ಬೆಂಗಳೂರು: ಕೊರೊನಾ ಕುರಿತು ಜನರಲ್ಲಿರುವ ಭೀತಿಯನ್ನು ಬಂಡವಾಳ ಮಾಡಿಕೊಂಡು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾಸ್ಕ್ ಮಾರಾಟ ಮಾಡುವವರ ವಿರುದ್ಧ ಕಠಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಕುರಿತು ಜನರ ಭೀತಿಯನ್ನು ಲಾಭವಾಗಿಸಿಕೊಳ್ಳಲು ಕೆಲವು ಫಾರ್ಮಸಿಸ್ಟ್‌ಗಳು ಮತ್ತು ಔಷಧ ವಿತರಕ ಕಂಪೆನಿಗಳು ಮಾಸ್ಕ್ ಕೊರತೆ ಸೃಷ್ಟಿಸಿ, ಹಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂಥವರ ವಿರುದ್ಧ ಶಿಸ್ತು ಕ್ರಮ ಜರಗಿಸಲಾಗುವುದು. ಯಾರಾದರೂ ಎಂಆರ್‌ಪಿಗಿಂತ ಹೆಚ್ಚು ಬೆಲೆಗೆ ಮಾಸ್ಕ್ ಮಾರಾಟ ಮಾಡುತ್ತಿದ್ದರೆ ಸಾರ್ವಜನಿಕರು ಆರೋಗ್ಯವಾಣಿ 104ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು. ಸೋಂಕಿತ ಕಾರ್ಮಿಕರಿಗೆ ವೇತನ ಸಹಿತ ರಜೆಗೆ ಕಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸಿದೆ ಎಂದು ತಿಳಿಸಿದರು.
ಇತ್ತೀಚೆಗೆ ಯಾರಾದರೂ ವಿದೇಶಕ್ಕೆ ಹೋಗಿಬಂದಿದ್ದರೆ ಅವರು ವಿದೇಶದಿಂದ ಬಂದ 14 ದಿನಗಳ ಕಾಲ ಮನೆಯಲ್ಲಿಯೇ ಇರಬೇಕು. ಆ ಬಳಿಕ ಒಮ್ಮೆ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬಂದು ಇತರರೊಡನೆ ಬೆರೆಯಬೇಕು. ಶಂಕಿತರು, ಸೋಂಕಿತರು ಮತ್ತವರ ಒಡನಾಟ ಹೊಂದಿರುವವರು ಮಾತ್ರ ಎನ್95 ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಉಳಿದಂತೆ ಸಾಮಾನ್ಯರು ಮೂರು ಪದರಗಳ ಸರ್ಜಿಕಲ್ ಮಾಸ್ಕ್ ಬಳಸಿದರೆ ಸಾಕು. ಇದರ ಜತೆಗೆ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಐದು ಮಂದಿ ಶಂಕಿತರು
ಕೊರೊನಾ ಸೋಂಕು ತಗಲಿರಬಹುದು ಎಂಬ ಶಂಕೆಯಿಂದ ವಿದೇಶದಿಂದ ಬಂದ ಐದು ಮಂದಿಯನ್ನು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿಕೊಂಡು ನಿಗಾವಹಿಸಲಾಗಿದೆ. ಬೆಂಗಳೂರಿನ ರಾಜೀವ್‌ಗಾಂಧಿ ಆಸ್ಪತ್ರೆಯಲ್ಲಿ ಮೂವರು, ಬೀದರ್ ಮತ್ತು ಉಡುಪಿಯಲ್ಲಿ ತಲಾ ಓರ್ವರ ಸಹಿತ ಐದು ಮಂದಿ ಆಸ್ಪತ್ರೆಯಲ್ಲಿದ್ದಾರೆ.
ಈ ಪೈಕಿ ಇರಾನಿ ಮೂಲ ವ್ಯಕ್ತಿಯ ಕೊರೊನಾ ಸೋಂಕು ವರದಿ ನೆಗೆಟಿವ್ ಬಂದಿದೆ. ಬೀದರ್, ಉಡುಪಿ ಸರಕಾರಿ ಆಸ್ಪತ್ರೆಗಳ ಶಂಕಿತರ ರಕ್ತ ಮಾದರಿಯನ್ನು ಬೆಂಗಳೂರಿನ ಎನ್‌ಐವಿ ಕೇಂದ್ರಕ್ಕೆ ಪರೀಕ್ಷೆಗೆಂದು ಕಳುಹಿಸಲಾಗಿದ್ದು, ಶುಕ್ರವಾರ ವರದಿಗಳು ಬರಲಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.