ಚಿಕ್ಕಬಳ್ಳಾಪುರ: ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೂ ಒಂದೇ ಒಂದು ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಸಾರ್ವಜನಿಕರು ಈ ಬಗ್ಗೆ ಆತಂಕಕ್ಕೆ ಒಳಗಾಗಬಾರದು ಹಾಗೂ ವದಂತಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊರೊನಾ ವೈರಸ್ ಬಗ್ಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾವೈರಸ್ ಪೀಡಿತ ದೇಶಗಳಿಂದ ಬರುವ ಸಾರ್ವಜನಿಕರ ಹಾಗೂ ಪ್ರವಾಸಿಗರ ವಿಷಯವನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಕಣ್ಗಾವಲು ಸಮಿತಿ ಪ್ರತಿನಿತ್ಯ ವರದಿಗಳನ್ನು ಜಿಲ್ಲಾ ಸರ್ವೇಕ್ಷಣಾ ಘಟಕಕ್ಕೆ ನೀಡಬೇಕೆಂದು ಸೂಚಿಸಿದರು.
ಮುಂಜಾಗ್ರತಾ ಕ್ರಮ: ಇತ್ತೀಚಿಗೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಚೀನಾದಿಂದ 10 ಜನ, ಇರಾನ್‌ನಿಂದ 4 ಜನ ಹಾಗೂ ಇಬ್ಬರು ಇಟಲಿ ದೇಶದಿಂದ ಬಂದಿರುವ ಸ್ಥಳೀಯ ನಾಗರಿಕರ ಮನೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಲಾಗಿ ಆ ಕುಟುಂಬದ ಸದಸ್ಯರಿಗೆ ರೋಗದ ಲಕ್ಷಣ ಕಾಣಿಸಿಕೊಂಡಿಲ್ಲ. ಆದರೂ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರತಿನಿತ್ಯ ಅವರ ಆರೋಗ್ಯ ಸ್ಥಿತಿಗತಿಗಳ ಪರಿಶೀಲನೆ ಮಾಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಲಕ್ಷಣಗಳು: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್‌ಗೌಡ ಮಾತನಾಡಿ, ತೀವ್ರ ಜ್ವರ ಪ್ರಾರಂಭ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಹಾಗೂ ಭೇದಿ ಕೊರೊನಾ ಸೋಂಕಿನ ಲಕ್ಷಣಗಳಾಗಿವೆ. ತೀವ್ರ ಸಾಮಾನ್ಯ ಜ್ವರ ಹರಡುವ ರೀತಿಯಲ್ಲಿಯೇ ಕೊರೊನಾ ಹರಡುತ್ತದೆ. ಸಾಮಾನ್ಯವಾಗಿ ಸೋಂಕಿತರು ಕೆಮ್ಮಿದಾಗ, ಸೀನಿದಾಗ ಈ ವೈರಸ್‌ಗಳು ಹರಡುತ್ತವೆ.
ವೈಯಕ್ತಿಕ ಸ್ವತ್ಛತೆ ಇಲ್ಲದಿರುವುದು, ಮೂಗು, ಬಾಯಿ ಪದೇ ಪದೆ ಮುಟ್ಟುವುದರಿಂದಲೂ ಸೋಂಕು ಹರಡಬಹುದು. ಕೆಮ್ಮಿದಾಗ ಮತ್ತು ಸೀನುವಾಗ ಬಾಯಿಗೆ ಕರವಸ್ತ್ರ ಅಡ್ಡ ಇಡುವ ಮೂಲಕ ಮತ್ತು ಕೈಯನ್ನು ಸ್ವತ್ಛವಾಗಿ ತೊಳೆದುಕೊಳ್ಳುವ ಮೂಲಕ ಸರಳ ನೈರ್ಮಲ್ಯವನ್ನು ಅಭ್ಯಾಸ ಮಾಡಿಕೊಳ್ಳಿ ಎಂದರು. ಅನಾರೋಗ್ಯದಿಂದ ಇರುವ ಅಥವಾ ಕೆಮ್ಮು ಮತ್ತು ನೆಗಡಿ ಇತ್ಯಾದಿ ಅನಾರೋಗ್ಯದ ಲಕ್ಷಣಗಳು ಹೊಂದಿರುವ ಜನರೊಂದಿಗೆ ನಿಕಟ ಸಂಪರ್ಕ ಹೊಂದಬೇಡಿ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್, ಉಪವಿಭಾಗಾಧಿಕಾರಿ ರಘುನಂದನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅನಿಲ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ 5 ಹಾಸಿಗೆವುಳ್ಳ ವಾರ್ಡ್: ಜಿಲ್ಲಾ ಆಸ್ಪತ್ರೆಯಲ್ಲಿ ಈಗಾಗಲೇ 5 ಹಾಸಿಗೆಗಳುಳ್ಳ ಪ್ರತ್ಯೇಕ ವಾರ್ಡನ್ನು ತೆರೆಯಲಾಗಿದೆ. ಪ್ರತಿ ತಾಲೂಕಿನಲ್ಲಿ ಪ್ರತ್ಯೇಕ ಹಾಸಿಗೆಗಳುಳ್ಳ ವಾರ್ಡನ್ನು ತೆರೆಯಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯೋಗೇಶ್ ಗೌಡ ಸಭೆಗೆ ಮಾಹಿತಿ ನೀಡಿದರು. ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಸಂಶಯಾಸ್ಪದ ರೋಗ ಲಕ್ಷಣಗಳಿರುವ ವ್ಯಕ್ತಿಗಳು ಕಂಡುಬಂದಲ್ಲಿ ಜಿಲ್ಲಾ ಸರ್ವೇಕ್ಷಣಾ ಘಟಕ ದೂ.ಸಂಖ್ಯೆ 08156-277838 ಮಾಹಿತಿ ನೀಡಬಹುದು ಎಂದು ತಿಳಿಸಿದರು.