರೋಗ್ಯ ಸ್ಥಿರವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಹಣಕಾಸು ನೆರವು
ವೈರಸ್‌ ಹಬ್ಬುವುದನ್ನು ತಡೆಯಲು ಚೀನ ಹರಸಾಹಸ ಪಡುತ್ತಿರುವಾಗಲೇ, ಚೀನದ ಸೆಂಟ್ರಲ್‌ ಬ್ಯಾಂಕ್‌ 173 ಶತಕೋಟಿ ಡಾಲರ್‌ ಮೊತ್ತ ನೆರವನ್ನು ಘೋಷಿಸಿದೆ. ಕರೆನ್ಸಿ ಮಾರುಕಟ್ಟೆಯನ್ನು ಸ್ಥಿರವಾಗಿಡಲು ಮತ್ತು ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹಣಕಾಸು ಹರಿದಾಡುತ್ತಿರಲಿ ಎಂಬ ಉದ್ದೇಶದಿಂದ ಈ ಘೋಷಣೆ ಮಾಡಲಾಗಿದೆ. ಜತೆಗೆ, ವೈರಸ್‌ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೆರವಾಗಿರುವಂಥ ಮೆಡಿಕಲ್‌ ಕಂಪೆನಿಗಳು ಸಹಿತ ಎಲ್ಲ ರೀತಿಯ ಸಂಸ್ಥೆಗಳಿಗೂ ಹಣಕಾಸಿನ ಸಹಾಯ ಮಾಡಲಾಗುವುದು ಎಂದು ಬ್ಯಾಂಕ್‌ ತಿಳಿಸಿದೆ.

ಮತ್ತೊಂದು ನಗರ ಶಟ್‌ಡೌನ್‌
ಚೀನದ ವೆನ್ ಝೌ ನಗರವನ್ನೂ ಈಗ ಶಟ್‌ಡೌನ್‌ ಮಾಡಲಾಗಿದೆ. ರವಿವಾರ ಈ ನಗರದ ಎಲ್ಲ ರಸ್ತೆಗಳನ್ನೂ ಮುಚ್ಚಲಾ ಗಿದ್ದು, ಜನರ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಗತ್ಯ ವಸ್ತುಗಳನ್ನು ಖರೀದಿಸಬೇಕೆಂದರೆ, 2 ದಿನಕ್ಕೊಮ್ಮೆ ಮಾತ್ರ ಕುಟುಂಬದ ಒಬ್ಬ ವ್ಯಕ್ತಿಯಷ್ಟೇ ಹೊರಹೋಗಲು ಅನುಮತಿ ನೀಡಲಾಗಿದೆ. 90 ಲಕ್ಷ ಜನಸಂಖ್ಯೆಯಿರುವ ಈ ನಗರದ 46 ಹೆದ್ದಾರಿ ಟೋಲ್‌ಗ‌ಳನ್ನೂ ಮುಚ್ಚಲಾಗಿದೆ.

Advertisement

ನಿಗಾ ಕೇಂದ್ರದಲ್ಲಿ ಕುಣಿದು ಕುಪ್ಪಳಿಸಿದರು
ಶನಿವಾರ ಚೀನದಿಂದ ಭಾರತಕ್ಕೆ ಆಗಮಿಸಿ ಹರ್ಯಾಣದ ಮಾನೇಸರ್‌ನಲ್ಲಿನ ನಿಗಾ ಕೇಂದ್ರ ತಲುಪಿರುವ 300ರಷ್ಟು ಭಾರತೀಯರು ಕುಣಿದು ಕುಪ್ಪಳಿಸುತ್ತಿರುವ ವೀಡಿಯೋವೊಂದು ವೈರಲ್‌ ಆಗಿದೆ. ಮೂರು ಹಂತದ ಮಾಸ್ಕ್ಗಳನ್ನು ಧರಿಸುವಂತೆ ಅವರಿಗೂ ಸೂಚಿಸಲಾಗಿದ್ದು, 2 ವಾರಗಳ ಕಾಲ ಅವರು ತೀವ್ರ ನಿಗಾದಲ್ಲಿ ಇರಲಿದ್ದಾರೆ.

ಅಲ್ಲಿಯವರೆಗೂ ಅವರು ಕುಟುಂಬದ ಯಾರೊಬ್ಬರನ್ನೂ ಮುಖತಃ ಸಂಪರ್ಕಿಸುವಂತಿಲ್ಲ. ಆದರೂ, ಅಲ್ಲಿರುವ ವಿದ್ಯಾರ್ಥಿಗಳು ಹಾಡು ಹಾಡುತ್ತಾ, ಕುಣಿಯುತ್ತಾ ಸಂಭ್ರಮಿಸು ತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ಜೀವನೋತ್ಸಾಹವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಹೊಸ ಆಸ್ಪತ್ರೆ ಸಿದ್ಧ
ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅವರನ್ನು ದಾಖಲಿಸಿಕೊಳ್ಳಲೆಂದು ಚೀನದಲ್ಲಿ ಮತ್ತೂಂದು ಹೊಸ ಆಸ್ಪತ್ರೆಯನ್ನು ಕೇವಲ 10 ದಿನಗಳ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ. ವುಹಾನ್‌ ನಗರದಲ್ಲಿ ಫೀಲ್ಡ್‌ ಹಾಸ್ಪಿಟಲ್‌ ಸಿದ್ಧವಾಗಿದ್ದು, ಇದರ ಮೇಲ್ವಿಚಾರಣೆಯನ್ನು ಸೇನೆಯೇ ವಹಿಸಿಕೊಂಡಿದೆ. ಒಂದು ಸಾವಿರ ಹಾಸಿಗೆಗಳುಳ್ಳ ಆಸ್ಪತ್ರೆಯಲ್ಲಿ 1,400 ಸೇನಾ ವೈದ್ಯರು ನಿಯೋಜಿತರಾಗಿದ್ದಾರೆ.

ಭಾರತವನ್ನು ನೋಡಿ ಕಲಿಯಿರಿ: ಪಾಕ್‌ ವಿದ್ಯಾರ್ಥಿಗಳ ಅಳಲು!
ಕೊರೊನಾವೈರಸ್‌ ಭೀತಿಯಿಂದ ಚೀನದಲ್ಲಿನ ಭಾರತೀಯರನ್ನು ಕೇಂದ್ರ ಸರಕಾರ ಸ್ವದೇಶಕ್ಕೆ ಕರೆತರುವ ಕೆಲಸ ಮಾಡುತ್ತಿದ್ದಂತೆ, ವುಹಾನ್‌ನಲ್ಲಿರು ಪಾಕಿಸ್ಥಾನಿ ವಿದ್ಯಾರ್ಥಿಗಳು ತಮ್ಮ ನೋವು ಹಾಗೂ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ವಿದ್ಯಾರ್ಥಿಗಳು, ‘ಪಾಕಿಸ್ಥಾನ ಸರಕಾರಕ್ಕೆ ನಾಚಿಕೆಯಾಗಬೇಕು. ಸ್ವಲ್ಪ ಭಾರತವನ್ನು ನೋಡಿ ಯಾದರೂ ಕಲಿಯಿರಿ,’ ಎಂದಿದ್ದಾರೆ.

ಜತೆಗೆ, ಭಾರತ ಸರಕಾರವು ಹೇಗೆ ಜವಾಬ್ದಾರಿಯುತವಾಗಿ ಭಾರತೀಯರನ್ನು ಸ್ವದೇಶಕ್ಕೆ ಕರೆದೊಯ್ಯುತ್ತಿದೆ ಎಂಬುದನ್ನು ತೋರಿಸುವ ವೀಡಿಯೋವನ್ನೂ ಅವರು ಅಪ್‌ಲೋಡ್‌ ಮಾಡಿದ್ದಾರೆ. ಇದರ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಚೀನದಲ್ಲಿರುವ ಪಾಕ್‌ ರಾಯಭಾರಿ ನಫ್ಘಾನಾ ಹಶ್ಮಿ, “ಪಾಕಿಸ್ತಾನಿ ವಿದ್ಯಾರ್ಥಿಗಳನ್ನು ವುಹಾನ್‌ನಿಂದ ಸ್ಥಳಾಂತರಿಸಲು ಸಾಧ್ಯವಿಲ್ಲ. ಕೊರೊ ನಾವೈರಸ್‌ಗೆ ಚಿಕಿತ್ಸೆ ನೀಡುವಂಥ ವ್ಯವಸ್ಥೆ ಪಾಕ್‌ನಲ್ಲಿಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next