Advertisement

ಇಟಲಿ ಪ್ರೇಮಿಗಳ ಹಿಂದೂ ಸಂಪ್ರದಾಯದ ಮದುವೆಗೆ ಅಡ್ಡಿಯಾದ ಕೊರೊನಾ!!

11:45 PM Mar 20, 2020 | Hari Prasad |

ನವದೆಹಲಿ: ಈ ಇಟಲಿ ಜೋಡಿಗೆ ಭಾರತೀಯ ಅದರಲ್ಲೂ ಹಿಂದೂ ಸಂಪ್ರದಾಯದಂತೆ ವಿವಾಹ ಬಂಧನಕ್ಕೊಳಗಾಗಬೇಕೆಂಬ ಬಯಕೆ. ಅದಕ್ಕಾಗಿ ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದ ಇವರು ಮಾರ್ಚ್ 7ರಂದು ಸಪ್ತಪದಿ ತುಳಿಯಲು ಸಜ್ಜಾಗಿ ರಾಜಸ್ಥಾನದಲ್ಲಿರುವ ಬಿಕಾನೇರ್ ಗೆ ಹೊರಟಿದ್ದರು.

Advertisement

ಆದರೆ ಕೊರೊನಾ ವೈರಸ್ ಪ್ರಕರಣ ದೇಶದಲ್ಲಿ ತಲ್ಲಣ ಎಬ್ಬಿಸಿರುವ ಕಾರಣದಿಂದ ಭಾರತ ಸರಕಾರದ ಆದೇಶದಂತೆ ದೇಶದಲ್ಲಿರುವ ಇಟಲಿ ಪ್ರಜೆಗಳನ್ನು ದೆಹಲಿಯ ಆ ದೇಶದ ರಾಯಭಾರಿ ಕಛೇರಿಗೆ ತಲುಪಿಸಬೇಕು ಎಂಬ ಆದೇಶದಂತೆ ಈ ಜೋಡಿಯನ್ನು ಮತ್ತು ಇವರ ಜೊತೆಯಲ್ಲಿ ಬಂದಿದ್ದವರನ್ನು ಬಿಕಾನೇರ್ ಗೆ ತೆರಳುತ್ತಿದ್ದ ಮಾರ್ಗ ಮಧ್ಯದಲ್ಲೇ ತಡೆದು ದೆಹಲಿಯಲ್ಲಿರುವ ಇಟಲಿ ರಾಯಭಾರಿ ಕಛೇರಿಗೆ ಕರೆತಂದ ಘಟನೆ ವರದಿಯಾಗಿದೆ.

ಇಟಲಿ ದೇಶದ ಪ್ರಜೆಗಳಾಗಿರುವ 56 ವರ್ಷದ ಆ್ಯಂಡ್ರಿಯಾ ಬೆಲ್ಲಿ ಹಾಗೂ 50 ವರ್ಷದ ಆ್ಯಂಟೊನೆಲ್ಲೋ ಸ್ಕ್ಯಾನೋ ಕಳೆದ 20 ವರ್ಷಗಳಿಂದ ಸಹ ಜೀವನ (ಲಿವಿಂಗ್ ಟುಗೆದರ್) ನಡೆಸುತ್ತಿದ್ದರು. ಈ ಜೊಡಿ ಕಳೆದ ವರ್ಷ ಫೆಬ್ರವರಿಯಲ್ಲೇ ಬಿಕಾನೇರ್ ಗೆ ಭೇಟಿ ನೀಡಿ ತಮ್ಮ ವಿವಾಹ ಮಹೋತ್ಸವದ ದಿನಾಂಕ, ಸ್ಥಳ, ಸಂಗೀತ ಕೂಟ ಹಾಗೂ ಊಟೋಪಚಾರ ವ್ಯವಸ್ಥೆಗಳನ್ನೆಲ್ಲಾ ಅಂತಿಮಗೊಳಿಸಿ ತೆರಳಿದ್ದರು. ಆ ಪ್ರಕಾರವಾಗಿ ಮೊನ್ನೆ ಮಾರ್ಚ್ 7ರಂದು ಇವರ ವಿವಾಹವು ಹಿಂದೂ ಸಂಪ್ರದಾಯದಂತೆ ನಡೆಯಬೇಕಿತ್ತು.

ಮದುವೆ ಸಂಭ್ರಮದಲ್ಲಿದ್ದ ಈ ಜೋಡಿ ಮತ್ತು ಅವರ ಬಳಗ ಮಾರ್ಚ್ 3ರಂದು ಜೈಪುರಕ್ಕೆ ಬಂದಿಳಿದಿತ್ತು. ಎರಡು ದಿನ ಜೈಪುರದಲ್ಲಿ ತಂಗಿದ್ದು ಮದುಮಕ್ಕಳಿಗಾಗಿ ಬಟ್ಟೆ ಒಡವೆಗಳನ್ನೆಲ್ಲಾ ಖರೀದಿಸಿ ಮಾರ್ಚ್ 5ರಂದು ಇವರೆಲ್ಲಾ ಬಿಕಾನೇರ್ ಗೆ ಹೊರಟಿದ್ದರು.

ಬಿಕಾನೇರ್ ಗೆ ಹೋಗುತ್ತಿದ್ದ ಸಮಯದಲ್ಲೇ ಇವರಿಗೆ ಸಿಕ್ಕಿದ ಸಂದೇಶದ ಪ್ರಕಾರ ಇಟಲಿ ದೇಶದ ಪ್ರಜೆಗಳೆಲ್ಲರೂ ಭಾರತದ ಯಾವುದೇ ಸ್ಥಳದಲ್ಲಿದ್ದರೂ ತಕ್ಷಣವೇ ದೆಹಲಿಗೆ ತೆರಳಿ ಅಲ್ಲಿರುವ ಇಟಲಿ ರಾಯಭಾರಿ ಕಛೇರಿಯಲ್ಲಿ ಡೆಪ್ಯುಟಿ ಚೀಫ್ ಮಿಶನ್ ಗೆ ವರದಿ ಮಾಡುವಂತೆ ಸೂಚಿಸಲಾಗುತ್ತದೆ ಎಂದು ವರನ ಕಡೆಯವರು ಉಳಿದುಕೊಳ್ಳಲು ವ್ಯವಸ್ಥೆಗೊಂಡಿದ್ದ ಕಿಶನ್ ಪ್ಯಾಲೇಸ್ ಹೊಟೇಲ್ ನ ಮಹೇಂದ್ರ ಸಿಂಗ್ ಶೇಖಾವತ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Advertisement

ಆದರೆ ಇದು ಅಧಿಕಾರಿಗಳ ನಡುವಿನ ಸಮನ್ವಯತೆಯ ಕೊರತೆಯ ಕಾರಣದಿಂದ ಉಂಟಾದ ಘಟನೆ ಎಂದು ತಿಳಿದುಬಂದಿದ್ದು, ಇದರಿಂದಾಗಿ ಭಾರತೀಯ ಸಂಸ್ಕೃತಿಗೆ ಮನಸೋತು ಇಲ್ಲಿನ ಪದ್ದತಿಯಂತೆ ವಿವಾಹಬೇಕೆಂದಿದ್ದ ಇಟಲಿ ಜೋಡಿಗೆ ಬಹಳ ನಿರಾಶೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next