ನವದೆಹಲಿ: ಭಾರತ ಸೇರಿದಂತೆ ವಿಶ್ವವನ್ನೇ ಕೋವಿಡ್ 19 ಮಹಾಮಾರಿ ತಲ್ಲಣ ಮೂಡಿಸಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದು, ಇದರಿಂದಾಗಿ ದೇಶಕ್ಕೆ 9 ಲಕ್ಷ ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
21 ದಿನಗಳ ಲಾಕ್ ಡೌನ್ ನಿಂದ 120 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 9ಲಕ್ಷ ಕೋಟಿ)ನಷ್ಟು ನಷ್ಟವಾಗಲಿದ್ದು, ಇದು ದೇಶದ ಜಿಡಿಪಿ ಶೇ.4ಕ್ಕೆ ಸಮನಾಗಲಿದೆ ಎಂದು ವಿವರಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಕೂಡಾ ನಿಗದಿಯಂತೆ ಏಪ್ರಿಲ್ 3ರಂದು ಮೊದಲ ದ್ವೈಮಾಸಿಕ ನೀತಿ ಪರಿಶೀಲನೆ ಘೋಷಿಸಲಿದ್ದು, ಇದರಲ್ಲಿ ಆರ್ಥಿಕ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಭಾರೀ ದರ ಕಡಿತ ಮಾಡಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ಕೋವಿಡ್ 19 ವೈರಸ್ ಕ್ಷಿಪ್ರವಾಗಿ ಹರಡುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ಮೂರು ವಾರಗಳ ಲಾಕ್ ಡೌನ್ ಘೋಷಿಸಿದ್ದರು. ಬುಧವಾರ ಈಕ್ವಿಟಿ ಮಾರ್ಕೆಟ್ ವಹಿವಾಟು ಕೂಡಾ ಭಾರೀ ಇಳಿಕೆ ಕಂಡಿರುವುದಾಗಿ ವರದಿ ತಿಳಿಸಿದೆ.
ಮೂರು ವಾರಗಳ ಲಾಕ್ ಡೌನ್ ಒಂದರಿಂದಲೇ 90 ಬಿಲಿಯನ್ ಅಮೆರಿಕನ್ ಡಾಲರ್ ಕ್ಕಿಂತಲೂ ಹೆಚ್ಚು ನಷ್ಟವಾಗಲಿದ್ದು, ಈಗಾಗಲೇ ಮಹಾರಾಷ್ಟ್ರ, ಕೇರಳ ರಾಜ್ಯಗಳು ಘೋಷಿಸಿರುವ ಲಾಕ್ ಡೌನ್ ನಿಂದ ಇನ್ನಷ್ಟು ನಷ್ಟವಾಗಿರುವುದಾಗಿ ವರದಿ ವಿವರಿಸಿದೆ. ಆರ್ ಬಿಐ ಏಪ್ರಿಲ್ ರಿವ್ಯೂನಲ್ಲಿ 0.65ರಷ್ಟು ದರ ಕಡಿತಗೊಳಿಸುವ ಸಾಧ್ಯತೆ ಇದೆ. ಅಲ್ಲದೇ ಶೇ.1ರಷ್ಟು ಬಡ್ಡಿದರ ಕಡಿತಗೊಳಿಸುವ ಸಾಧ್ಯತೆ ಇದ್ದಿರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.