Advertisement
ಚೀನ ಮೂಲದ “ವರ್ಲ್ಡ್ ಡ್ರೀಮ್’ ಐಷಾರಾಮಿ ಪ್ರವಾಸಿ ಹಡಗಿನಲ್ಲಿ ಸಿಬಂದಿಯಾಗಿರುವ ಕುಂಪಲದ ಮಾಧವ ಬಂಗೇರ ಅವರ ಪುತ್ರ ಗೌರವ್ ಅವರ ಮದುವೆ ಮಂಗಳೂರಿನಲ್ಲಿ ಸೋಮವಾರ ನಡೆಯುವುದೆಂದು ನಿಗದಿಯಾಗಿತ್ತು. ಪೂರ್ವ ಕಾರ್ಯಸೂಚಿಯಂತೆ ಗೌರವ್ ಅವರು ಶುಕ್ರವಾರ ಬೆಳಗ್ಗೆ ಮಂಗಳೂರು ತಲುಪಬೇಕಿತ್ತು. ಆದರೆ ಅವರ ಹಡಗಿಗೆ ನಿಗದಿತ ತಾಣದಲ್ಲಿ ಪ್ರವಾಸವನ್ನು ಕೊನೆಗೊಳಿಸಲು ಅವಕಾಶ ನಿರಾಕರಿಸಿದ್ದರಿಂದ ಇಕ್ಕಟ್ಟಿಗೆ ಸಿಲುಕಿದರು. ಈಗ ಅವರ ಹಡಗು ಹಾಂಕಾಂಗ್ ತಲುಪಿದ್ದು, ಕೊರೊನಾ ಭೀತಿಯಿಂದಾಗಿ ಎಲ್ಲರನ್ನೂ ಹಡಗಿನಲ್ಲಿಯೇ ಉಳಿಸಿಕೊಂಡು ನಿಗಾ ಇರಿಸಲಾಗಿದೆ. ಆದುದರಿಂದ ಹಡಗಿನಲ್ಲಿರುವ ಸಾವಿರಾರು ಮಂದಿ ಎಲ್ಲಿಯೂ ಹೋಗಲಾರದೆ ಸಿಲುಕಿಕೊಂಡಿದ್ದಾರೆ.
ಗೌರವ್ ಅವರಿದ್ದ ಹಡಗು ಜ. 26ರಂದು ಚೀನದಿಂದ ಪ್ರವಾಸ ಬೆಳೆಸಿ ತೈವಾನ್‌ನಲ್ಲಿ ಫೆ. 5ರಂದು ಪ್ರವಾಸ ಕೊನೆಗೊಳಿಸಬೇಕಿತ್ತು. ಆದರೆ ಈ ನಡುವೆ ಕೊರೊನಾ ವೈರಸ್ ಜಗತ್ತಿನ ವಿವಿಧ ದೇಶಗಳಿಗೆ ಹಬ್ಬಿದ್ದರಿಂದ ಚೀನದಿಂದ ಹೊರಟಿರುವ ಈ ನೌಕೆಯ ಮೇಲೂ ಸಂಶಯ ತಾಳಿ ತೈವಾನ್‌ನಲ್ಲಿ ಜನರನ್ನು ಇಳಿಸಲು ಅವಕಾಶ ನೀಡಿರಲಿಲ್ಲ. ಅನಂತರ ಹಡಗು ಹಾಂಕಾಂಗ್‌ಗೆ ಪ್ರಯಾಣಿಸಿತು. ಅಲ್ಲಿಯೂ ನಿರ್ಬಂಧ ವಿಧಿಸಿದ್ದರಿಂದ ಪ್ರಸ್ತುತ ಹಡಗು ಬಂದರು ಪ್ರದೇಶದಲ್ಲಿ ಲಂಗರು ಹಾಕಿದೆ. ಹಡಗಿನಲ್ಲಿರುವ ಸಿಬಂದಿ ಸಹಿತ ಎಲ್ಲ ಪ್ರಯಾಣಿಕರನ್ನು ಈಗಾಗಲೇ ಒಂದು ಬಾರಿ ತಪಾಸಣೆ ನಡೆಸಲಾಗಿದೆ. ಅದರಲ್ಲಿ ಯಾರಿಗೂ ಕೊರೊನಾ ಇರುವ ಅಂಶ ಪತ್ತೆಯಾಗಿಲ್ಲ. ಹಡಗಿನಲ್ಲಿ 1,600 ಮಂದಿ ಪ್ರಯಾಣಿಕರಿದ್ದು, ನೂರಾರು ಮಂದಿ ಸಿಬಂದಿ ಇದ್ದಾರೆ. ಈ ಹಡಗಿನಲ್ಲಿ ಒಟ್ಟು 80 ಮಂದಿ ಭಾರತೀಯರು ಇದ್ದಾರೆ. ಎಲ್ಲ ತಯಾರಿ ನಡೆದಿತ್ತು
ಗೌರವ್ ಮದುವೆಗಾಗಿ ಎಲ್ಲ ತಯಾರಿ ನಡೆದಿತ್ತು. ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚಿ, ಅವಶ್ಯ ವಸ್ತುಗಳ ಖರೀದಿ ನಡೆದು, ರವಿವಾರ ಮೆಹಂದಿ ಎಂದು ನಿರ್ಧರಿಸಲಾಗಿತ್ತು. ಆದರೆ ಗೌರವ್‌ಗೆ ಪ್ರಯಾಣ ಬೆಳೆಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಮದುವೆಯನ್ನು ಮುಂದೂಡಲಾಗಿದೆ.