ಹಾಸನ: ಎರಡನೇ ಹಂತದಲ್ಲಿ ಪೊಲೀಸ್, ಕಂದಾಯ,ಗೃಹ ರಕ್ಷಕರು, ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮ ಪಂಚಾಯತ್ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರಿಗೆ ಲಸಿಕೆ ನೀಡಬೇಕು ಎಂದು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದ ಜಿಲ್ಲಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಶನಿವಾರ ವಿಡಿಯೋ ಸಂವಾದ ನಡೆಸಿದ ಅವರು, ಕೊರೊನಾ ಲಸಿಕೆಯನ್ನು ಪೊಲೀಸ್ ಸಿಬ್ಬಂದಿಗೆ ನೀಡಿ ನಂತರ ಇತರೆ ಆರೋಗ್ಯ ಸಿಬ್ಬಂದಿ ಪ್ರೇರಣೆಗೊಂಡು ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಾರೆ ಹಾಗೂ ಲಸಿಕೆ ಹಾಕಿಸಿಕೊಳ್ಳುವಂತೆ ಹೆಚ್ಚು ಪ್ರಚಾರ ಮಾಡಿ ಎಂದು ನಿರ್ದೇಶಿಸಿದರು.
ಪ್ರಾಮಾಣಿಕರಿಸಿದ ನಂತರವೇ ಲಸಿಕೆ: ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದು ಸ್ವಯಂ ಪ್ರೇರಿತವಾಗಿದ್ದು, ಸೋಂಕಿನ ವಿರುದ್ಧ ತಮ್ಮನ್ನು ರಕ್ಷಿಸಿಕೊಳ್ಳುವ ಹಾಗೂ ತಮ್ಮ ನಿಕಟ ಸಂಪರ್ಕದಲ್ಲಿರುವ ಕುಟುಂಬ ಸದಸ್ಯರು, ಸ್ನೇಹಿತರು, ಸಂಬಂಧಿಕರು ಮತ್ತು ಸಹೋದ್ಯೋಗಿಗಳಿಗೆ ಸೂಕ್ತ ಲಸಿಕೆ ಹಾಕಲಾಗುತ್ತದೆ. ಸುರಕ್ಷತೆ ಮತ್ತು ಪರಿಣಾಮದ ಆಧಾರದ ಮೇಲೆ ನಿಯಂತ್ರಣ ಸಂಸ್ಥೆಗಳು ಅದನ್ನು ಪ್ರಾಮಾಣಿಕರಿಸಿದ ನಂತರವೇ ಲಸಿಕೆ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
8 ವಾರ ಮುಂದೂಡಬಹುದು: ನಿಗದಿ ಪಡಿಸಲಾದ ಲಸಿಕೆಯ ಸಂಪೂರ್ಣ ಡೋಸ್‌ಗಳನ್ನು ಪಡೆಯುವುದು ಸೂಕ್ತ ಹಾಗೂ ಸೋಂಕಿನ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯ. ಸೋಂಕಿತ ಅಥವಾ ದೃಢಪಟ್ಟ ವ್ಯಕ್ತಿಯು ಲಸಿಕೆ ಹಾಕುವ ಸ್ಥಳದಲ್ಲಿ ಇತರರಿಗೆ ಹರಡುವ ಸಾಧ್ಯತೆ ಇರುವುದರಿಂದ ಸೋಂಕನ್ನು ಹೊಂದಿರುವ ವ್ಯಕ್ತಿಗಳು ಲಕ್ಷಣಗಳು ಕಡಿಮೆಯಾದ ನಂತರ 8 ವಾರಗಳ ಲಸಿಕೆ ಹಾಕಿಸಿಕೊಳ್ಳುವುದನ್ನು ಮುಂದೂಡಬಹುದು ಎಂದು ತಿಳಿಸಿದರು.
ಆನ್ಲೈನ್ ಮೂಲಕ ನೋಂದಣಿ: ಲಸಿಕೆಯನ್ನು ಪಡೆಯುವ ವ್ಯಕ್ತಿಯು ಭಾವಚಿತ್ರರುವ ಗುರುತಿನ ಚೀಟಿಯನ್ನು ನೋಂದಣಿ ಮಾಡಕೂಳ್ಳವುದು ಮತ್ತು ಲಸಿಕಾ ಪಡೆಯುವ ಸಮಯದಲ್ಲಿ ಗುರುತಿನ
ಚೀಟಿಯ ಪರಿಶೀಲನೆ ಅಗತ್ಯವಿರುತ್ತದೆ. ಲಸಿಕೆ ಪಡೆಯುವ ಫಲಾನುಭವಿಯು ಆನ್‌ಲೈನ್ ನೋಂದ ಣಿಯ ನಂತರ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನಿಗದಿತ ದಿನಾಂಕ, ಸ್ಥಳ ಮತ್ತು ಲಸಿಕೆ ನೀಡುವ ಸಮಯದ ಮಾಹಿತಿಯನ್ನು ಎಸ್‌ಎಂಎಸ್ ಮೂಲಕ ಪಡೆಯಬಹುದು ಎಂದು ವಿವರಿಸಿದರು.
ಇದನ್ನೂ ಓದಿ :ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ
ಲಸಿಕೆ ಪಡೆದವರಿಗೆ ಪತ್ರ: ಲಸಿಕೆಯ ಡೋಸ್ ಪಡೆದ ನಂತರ ಫಲಾನುಭವಿಗಳಿಗೆ ಅವರ ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಸಂದೇಶ ಕಳುಹಿಸಲಾಗುತ್ತದೆ. ಸೂಚಿತ ಎಲ್ಲ ಡೋಸ್ ನೀಡಿಕೆ ನಂತರ ಕ್ಯೂ ಆರ್ ಕೋಡ್ ಇರುವ ಪತ್ರವನ್ನು ಸಹ ಕಳುಹಿಸಲಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಗಿರೀಶ್, ಅಪರ ಜಿಲ್ಲಾಧಿಕಾರಿ ಕವಿತಾರಾಜಾರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ಕುಮಾರ್, ತಹಶೀಲ್ದಾರ್ ಶಿವಶಂಕರಪ್ಪ ಹಾಜರಿದ್ದರು.