ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೋನಾ ವೈರಸ್ ಸದ್ಯ ನಿಧಾನವಾಗಿ ವಿಶ್ವದ ಇತರ ದೇಶಗಳಿಗೂ ತನ್ನ ಕಬಂದ ಬಾಹುಗಳನ್ನು ಚಾಚುತ್ತಿದೆ. ಕೊರೋನಾ ವೈರಸ್ ಸದ್ಯ ಅನೇಕ ದೇಶಗಳ ನೆಮ್ಮದಿ, ನಿದ್ದೆ ಎರಡನ್ನೂ ಕಸಿದುಕೊಂಡಿದೆ. ಈಗ ಈ ಕೊರೋನಾ ವೈರಸ್ ಅನ್ನೋ ಮಹಾಮಾರಿಯ ಎಫೆಕ್ಟ್ ಕನ್ನಡ ಚಿತ್ರರಂಗಕ್ಕೂ ನಿಧಾನವಾಗಿ ತಟ್ಟುತ್ತಿದೆ. ಅದು ಹೇಗೆ ಅಂತೀರಾ? ಹೇಳ್ತೀವಿ ಕೇಳಿ…
ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ರಾಬರ್ಟ್’ ಚಿತ್ರದ ಶೂಟಿಂಗ್ ಭರದಿಂದ ನಡೆಯು ತ್ತಿದೆ. ಕೆಲ ದಿನಗಳ ಹಿಂದಷ್ಟೇ ವಾರಣಾಸಿಗೆ ಹೋಗಿ ಚಿತ್ರದ ಬಹುತೇಕ ಟಾಕಿ ಪೋರ್ಷನ್ ಶೂಟಿಂಗ್ ಮಾಡಿಕೊಂಡು ಬಂದಿದ್ದ ಚಿತ್ರತಂಡ, ಚಿತ್ರದ ಬಾಕಿಯಿರುವ ಹಾಡುಗಳ ಚಿತ್ರೀಕರಣಕ್ಕಾಗಿ ವಿದೇಶಗಳಿಗೆ ಹೋಗುವ ಪ್ಲಾನ್ ಹಾಕಿಕೊಂಡಿತ್ತು. ಅದರಂತೆ ಸ್ಪೇನ್ ಸೇರಿದಂತೆ ಕೆಲ ದೇಶಗಳಲ್ಲಿ ಚಿತ್ರದ ಹಾಡಿನ ಚಿತ್ರೀಕರಣಕ್ಕೂ ಚಿತ್ರತಂಡ ಯೋಜನೆ ಮಾಡಿಕೊಂಡಿತ್ತು.
ಆದರೆ ಈಗ ವಿದೇಶಗಳಲ್ಲಿ ಕೊರೋನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ, “ರಾಬರ್ಟ್’ ತನ್ನ ಸ್ಪೇನ್ ಮತ್ತಿತರ ದೇಶಗಳಲ್ಲಿ ಹಾಡಿನ ಚಿತ್ರೀಕರಣ ಮಾಡುವ ತನ್ನ ಪ್ಲಾನ್ ಕ್ಯಾನ್ಸಲ್ ಮಾಡಿದೆ ಎನ್ನಲಾಗುತ್ತಿದೆ. ಚಿತ್ರತಂಡದ ಮೂಲಗಳ ಪ್ರಕಾರ, ಸ್ಪೇನ್ ಬದಲು ಕೊರೋನಾ ಹಾವಳಿ ಇಲ್ಲದ ಬೇರೆ ದೇಶಗಳಲ್ಲಿ ಚಿತ್ರದ ಹಾಡಿನ ಚಿತ್ರೀಕರಣ ಮಾಡುವ ಯೋಚನೆಯಲ್ಲಿರುವ ಚಿತ್ರತಂಡ,
ಅದಕ್ಕಾಗಿ ಪರ್ಯಾಯ ದೇಶಗಳ ಹುಡುಕಾಟದಲ್ಲಿದೆ. ಅಥವಾ ಕೆಲಕಾಲ ಚಿತ್ರೀಕರಣವನ್ನು ಮುಂದೂಡಬಹುದೇ ಎನ್ನುವ ಯೋಚನೆಯನ್ನೂ ಮಾಡುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ಏಪ್ರಿಲ್ 9ಕ್ಕೆ ಚಿತ್ರವನ್ನು ತೆರೆಗೆ ತರಲು ತಯಾರಿ ಮಾಡಿಕೊಳ್ಳುತ್ತಿರುವ ಚಿತ್ರತಂಡ, ಆದಷ್ಟು ಬೇಗ ಚಿತ್ರದ ಬಾಕಿ ಉಳಿದ ಚಿತ್ರೀಕರಣ ಮತ್ತಿತರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ.
ಉಮಾಪತಿ ನಿರ್ಮಿಸುತ್ತಿರುವ “ರಾಬರ್ಟ್’ ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ತೆರೆ ಕಾಣಲಿದ್ದು, ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯಿದೆ. ಚಿತ್ರದಲ್ಲಿ ದರ್ಶನ್‌ಗೆ ಜೋಡಿಯಾಗಿ ಆಶಾ ಭಟ್ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ “ರಾಬರ್ಟ್’ ಟೀಸರ್, ಫಸ್ಟ್‌ಲುಕ್ ದರ್ಶನ್ ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಮಾರ್ಚ್ ವೇಳೆಗೆ “ರಾಬರ್ಟ್’ ಆಡಿಯೋ ಬಿಡುಗಡೆಯಾಗುವ ನಿರೀಕ್ಷೆಯಿದೆ.
“ರಾಬರ್ಟ್’ ಮಾತ್ರವಲ್ಲದೆ ಈಗಾಗಲೇ ವಿದೇಶದಲ್ಲಿ ಚಿತ್ರೀಕರಣಕ್ಕೆ ಪ್ಲಾನ್ ಹಾಕಿಕೊಂಡಿರುವ ಕನ್ನಡದ ಹಲವು ಚಿತ್ರಗಳು ಕೂಡ ಸದ್ಯದ ಮಟ್ಟಿಗೆ ಭಾರತದಿಂದ ಹೊರಗೆ ಶೂಟಿಂಗ್ ಹೋಗುವ ತಮ್ಮ ಯೋಚನೆಗೆ ಬ್ರೇಕ್ ಹಾಕಿವೆ. ಒಟ್ಟಾರೆ ಭಾರತದ ಹೊರಗೆ ಸದ್ದು ಮಾಡುತ್ತಿರುವ ಕೊರೋನಾ ಎಫೆಕ್ಟ್ ಸ್ಯಾಂಡಲ್‌ವುಡ್ ಮೇಲೂ ಒಂದಷ್ಟು ಪರಿಣಾಮ ಬೀರಿದ್ದು, ವಿದೇಶಕ್ಕೆ ಹಾರಲು ಸಿದ್ಧವಿದ್ದ ಅನೇಕ ಚಿತ್ರತಂಡಗಳು ಕೆಲ ದಿನಗಳ ಮಟ್ಟಿಗೆ ತಮ್ಮ ಹಾರಾಟಕ್ಕೆ ಬ್ರೇಕ್ ಹಾಕಿವೆ.