ತಿರುವನಂತಪುರಂ: ಕೊರೋನಾ ವೈರಸ್ ಪೀಡಿತರಾಗಿ ಇಲ್ಲಿನ ಅಲಪ್ಪುಝಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವಿಶೇಷ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರಲ್ಲಿ ಒಬ್ಬರು ಇಂದು ಬಿಡುಗಡೆಗೊಂಡಿದ್ದಾರೆ.
ಶಂಕಿತ ಕೊರೋನಾ ಸೋಂಕು ಪ್ರಕರಣದಲ್ಲಿ ಪಾಸಿಟಿವ್ ಪತ್ತೆಯಾಗಿ ಇಲ್ಲಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಒಬ್ಬರಲ್ಲಿ ಸೋಂಕು ನೆಗೆಟಿವ್ ಫಲಿತಾಂಶ ಬಂದ ಕಾರಣ ಅವರನ್ನು ಇಂದು ಬಿಡುಗಡೆಗೊಳಿಸಲಾಗಿದೆ.
ಸೋಂಕುಪೀಡಿತ ಇನ್ನಿಬ್ಬರು ರೋಗಿಗಳಲ್ಲಿ ಒಬ್ಬರು ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ ಮತ್ತು ಮೂರನೇ ರೋಗಿಯ ದೇಹಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.
‘ಈ ಭಯಾನಕ ವೈರಸ್ ವಿರುದ್ಧದ ಯುದ್ಧವನ್ನು ನಾವು ಅರ್ಧ ಗೆದ್ದಿದ್ದೇವೆ ಆದರೆ ಗಂಭೀರ ಪರಿಸ್ಥಿತಿಯಿಂದ ಪಾರಾಗಿದ್ದೇವೆ ಎಂದು ಈಗಲೇ ಹೇಳುವುದು ತಪ್ಪಾಗುತ್ತದೆ’ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ಹೇಳಿದ್ದಾರೆ.
‘ಇಂದು ಆಸ್ಪತ್ರೆಯಲ್ಲಿ ಬಿಡುಗಡೆಗೊಂಡ ವ್ಯಕ್ತಿಯಲ್ಲಿ ನಾನು ದೂರವಾಣಿ ಮೂಲಕ ಮಾತನಾಡಿದ್ದೇನೆ. ಅವರು ತುಂಬಾ ಉತ್ಸಾಹಭರಿತರಾಗಿದ್ದರು. ಚಿಕಿತ್ಸಾ ಬಳಿಕದ ವಿಶ್ರಾಂತಿಯೆಲ್ಲಾ ಮುಗಿದ ಬಳಿಕ ನನ್ನನ್ನು ಭೇಟಿ ಮಾಡುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು, ಅರೆ-ವೈದ್ಯಕೀಯ ಸಿಬ್ಬಂದಿಗಳು ಮತ್ತು ಆರೋಗ್ಯ ಕಾರ್ಯಕರ್ತರಿಗೆ ನಾನು ಈ ಸಂದರ್ಭದಲ್ಲಿ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ’ ಎಂದು ಆರೋಗ್ಯ ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.