ಬೇಲೂರು: ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರಗಳಾದ ಬೇಲೂರು, ಹಳೇಬೀಡು ದೇವಾಲಯಗಳಿಗೆ ವಿದೇಶಿ ಪ್ರವಾಸಿಗರು ಅಗಮಿಸುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಮಾರಕ ರೋಗ ಕೊರೊನಾ ಪರಿಶೀಲನೆಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆಯಲಾಗಿದೆ.
ಚೀನಾದಲ್ಲಿ ನೂರಾರು ಮಂದಿ ಸಾವು: ಚೀನಾ ದೇಶದಲ್ಲಿ ಕೊರೊನಾ ವೈರಸ್‌ನಿಂದ ನೂರಾರು ಜನರು ಮೃತಪಟ್ಟಿದ್ದಾರೆ. ದೇಶದ ಕೇರಳ ಹಾಗೂ ರಾಜ್ಯದ ಕೆಲವು ಭಾಗಗಳಲ್ಲಿ ರೋಗದ ಸೋಂಕಿನ ಬಗ್ಗೆ ತಪಾಸಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚನ್ನಕೇಶವ ದೇವಾಲಯಕ್ಕೆ ಪ್ರತಿ ದಿನ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು, ಈ ರೋಗದ ಭೀತಿಯಿಂದ ಇಲ್ಲಿನ ಸರ್ಕಾರಿ ಆಸ್ಪತೆಯ ಮೊದಲನೆ ಅಂತಸ್ತಿನ ಕೊಠಡಿ ಸಂಖ್ಯೆ 85 ರಲ್ಲಿ ವಿಶೇಷ ವಾರ್ಡ್ ತೆರೆದು ಸಿದ್ಧತೆ ಕೈಗೊಳ್ಳಲಾಗಿದೆ.
ಆರೋಗ್ಯ ಇಲಾಖೆಯಿಂದ ಮುಂಜಾಗ್ರತೆ: ಈ ಬಗ್ಗೆ ತಾಲೂಕು ವೈದ್ಯಾಧಿಕಾರಿ ಡಾ.ವಿಜಯ್ ಉದಯವಾಣಿಯೊಂದಿಗೆ ಮಾತನಾಡಿ, ಕೊರೊನಾ ವೈರಸ್ ಬಗ್ಗೆ ಈಗಾಗಲೇ ಆಸ್ಪತ್ರೆಯಲ್ಲಿ ವಿಶೇಷ ಕೊಠಡಿ ತೆರೆದಿದ್ದು, ಸಿಬ್ಬಂದಿಯನ್ನು ನೇಮಿಸಲಾಗಿದೆ. ತಾಲೂಕಿನ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಜನರಲ್ಲಿ ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು.
ಕೊರೊನಾ ರೋಗಕ್ಕೆ ಔಷಧಿ ಇಲ್ಲದಿದ್ದರೂ ಸಹ ಎಚ್.1 ಎನ್.1 ರೀತಿಯಲ್ಲಿ ಹರಡದಂತೆ ಜಾಗ್ರತೆ ವಹಿಸಿರುವುದಾಗಿ ತಿಳಿಸಿದರು. ರಾಜ್ಯದಿಂದ ಕೊರೊನಾದ ಬಗ್ಗೆ ಪ್ರಚಾರ ಪಡಿಸಲು ವಾಹನವೊಂದು ಬಂದಿದ್ದು ಗ್ರಾಮ ಸಭೆ ಮತ್ತು ಜನಗಳು ಸೇರುವ ಕಡೆ ರೋಗದ ಬಗ್ಗ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಪ್ರವಾಸಿ ಕೇಂದ್ರಗಳಾದ ಬೇಲೂರು ಮತ್ತು ಹಳೇಬೀಡುಗಳಲ್ಲಿ ವೀಶೇಷ ಕಾಳಜಿ ವಹಿಸುವುದಾಗಿ ತಿಳಿಸಿದರು.
ವಿದೇಶಿ ಪ್ರವಾಸಿಗರು ದೇವಾಲಯಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳ ಜೊತೆ ಚರ್ಚಿಸಿ ದೇವಾಲಯದಲ್ಲಿ ಪ್ರತ್ಯೇಕ ಆರೋಗ್ಯ ಸಿಬ್ಬಂದಿ ನೇಮಕ ಮಾಡಿ ತಪಾಸಣೆಗೆ ವ್ಯವಸ್ಥೆ ಮಾಡಲಾಗುವುದು. ದೇವಾಲಯಕ್ಕೆ ಬರುವ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳಲಾಗುವುದು.
-ವಿದ್ಯುಲ್ಲತಾ, ಚನ್ನಕೇಶವ ದೇಗುಲ ಕಾರ್ಯನಿರ್ವಹಣಾಧಿಕಾರಿ
* ಡಿ.ಬಿ.ಮೋಹನ್‌ಕುಮಾರ್