ಪಾಕಿಸ್ಥಾನ: ಚೀನಾದಲ್ಲಿ ಮರಣ ಮೃದಂಗವನ್ನೇ ಬಾರಿಸಿದ ಕೊರೋನಾ ವೈರಸ್ ಇದೀಗ ಪಾಕಿಸ್ತಾನಕ್ಕೂ ಕಾಲಿಟ್ಟಿದೆ. ಇಸ್ಲಾಮಾಬಾದ್ ಮತ್ತು ಕರಾಚಿಯಲ್ಲಿ ಇಬ್ಬರಿಗೆ ಸೋಂಕು ತಗಲಿರುವುದು ಖಚಿತಪಟ್ಟಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.
ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ವಿಶೇಷ ಆರೋಗ್ಯ ಸಲಹೆಗಾರರಾದ ಡಾ. ಜಾಫರ್ ಮಿರ್ಜಾ ಈ ಮಾಹಿತಿಯನ್ನು ಖಚಿತಪಡಿಸಿದ್ದು, ಇರಾನ್ ಗೆ ತೆರಳಿ ಹಿಂದಿರುಗಿದ್ದ ಇಬ್ಬರಿಗೆ ಕೊರೋನಾ ವೈರಸ್ ತಗುಲಿದೆ ಎಂದು ತಿಳಿಸಿದ್ದಾರೆ. ಆ ಮೂಲಕ ಕೊರೋನಾ ವೈರಸ್ ಯುರೋಪಿಯನ್ ರಾಷ್ಟ್ರಗಳಿಗೂ ದಾಪುಗಾಲಿಟ್ಟಿದೆ .
ಪಾಕಿಸ್ಥಾನದಲ್ಲಿ ದಾಖಲಾದ ಮೊದಲ ಎರಡು ಪ್ರಕರಣಗಳು ಇದಾಗಿದ್ದು , ಸೋಕು ಪೀಡಿತರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದಕ್ಷಿಣ ಕೊರಿಯಾದಲ್ಲೂ ಕೊರೋನಾ ವೈರಸ್ ತನ್ನ ಮರಣ ಮೃದಂಗ ಮುಂದುವರೆಸಿದ್ದು, ಮಾರಣಾಂತಿಕ ಸೋಂಕಿಗೆ ಈ ವರೆಗೂ ಬಲಿಯಾದವರ ಸಂಖ್ಯೆ 12ಕ್ಕೇರಿದೆ. 334 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,595ಕ್ಕೆ ಏರಿಕೆಯಾಗಿದೆ.
ಮೂಲಗಳ ಪ್ರಕಾರ ಇಟಲಿಯಲ್ಲೂ ಕೊರೋನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಬುಧವಾರದ ಹೊತ್ತಿಗೆ ಇಟಲಿಯಲ್ಲಿ ಕೊರೋನಾ ವೈರಸ್ ಪೀಡಿತರ ಸಂಖ್ಯೆ 400ಕ್ಕೇರಿದೆ ಎಂದು ತಿಳಿದುಬಂದಿದೆ. ಇನ್ನು ಚೀನಾ, ದಕ್ಷಿಣ ಕೊರಿಯಾ ಮಾತ್ರವಲ್ಲದೇ ವಿಶ್ವಾದ್ಯಂತ ಸುಮಾರು 40 ದೇಶಗಳಲ್ಲಿ ಕೊರೋನಾ ವೈರಸ್ ವ್ಯಾಪಿಸಿದ್ದು, ಸುಮಾರು 80 ಸಾವಿರ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ ಚೀನಾವೊಂದರಲ್ಲೇ ಸೋಂಕಿತರ ಸಂಖ್ಯೆ 78,497ರಷ್ಟಿದೆ ಎಂದು ತಿಳಿದುಬಂದಿದೆ.
ಚೀನಾದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಸೊಂಕಿನಿಂದ ಮೃತಪಟ್ಟವರ ಸಂಖ್ಯೆ 2,744 ಕ್ಕೆ ತಲುಪಿದೆ.