Advertisement

ಕೊರೊನಾ ಎರಡನೇ ಅಲೆ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯಕ್ಕಿಲ್ಲ ಬೆಡ್‌ ಕೊರತೆ

02:57 AM Apr 16, 2021 | Team Udayavani |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಬೆಡ್‌ ವ್ಯವಸ್ಥೆಗಳಿಗೆ ಆದ್ಯತೆ ನೀಡಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಒಟ್ಟು 5,355 ಹಾಸಿಗೆಗಳು ಕೋವಿಡ್‌ ರೋಗಿಗಳಿಗೆ ಮೀಸಲಿರಿಸಲಾಗಿದ್ದು, ಸದ್ಯ 199 ಮಂದಿ ಕೋವಿಡ್‌ ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ ಸದ್ಯ 5,156 ಹಾಸಿಗೆಗಳು ಜಿಲ್ಲೆಯಲ್ಲಿ ಖಾಲಿ ಇವೆ. ಜಿಲ್ಲೆಯಲ್ಲಿ ಒಟ್ಟು 1,152 ಮಂದಿ ಕೋವಿಡ್‌ ಸಕ್ರಿಯ ಪ್ರಕರಣ ಇದ್ದು, ಶೇ.90ರಷ್ಟು ಮಂದಿ ಗೃಹ ನಿಗಾವಣೆಯಲ್ಲಿದ್ದಾರೆ. 1,152ರಲ್ಲಿ 953 ಮಂದಿ ಗೃಹ ನಿಗಾವಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲು ಚಿಂತನೆ
ಒಟ್ಟು ಕೋವಿಡ್‌ ರೋಗಿಗಳ ಪೈಕಿ ವೆನ್ಲಾಕ್‌ ಆಸ್ಪತ್ರೆಯಲ್ಲಿ 33 ಮಂದಿ, ತಾಲೂಕು ಆಸ್ಪತ್ರೆಗಳಾದ ಬಂಟ್ವಾಳದಲ್ಲಿ 2 ಮಂದಿ ಬೆಳ್ತಂಗಡಿಯಲ್ಲಿ 16 ಮಂದಿ ಮತ್ತು ಪುತ್ತೂರಿನಲ್ಲಿ ಓರ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ 147 ಮಂದಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ ವೆಂಟಿಲೇಟರ್‌ ಮತ್ತು ಹಾಸಿಗೆಯ ಕೊರತೆ ಸದ್ಯಕ್ಕಿಲ್ಲ. ಆದರೂ ಜಿಲ್ಲಾ ಆರೋಗ್ಯ ಇಲಾಖೆ ನಿರಂತರ ನಿಗಾವಣೆಯಲ್ಲಿದ್ದು, ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ದ.ಕ. ಜಿಲ್ಲೆಯಲ್ಲಿ ಕಳೆದ ವರ್ಷ ಇದ್ದಂತಹ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಮತ್ತೆ ಕಾರ್ಯಾಚರಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸುತ್ತಿದೆ.

ಮಂಗಳೂರಿನ ಎನ್‌ಐಟಿಕೆ ಒಂದು ಬ್ಲಾಕ್‌ ಮತ್ತು ಕದ್ರಿ ಶಿವಬಾಗ್‌ನಲ್ಲಿರುವ ಇಎಸ್‌ಐ ಆಸ್ಪತ್ರೆಯನ್ನು ಕೋವಿಡ್‌ ಕೇರ್‌ ಸೆಂಟರ್‌ ಮಾಡಲು ಯೋಚಿಸಲಾಗುತ್ತಿದೆ. ಇದರೊಂದಿಗೆ ಮುಂಬರುವ ದಿನದಲ್ಲಿ ಜಿಲ್ಲೆಯಲ್ಲಿ ಒಂದು ವೇಳೆ ಕೋವಿಡ್‌ ಪ್ರಕರಣ ಏರಿಕೆ ಕಂಡರೆ ಯಾವುದೇ ರೀತಿಯಲ್ಲಿ ಬೆಡ್‌ಗಳ ಕೊರತೆ ಉಂಟಾಗದಂತೆ ಈಗಾಗಲೇ ಯೋಜನೆ ರೂಪಿಸಲಾಗುತ್ತಿದೆ. ಜಿಲ್ಲಾ ವೆನಾÉಕ್‌ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳಿಗೆ ಒಟ್ಟು 377 ಹಾಸಿಗೆ ಮೀಸಲಿರಿಸಲಾಗಿದ್ದು, ಸದ್ಯ 33 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಿಯೋಜಿತ ಕೋವಿಡ್‌ ಆಸ್ಪತ್ರೆಯಲ್ಲಿ (ಡಿಸಿಎಚ್‌ಸಿ) ಮೀಸಲಿಟ್ಟ 4,978 ಹಾಸಿಗೆಯಲ್ಲಿ 166 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಬೆಡ್‌ಗಳ ಕೊರತೆ ಇಲ್ಲ
ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ಹಾಸಿಗೆಯ ಕೊರತೆ ಇಲ್ಲ. ಸದ್ಯ ಇರುವಂತ 1,152 ಕೋವಿಡ್‌ ಸಕ್ರಿಯ ಪ್ರಕರಣಗಳಲ್ಲಿ 199 ಮಂದಿ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಗೃಹ ನಿಗಾವಣೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಸದದ್ಯ 5,156 ಬೆಡ್‌ಗಳು ಖಾಲಿ ಇವೆ. ವೆಂಟಿಲೇಟರ್‌ ಕೊರತೆಯಾಗದು.

Advertisement

-ಡಾ| ಕಿಶೋರ್‌ ಕುಮಾರ್‌, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next