ಗುಂಡ್ಲುಪೇಟೆ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕೇರಳದ ವ್ಯಾಪಾರಿಗಳು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆಗಮಿಸದ ಪರಿಣಾಮ, ತರಕಾರಿ ಖರೀದಿಸುವವರೇ ಇಲ್ಲದಂತಾಗಿದೆ. ಅಲ್ಲದೆ, ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.
ಕಳೆದ ವಾರದವರೆಗೂ ಪಟ್ಟಣದ ಮಾರುಕಟ್ಟೆ ಹಾಗೂ ತೆರಕಣಾಂಬಿಯ ಹರಾಜು ಕಟ್ಟೆಗಳಿಂದ ನಿತ್ಯ ನೂರಾರು ಲಾರಿಗಳಲ್ಲಿ ಕೇರಳ ಮತ್ತು ತಮಿಳುನಾಡಿಗೆ ತರಕಾರಿ ಹೋಗುತ್ತಿತ್ತು. ಕೊರೊನಾ ಭೀತಿಯಿಂದ ಎರಡೂ ರಾಜ್ಯಗಳಿಂದ ಖರೀದಿದಾರರು ಆಗಮಿಸದ ಹಿನ್ನೆಲೆಯಲ್ಲಿ ತರಕಾರಿ ಬೆಳೆದಿರುವ ರೈತರು ಹಾಗೂ ರೈತರಿಂದ ಪಡೆದು ಮಾರಾಟ ಮಾಡುವ ದಲ್ಲಾಳಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ಬೆರಳೆಣಿಕೆ ಸಂಖ್ಯೆಯಲ್ಲಿ ಖರೀದಿ: ಕಳೆದ ವಾರದವರೆಗೂ ಸಾಮಾನ್ಯವಾಗಿದ್ದ ಮಾರುಕಟ್ಟೆಗೆ ನಿತ್ಯ ನೂರಾರು ವ್ಯಾಪಾರಿಗಳು, ತಮ್ಮ ಟೆಂಪೋಗಳಲ್ಲಿ ಬಂದು ತರಕಾರಿ ಖರೀದಿಸುತ್ತಿದ್ದರು. ಆದರೆ, ಕೇರಳದಲ್ಲಿ ಕೊರೊನಾ ಹೆಚ್ಚಾದ ಹಿನ್ನೆಲೆಯಲ್ಲಿ ಯಾರೂ ಆಗಮಿಸುತ್ತಿಲ್ಲ. ಬೆರಳೆಣಿಕೆ ಸಂಖ್ಯೆಯಲ್ಲಿ ಮಾತ್ರ ಖರೀದಿದಾರರು ಬರುತ್ತಿದ್ದರೆ, ತಮಿಳುನಾಡಿನಲ್ಲಿ ತರಕಾರಿ ಬೆಳೆ ಚೆನ್ನಾಗಿ ಬಂದಿರುವುದರಿಂದ ಅಲ್ಲಿಂದಲೂ ವ್ಯಾಪಾರಿಗಳೂ ಬರುತ್ತಿಲ್ಲ. ಇದರಿಂದ ತರಕಾರಿಗಳ ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಮಾರಾಟವಾಗುವುದು ಕಷ್ಟ: ಕಳೆದ ವಾರದವರೆಗೂ ಕಿಲೋಗೆ 18 ರೂ. ಇದ್ದ ಬೀನ್ಸ್, ಬದನೆ ಹಾಗೂ ಹೂ ಕೋಸು ಈಗ 2 ರೂ.ಗೆ ಇಳಿದಿದೆ. 35 ರೂ. ಇದ್ದ ಮೆಣಸಿಕಾಯಿ 5ಕ್ಕೆ, 15-20ಕ್ಕೆ ಮಾರಾಟವಾಗುತ್ತಿದ್ದ ಟೊಮೆಟೊ 6ಕ್ಕೆ ಮಾರಾಟವಾಗುವುದು ಕಷ್ಟವಾಗಿದೆ ಎಂದು ರೈತರು ಅಳಲನ್ನು ತೋಡಿಕೊಂಡಿದ್ದಾರೆ.
ಉತ್ಪಾದನಾ ವೆಚ್ಚ ಹಾಗೂ ಕಾರ್ಮಿಕರ ಕೂಲಿಯೂ ದೊರಕದ ರೈತರು ತಮ್ಮ ತರಕಾರಿ ಬೆಳೆಯನ್ನು ಅಡ್ಡಾದಿಡ್ಡಿ ಬೆಲೆಗೆ ಮಾರಾಟ ಮಾಡುವಂತಾಗಿದ್ದರೆ, ಇನ್ನೂ ಕೆಲವರು ರಸ್ತೆ ಬದಿಗಳಲ್ಲಿ ಟೊಮೊಟೊ, ಕೋಸು ಮತ್ತಿತರೆ ತರಕಾರಿಯನ್ನು ಜಾನುವಾರುಗಳು ತಿನ್ನಲಿ ಎಂದು ಸುರಿದು ಹೋಗುತ್ತಿದ್ದಾರೆ.
ತರಕಾರಿಗೆ ಬೇಡಿಕೆ ಕಡಿಮೆ: ಕೇರಳದ ಕೋಳಿ ವ್ಯಾಪಾರಿಗಳು ಭಾರೀ ಪ್ರಮಾಣದಲ್ಲಿ ತರಕಾರಿ ಖರೀದಿಸಿ, 1 ಕಿಲೋ ಕೋಳಿ ಮಾಂಸದ ಜತೆಗೆ 2 ಕಿಲೋ ತರಕಾರಿ ಉಚಿತವಾಗಿ ಹಂಚುತ್ತಿದ್ದರು. ಕೊರೊನ ತಡೆಗೆ ಸರ್ಕಾರ ಕೋಳಿ ಮಾಂಸ ಮಾರಾಟದ ಮೇಲೆ ನಿರ್ಬಂಧ ವಿಧಿಸಿದ್ದರಿಂದ ಕೇರಳದಲ್ಲಿಯೂ ವ್ಯಾಪಾರ ನಿಂತಿದೆ. ಇದರಿಂದ ತರಕಾರಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಸುಲ್ತಾನ್ ಭತ್ತೇರಿಯ ವ್ಯಾಪಾರಿಗಳು ತಿಳಿಸಿದ್ದಾರೆ.
ಕೇರಳ, ತ.ನಾಡಿನಿಂದ ಖರೀದಿಸುವವರಿಲ್ಲದೆ ಎಲ್ಲಾ ತರಕಾರಿ ಬೆಲೆ ಕುಸಿತವಾಗುತ್ತಿದೆ. ಮುಂದಿನ ದಿನಗಳಲ್ಲಿ ಚೇತರಿಕೆ ಕಾಣಲಿದೆ. ಇದನ್ನು ಕಾದು ನೋಡಬೇಕಾಗಿದೆ.
-ನಾಗೇಂದ್ರ, ಎಪಿಎಂಸಿ ಕಾರ್ಯದರ್ಶಿ
* ಸೋಮಶೇಖರ್