Advertisement

ಕರಾಳ ವರ್ಷ 2020: ದೇಶದ ಪ್ರವಾಸೋದ್ಯಮ ಅನುಭವಿಸಿದ ನಷ್ಟ 15 ಲಕ್ಷ ಕೋಟಿ ರೂ.!

06:23 PM Dec 26, 2020 | |

ಫೆಡರೇಶನ್ ಆಫ್ ಅಸೋಸಿಯೇಶನ್ ಇಂಡಿಯನ್ ಟೂರಿಸಂ ಆ್ಯಂಡ್ ಹಾಸ್ಪಿಟಾಲಿಟಿ(ಎಫ್ ಎಐಟಿಎಚ್) ಅಂದಾಜಿನ ಪ್ರಕಾರ ಕೋವಿಡ್ 19 ಸೋಂಕು ಮತ್ತು ಲಾಕ್ ಡೌನ್ ನಿಂದಾಗಿ 2020ರಲ್ಲಿ ಭಾರತದ ಪ್ರವಾಸೋದ್ಯಮಕ್ಕೆ ಅತೀ ಹೆಚ್ಚು ನಷ್ಟವನ್ನು ತಂದೊಡ್ಡಿತ್ತು. ಭಾರತದ ಪ್ರವಾಸೋದ್ಯಮ ಬರೋಬ್ಬರಿ 15 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟ ಅನುಭವಿಸಿದೆ.

Advertisement

ಪ್ರವಾಸೋದ್ಯಮದ ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ 2020ನೇ ವರ್ಷದಲ್ಲಿ ನಾಲ್ಕು ಕೋಟಿ ಮಂದಿ ಉದ್ಯೋಗವನ್ನು ಕಳೆದುಕೊಂಡಿರುವುದಾಗಿ ತಿಳಿಸಿದೆ. ಕೋವಿಡ್ 19 ಸೋಂಕಿನಿಂದ ಭಾರತದ ಪ್ರವಾಸೋದ್ಯಮ ಅಂದಾಜು 5 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟ ಅನುಭವಿಸಬಹುದು ಎಂದು ಎಫ್ ಎಐಟಿಎಚ್ ಮಾರ್ಚ್ ನಲ್ಲಿ ಸರ್ಕಾರಕ್ಕೆ ಮಾಹಿತಿ ನೀಡಿತ್ತು.

ಆದರೆ ದೇಶದಲ್ಲಿ ನಿರಂತರವಾಗಿ ಮುಂದುವರಿದ ಕೋವಿಡ್ 19 ಸೋಂಕಿನ ಹಾವಳಿ ಮತ್ತು ಲಾಕ್ ಡೌನ್ ಹಾಗೂ ಭೀತಿಯಿಂದಾಗಿ ಪ್ರವಾಸಿಗರು ಯಾವ ಪ್ರವಾಸಿ ತಾಣಕ್ಕೂ ಹೆಚ್ಚು ಭೇಟಿ ನೀಡದ ಪರಿಣಾಮ ಭಾರತೀಯ ಪ್ರವಾಸೋದ್ಯಮ ಅಂದಾಜು 15 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟ ಅನುಭವಿಸಿರುವುದಾಗಿ ಎಫ್ ಎಐಟಿಎಚ್ ಪರಿಷ್ಕೃತ ಪ್ರಕಟಣೆಯನ್ನು ಬಿಡುಗಡೆಗೊಳಿಸಿತ್ತು.

ವೈರಸ್ ಹರಡುವಿಕೆ ಪ್ರಮಾಣ ಮುಂದುರಿದ ಪರಿಣಾಮ ಭಾರತದಾದ್ಯಂತ ಪ್ರವಾಸೋದ್ಯಮ ದೇಶೀಯವಾಗಿ ಹಾಗೂ ವಿದೇಶಿ ಪ್ರವಾಸೋದ್ಯಮದಲ್ಲಿ ಭಾರೀ ನಷ್ಟ ಅನುಭವಿಸುವಂತಾಗಿತ್ತು. ಆ ನಿಟ್ಟಿನಲ್ಲಿ ಪ್ರವಾಸೋದ್ಯಮ 2020ರ ಮಾರ್ಚ್ ನಿಂದ ಮುಂದಿನ 9 ತಿಂಗಳವರೆಗೂ ಚೇತರಿಕೆ ಕಂಡಿಲ್ಲ ಎಂದು ಹೇಳಿದೆ.

ಭಾರತದ ಪ್ರವಾಸೋದ್ಯಮದಿಂದ ಸಂಭವಿಸಿರುವ ನೇರ ಮತ್ತು ಪರೋಕ್ಷ ಆರ್ಥಿಕ ನಷ್ಟ ದೇಶದ ಜಿಡಿಪಿಯ ಶೇ.10ರಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. ಇಡೀ ವರ್ಷದ ಆರ್ಥಿಕ ನಷ್ಟವನ್ನು ಪರಿಗಣಿಸಿದರೆ ಅದು ಸುಮಾರು 20 ಲಕ್ಷ ಕೋಟಿಗೆ ಏರಬಹುದು ಎಂದು ಎಫ್ ಎಐಟಿಎಚ್ ವಿವರಿಸಿದೆ.

Advertisement

ಇದು ಪ್ರವಾಸೋದ್ಯಮದ ಎಲ್ಲಾ ಆಯಾಮವನ್ನು ಒಳಗೊಂಡಿದ್ದು, ಇದರಲ್ಲಿ ವಿಮಾನಯಾನ, ಟ್ರಾವೆಲ್ ಏಜೆಂಟ್ಸ್, ಹೋಟೆಲುಗಳು, ಟೂರ್ ಆಪರೇಟರ್ಸ್, ಗೈಡ್ ಗಳು, ಟೂರಿಸಂ ರೆಸ್ಟೋರೆಂಟ್ ಗಳು, ಟೂರಿಸ್ಟ್ ಟ್ರಾನ್ಸ್ ಪೋರ್ಟ್ ಟೇಶನ್ ಸೇರಿದ್ದು, ಎಲ್ಲಾ ಕ್ಷೇತ್ರಗಳ ಒಟ್ಟು ನಷ್ಟ 20 ಲಕ್ಷ ಕೋಟಿಗೆ ಏರಬಹುದು ಎಂದು ಹೇಳಿದೆ.

ಟ್ರಾವಲ್ ಏಜೆಂಟ್ ರಿಂದ ಬರಬೇಕಾಗಿದ್ದ ರಿಫಂಡ್ ಗಳ ಬಾಕಿ, ಹೋಟೆಲ್ , ರೆಸ್ಟೋರೆಂಟ್ ಗಳಲ್ಲಿ ಕಾಯ್ದಿರಿಸಿದ್ದ ರೂಮ್ ಗಳ ಬಾಕಿ ಪಾವತಿ, ಮದುವೆ ಹಾಲ್ ಗಳು, ಪಾರ್ಕಿಂಗ್ ನಿಲ್ದಾಣ, ಪ್ರವಾಸೋದ್ಯಮದ ಸೀಸನ್ ಗಳು ದೊಡ್ಡ ಹೊಡೆತ ನೀಡಿದ ಪರಿಣಾಮ ಭಾರೀ ನಷ್ಟವನ್ನು ಅನುಭವಿಸುವಂತೆ ಮಾಡಿರುವುದಾಗಿ ತಿಳಿಸಿದೆ.

ಶತಮಾನಗಳಲ್ಲಿಯೇ ಅನುಭವಿಸದಿರುವಷ್ಟು ನಷ್ಟವನ್ನು ಪ್ರವಾಸೋದ್ಯಮ ಕ್ಷೇತ್ರ 2020ರಲ್ಲಿ ಕೋವಿಡ್ 19 ಸೋಂಕಿನಿಂದ ಅನುಭವಿಸುವಂತಾಗಿದೆ. ಆ ನಿಟ್ಟಿನಲ್ಲಿ ಪ್ರವಾಸೋದ್ಯಮ ಕ್ಷೇತ್ರ ಚೇತರಿಕೆ ಕಾಣಲು ಬಹಳ ಸಮಯ ತೆಗೆದುಕೊಳ್ಳಬಹುದು ಎಂದು ವಿಶ್ಲೇಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next