ಕಲಬುರಗಿ: ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ಮಹಾಮಾರಿ ದೇಶಾದ್ಯಂತ ವ್ಯಾಪಕವಾಗಿ ಹಬ್ಬಲಾರಂಭಿಸಿದ್ದು, ಏತನ್ಮಧ್ಯೆ ಕಲಬುರಗಿಯಲ್ಲಿ ಸಾವನ್ನಪ್ಪಿದ್ದ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ವೈರಸ್ ತಗುಲಿರುವುದು ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10ಕ್ಕೆ ಏರಿದಂತಾಗಿದೆ.
ಕಲಬುರಗಿಯಲ್ಲಿ 63 ವರ್ಷದ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರಿಗೆ ಸೋಂಕು ತಗುಲಿದೆ. ವೃದ್ಧ ಇತ್ತೀಚೆಗಷ್ಟೇ ಸಾವನ್ನಪ್ಪುವ ಮೂಲಕ ದೇಶದಲ್ಲಿ ಮೊದಲ ಕೊರೊನಾ ಸಾವಿನ ಪ್ರಕರಣ ದಾಖಲಾಗಿತ್ತು. ಇದೀಗ ಮೃತ ವೃದ್ಧನಿಗೆ ಆತನ ಮನೆಯಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.
ಆಸ್ಪತ್ರೆಗೆ ರವಾನೆ: ಕೊರೊನಾ ಸೋಂಕಿತ ವೈದ್ಯ ಸದ್ಯಕ್ಕೆ ಮನೆಯಲ್ಲಿ ನಿಗಾವಣೆಯಲ್ಲಿ ಇದ್ದು, ತಕ್ಷಣವೇ ಇಎಸ್ಐ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಐಸೋಲೇಟೆಡ್ ವಾರ್ಡ್ ಗೆ ರವಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಶರತ್ ತಿಳಿಸಿದ್ದಾರೆ.
ಅಲ್ಲದೇ, ವೈದ್ಯನೊಂದಿಗೆ ಸಂಪರ್ಕದಲ್ಲಿದ್ದವರನ್ನೂ ಗುರುತಿಸಲಾಗುವುದು ಹಾಗೂ ವೈದ್ಯನ ಕುಟುಂಬದವರನ್ನು ಮನೆಯಲ್ಲೇ ಇರಿಸಿ ಐಸೋಲೇಟೆಡ್ ಮಾಡಲಾಗವುದು ಎಂದು ಅವರು ಹೇಳಿದ್ದಾರೆ.
ಎರಡನೇ ಸೋಂಕು: ಮೃತ ವೃದ್ಧನೊಂದಿಗೆ ನೇರ ಸಂಪರ್ಕದಲ್ಲಿದ್ದ ಒಟ್ಟು ಆರು ಜನರ ಗಂಟಲು ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದೆ. ಆರು ಜನರ ಪೈಕಿ ಇಬ್ಬರಿಗೆ ಸೋಂಕು ಹರಡಿರುವುದು ದೃಢ ಪಟ್ಟಿದೆ. ಇದಕ್ಕೂ ಮೊದಲು ಮೃತನ ಕುಟುಂಬದ 45 ವರ್ಷದ ಮಹಿಳೆಗೆ ಸೋಂಕು ಹರಡಿರುವುದು ಖಚಿತವಾಗಿತ್ತು. ಇನ್ನು, ಮೂವರಿಗೆ ಸೋಂಕು ಹರಡಿಲ್ಲ ಎಂದು ಪ್ರಯೋಗಾಲಯದ ವರದಿ ಈ ಹಿಂದೆ ಹೇಳಿದೆ. ಇನ್ನೊಬ್ಬರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಿದೆ.