Advertisement

ಹಿಮ್ಸ್‌ ಆಸ್ಪತ್ರೆಯಲ್ಲಿ ಕೊರೊನಾ ವೈರಸ್‌ ಪರೀಕ್ಷಾ ಕೇಂದ್ರ

09:31 PM Mar 10, 2020 | Lakshmi GovindaRaj |

ಹಾಸನ: ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾ ವೈರಸ್‌ ಪರೀಕ್ಷೆಯ ಪ್ರಯೋಗಾಲಯ ತೆರೆಯಲಾಗಿದೆ. ಕೊರೊನಾ ಶಂಕಿತರು, ಸೋಂಕಿತರಿಗೆ ಚಿಕಿತ್ಸೆ ನೀಡಲು ವಿಶೇಷ ವಾರ್ಡ್‌ನ ವ್ಯವಸ್ಥೆಯನ್ನೂ ಮಾಡಲಾಗಿದೆ. ಯಾರಾದರೂ ದೇಶದಿಂದ ವಾಪಸ್‌ ಬಂದಿರುವ ಬಗ್ಗೆ ಮಾಹಿತಿ ಇದ್ದರೆ ಹೆಲ್ಪ್ ಲೈನ್‌ ಸಂ. 08172-246575 ಗೆ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದ ಹಿಮ್ಸ್‌ ಆಸ್ಪತ್ರೆಯಲ್ಲಿ ಫ್ರಾ°ಸ್‌ನಿಂದ ವಾಪಸಾಗಿ ದಾಖಲಾಗಿದ್ದ ನಗರ ನಿವಾಸಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಯಾವ ರೋಗದ ಲಕ್ಷಣಗಳು ಇಲ್ಲ ಎಂಬುದು ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿದರು. ವಿದೇಶಿಗರು, ವಿದೇಶಗಳಿಂದ ವಾಪಸ್‌ ಬಂದಿರುವವರ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಹಿಮ್ಸ್‌ ಆಸ್ಪತ್ರೆ ಹಾಗೂ ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಅದಕ್ಕಾಗಿಯೇ ದಿನದ 24 ಗಂಟೆಯ ಸೇವೆಯಲ್ಲಿರುವ ಹೆಲ್ಪ್ ಲೈನ್‌ ಸಂಖ್ಯೆ 08172 – 246575 ಸಿದ್ಧವಾಗಿದೆ ಎಂದರು.

ವಿದೇಶಿ ಪ್ರವಾಸಿಗಳ ಮಾಹಿತಿ ನೀಡಿ: ಹಿಮ್ಸ್‌ ಆಸ್ಪತ್ರೆಯಲ್ಲಿ ಕೊರೊನಾ ವೈರಸ್‌ ಪತ್ತೆ ಪ್ರಯೋಗಾಲಯ ತೆರೆಯಲಾಗಿದೆ. ಹೋಟೆಲ್‌, ರೆಸಾರ್ಟ್‌ ಹೋಂ ಸ್ಟೇಗಳಿಗೆ ಆಗಮಿಸುವ ವಿದೇಶಿ ಪ್ರವಾಸಿಗರ ಬಗ್ಗೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕ್ಷಿಪ್ರಕಾರ್ಯಾಚರಣೆ ತಂಡವನ್ನು ರಚಿಸಲಾಗಿದೆ. ತಾಲೂಕು ಮಟ್ಟದಲ್ಲಿ ಆಯಾ ತಾಲೂಕು ಆರೋಗಗಳ ಹಾಗೂ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಜವಾಬ್ದಾರಿಯುತ ಅಧಿಕಾರಿಗಳಾಗಿರುತ್ತಾರೆ ಎಂದು ಸೂಚಿಸಿದರು.

10ಸಾವಿರ ಮಾಸ್ಕ್ ದಾಸ್ತಾನು: ಜಿಲ್ಲಾದ್ಯಂತ ಆರೋಗ್ಯ ಸಂಸ್ಥೆಗಳಿಗೆ ಬೇಡಿಕೆಯ ಅನುಗುವಾಗಿ ಮಾಸ್ಕ್ಗಳನ್ನು ವಿತರಿಸಲಾಗಿದೆ. ಪ್ರಸ್ತುತ 10 ಸಾವಿರ ಮಾಸ್ಕ್ಗಳ ದಾಸ್ತಾನು ಇರಿಸಲಾಗಿದೆ. ಹೆಚ್ಚುವರಿ ಬೇಡಿಕೆ ಬಂದಲ್ಲಿ ಅಗತ್ಯತೆಗೆ ಅನುಗುಣವಾಗಿ ವಿತರಿಸಲಾಗುವುದು. ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಲಾಗಿದ್ದು, ಕರಪತ್ರ, ಭಿತ್ತಿಪತ್ರ ಸೇರಿದಂತೆ ವಿವಿಧ ಆರೋಗ್ಯ ಶಿಕ್ಷಣದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಕೊರೋನಾದಿಂದ ಸುರಕ್ಷತೆ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌ ಕುಮಾರ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಆರ್‌.ಕೃಷ್ಣಮೂರ್ತಿ, ಡಾ.ಹಿರಣ್ಣಯ್ಯ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next