Advertisement

ಕೊರೊನಾ ವೈರಸ್‌: ವದಂತಿ ಹಬ್ಬಿಸದಿರಿ

09:52 AM Feb 05, 2020 | mahesh |

ಫಿಲಿಫೈನ್ಸ್‌ ದಂಪತಿ, ಜಪಾನ್‌ ವಿದ್ಯಾರ್ಥಿಗೆ ಶೀತ, ಜ್ವರ
ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲು

Advertisement

ಮಂಗಳೂರು: ಮಂಗಳೂರು ಪ್ರವಾಸಕ್ಕೆ ಬಂದಿರುವ ಫಿಲಿಫೈನ್ಸ್‌ ದೇಶದ ದಂಪತಿ ಹಾಗೂ ಜಪಾನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕೇರಳ ಮೂಲದ ವಿದ್ಯಾರ್ಥಿಯೊಬ್ಬರು ಶೀತ, ಜ್ವರ-ತಲೆನೋವು ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಬಗ್ಗೆ ಸಾಮಾಜಿಕ ತಾಣ ಗಳಲ್ಲಿ ವದಂತಿ ಹಬ್ಬಿಸಲಾಗಿದ್ದು, ಸಾರ್ವಜನಿಕರು ಆತಂಕಪಡುವ ಅವಶ್ಯವಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಶೀತ, ಜ್ವರ, ತಲೆನೋವು ಕೊರೊನಾ ವೈರಸ್‌ನ ಲಕ್ಷಣವೂ ಆಗಿರುವುದರಿಂದ ಮತ್ತು ಫಿಲಿಫೈನ್ಸ್‌ ದೇಶವು ಕೊರೊನಾ ಬಾಧಿತ ಚೀನಾದ ನೆರೆಯ ರಾಷ್ಟ್ರವಾಗಿರುವುದರಿಂದ ಈ ದಂಪತಿ ಕೊರೊನಾ
ವೈರಸ್‌ ಸೋಂಕಿಗೆ ಚಿಕಿತ್ಸೆ ಪಡೆಯ ಲೆಂದೇ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವದಂತಿ ಸೋಮವಾರ ಹರಿದಾಡಿತ್ತು. ಕೇರಳದಲ್ಲಿಯೂ ಮೂವರು ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆಯಾಗಿರುವುದರಿಂದ ಕೇರಳದ ವಿದ್ಯಾರ್ಥಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುವುದು ವದಂತಿ ಹಬ್ಬಲು ಕಾರಣ ವಾಗಿರಬಹುದು ಎನ್ನಲಾಗುತ್ತಿದೆ.

ಮೂವರು ದಾಖಲು ನಿಜ ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ನವೀನ್‌ ಚಂದ್ರ ಕುಲಾಲ್‌, “ಮೂವರು ಚಿಕಿತ್ಸೆಗೆ ದಾಖಲಾಗಿ ರುವುದು ನಿಜ. ಅವರಲ್ಲಿ ಕೊರೊನಾ ವೈರಸ್‌ ಪತ್ತೆಯಾಗಿಲ್ಲ. ಆದಾಗ್ಯೂ ಅವರ ಮೇಲೆ ನಿಗಾ ವಹಿಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಬೇಡ ಎಂದಿದ್ದಾರೆ.

“ಜಿಲ್ಲೆಯ ಯಾವುದೇ ಆಸ್ಪತ್ರೆಗಳಲ್ಲಿ
ಕೊರೊನಾ ವೈರಸ್‌ಗೆ ಚಿಕಿತ್ಸೆ ಪಡೆಯಲು ಯಾರೇ ದಾಖಲಾದರೂ ಆರೋಗ್ಯ ಇಲಾಖೆಗೆ ಮಾಹಿತಿ ಬರುತ್ತದೆ. ವದಂತಿ ಹಬ್ಬಿಸಿ ಆತಂಕ ಸೃಷ್ಟಿಸಲು ಯಾರೂ ಮುಂದಾಗಬಾರದು’ ಎಂದಿದ್ದಾರೆ.

Advertisement

ವಿಮಾನ ನಿಲ್ದಾಣ, ಎನ್‌ಎಂಪಿಟಿಯಲ್ಲಿ ತಪಾಸಣೆ
ಪಕ್ಕದ ಕೇರಳದಲ್ಲಿ ಕಳೆದ ಮೂರ್‍ನಾಲ್ಕು ದಿನಗಳ ಅಂತರದಲ್ಲಿ ಮೂರು ಮಂದಿಯಲ್ಲಿ ಕೊರೊನಾ ವೈರಸ್‌ ಪತ್ತೆಯಾದ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಾದ ದ.ಕ.ದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ವೆನ್ ಲಾಕ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳನ್ನೊಳ ಗೊಂಡ ಪ್ರತ್ಯೇಕ ವಾರ್ಡ್‌, ಖಾಸಗಿ ಆಸ್ಪತ್ರೆಗಳಲ್ಲಿಯೂ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖಾಂತರ ಹೊರ ದೇಶಗಳಿಗೆ ತೆರಳುವ ಮತ್ತು ಹೊರ ದೇಶಗಳಿಂದ ಮಂಗಳೂರಿಗೆ ಆಗಮಿಸುವ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಎನ್‌ಎಂಪಿಟಿಯಲ್ಲಿಯೂ ತಪಾಸಣೆ ನಡೆಸಲಾಗುತ್ತಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌ ತಿಳಿಸಿದ್ದಾರೆ.

ಹೈ-ಅಲರ್ಟ್‌ ಘೋಷಣೆ
ಕೇರಳದ ಗಡಿ ಜಿಲ್ಲೆಯಾದ ದ.ಕ. ಸೇರಿದಂತೆ ಕೇರಳದ ಗಡಿ ಜಿಲ್ಲೆಗಳಲ್ಲಿ ಹೈ-ಅಲರ್ಟ್‌ ಘೋಷಣೆ ಮಾಡಲಾ ಗಿದೆ ಎಂದು ಆರೋಗ್ಯ ಸಚಿವರು ಸೋಮವಾರ ಹೇಳಿದ್ದಾರೆ. ದ.ಕ. ಜಿಲ್ಲೆಯಲ್ಲಿ ವೈರಸ್‌ ಹರಡುವ ಕಾರಣಕ್ಕೆ ಮಾಸ್ಕ್ ಧರಿಸಬೇಕೆಂಬ ಯಾವುದೇ ಸೂಚನೆ ಇಲ್ಲವಾದರೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಆರೋಗ್ಯ ಇಲಾಖೆ ಮಾಸ್ಕ್ ಗಳನ್ನು ತರಿಸಿದೆ ಎಂದು ಡಿಸಿ ತಿಳಿಸಿದ್ದಾರೆ.

ಕೊರೊನಾ ಲಕ್ಷಣ
ತೀವ್ರ ಜ್ವರ ಪ್ರಾರಂಭ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ಭೇದಿ ಕೊರೊನಾ ವೈರಸ್‌ನ ಲಕ್ಷಣ. ಸಣ್ಣ ಮಕ್ಕಳಿಗೆ, ಹಿರಿಯರಿಗೆ, ಕ್ಯಾನ್ಸರ್‌, ಎಚ್‌ಐವಿ, ಅಸ್ತಮಾ ರೋಗಿಗಳಿಗೆ ಈ ವೈರಸ್‌ ತಗುಲಿದರೆ ಅಪಾಯಕಾರಿಯಾಗಿರುತ್ತದೆ. ಮುಖ್ಯವಾಗಿ ಸೋಕಿಂತರು ಕೆಮ್ಮಿದಾಗ, ಸೀನಿದಾಗ ಈ ವೈರಸ್‌ ಮತ್ತೂಬ್ಬರಿಗೆ ಹರಡುತ್ತದೆ. ವೈಯಕ್ತಿಕ ಸ್ವತ್ಛತೆ ಇಲ್ಲದೇ ಮೂಗು, ಬಾಯಿ ಮುಟ್ಟುವುದರಿಂದಲೂ ಸೋಂಕು ಹರಡಬಹುದು. ಯಾವುದೇ ಮಾಹಿತಿ ಬೇಕಿದ್ದರೂ ಜಿಲ್ಲಾ ಸರ್ವೇಕ್ಷಣಾ ಘಟಕ ಅಥವಾ ಹೆಲ್ಪ್ಲೈನ್‌ ಸಂಖ್ಯೆ 104ನ್ನು ಸಂಪರ್ಕಿಸಬಹುದು. ಕೆಮ್ಮುವಾಗ ಮತ್ತು ಸೀನುವಾಗ ಬಾಯಿಗೆ ಕರವಸ್ತ್ರ ಅಡ್ಡ ಹಿಡಿಯುವ ಮೂಲಕ ಮತ್ತು ಕೈಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಅನಾರೋಗ್ಯದ ಲಕ್ಷಣಗಳು ಕಂಡು ಬಂದರೆ ಅವರೊಂದಿಗೆ ನಿಕಟ ಸಂಪರ್ಕ ಹೊಂದಬೇಡಿ. ಪ್ರಾಣಿಗಳ ನೇರ ಸಂಪರ್ಕ ಹಾಗೂ ಬೇಯಿಸದ ಕಚ್ಚಾ ಮಾಂಸ ಸೇವನೆಯನ್ನು ಮಾಡಬಾರದು.

ಕೊರೊನಾ ವೈರಸ್‌ಗೆ ಸಂಬಂಧಪಟ್ಟಂತೆ ದ.ಕ. ಜಿಲ್ಲೆಯಲ್ಲಿ ಹೈ-ಅಲರ್ಟ್‌ ಘೋಷಣೆಯ ಯಾವುದೇ ಆದೇಶ ಬಂದಿಲ್ಲ. ನೆರೆಯ ಕೇರಳದಲ್ಲಿ ಮೂರು ಕೊರೊನಾ ವೈರಸ್‌ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎನ್‌ಎಂಪಿಟಿ, ವಿಮಾನ ನಿಲ್ದಾಣದಲ್ಲಿ ಎಲ್ಲರನ್ನು ತಪಾಸಣೆಗೊಳಪಡಿಸಲಾಗುತ್ತಿದೆ.
– ಸಿಂಧೂ ಬಿ. ರೂಪೇಶ್‌, ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next