Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಸಂಬಂಧ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ನಡೆಯುವ ಸಂತೆ, ಜಾತ್ರೆ, ಉತ್ಸವ ಇನ್ನಿತರ ಜನಸಂದಣಿ ಸೇರುವಂತಹ ಕಾರ್ಯಕ್ರಮ ರದ್ದುಪಡಿಸಲಾಗಿದೆ.
Related Articles
Advertisement
ಮುನ್ನೆಚ್ಚರಿಕೆ ಕ್ರಮ ಅನುಷ್ಠಾನಗೊಳಿಸಿ: ತಹಶೀಲ್ದಾರರು, ತಾಪಂ ಕಾರ್ಯನಿವಾಹಕ ಅಧಿಕಾರಿಗಳು, ವೈದ್ಯಾಧಿಕಾರಿಗಳು ಸಮನ್ವಯದಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಷ್ಠಾನ ಮಾಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿಯೂ ಮಾಹಿತಿ ಪಡೆದುಕೊಳ್ಳಬೇಕು. ಮುಖಗವಸು ಕೊರತೆಯಾಗದಂತೆ ನೋಡಿಕೊಳ್ಳಬೇಕು. ಮುಖಗವಸು ಮಾರಾಟ ಮಾಡುವ ಅಂಗಡಿಗಳಲ್ಲಿ ಮುಖಗವಸು ಬೆಲೆಯನ್ನು ಗ್ರಾಹಕರಿಗೆ ಎದ್ದುಕಾಣುವಂತೆ ಪ್ರದರ್ಶಿಸಬೇಕು ಎಂದು ನಿರ್ದೇಶನ ನೀಡಿದರು.
ಸುಳ್ಳು ಹರಡಿದ ಇಬ್ಬರ ಬಂಧನ: ಕೊರೊನಾ ವೈರಸ್ ಸಂಬಂಧ ಅನಗತ್ಯವಾಗಿ ಸುಳ್ಳುಸುದ್ದಿ, ವದಂತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ ಎಂಬ ಸುಳ್ಳುಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಮುಂದೆಯೂ ಕೊರೊನಾ ಕುರಿತು ವದಂತಿ, ಅತಂಕ ಉಂಟುಮಾಡುವವರ ವಿರುದ್ದ ಕ್ರಮ ವಹಿಸಲಾಗುತ್ತದೆ. ಈ ಬಗ್ಗೆಯೂ ವ್ಯಾಪಕವಾಗಿ ಜನರಲ್ಲಿ ತಿಳಿವಳಿಕೆ ನೀಡಬೇಕಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕೆಲ ಅಧಿಕಾರಿಗಳು ಗೈರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಗೈರು ಹಾಜರಾದವರಿಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು. ಸಭೆಯಲ್ಲಿ ಜಿಪಂ ಸಿಇಒ ಹರ್ಷಲ್ ಭೋಯರ್ ನಾರಾಯಣ್‌ರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ. ರವಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಕೆ.ಸುರೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಹೊನ್ನೇಗೌಡ, ತಹಶೀಲ್ದಾರ್ ಜೆ.ಮಹೇಶ್, ನಂಜುಂಡಯ್ಯ, ತಾಲೂಕು ಆರೋಗ್ಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಎಲ್ಲಾ ಸಹಕಾರವನ್ನು ಅಧಿಕಾರಿಗಳಿಗೆ ನೀಡಲಿದೆ. ಸುಳ್ಳು ವದಂತಿ ಹರಡುವವರ ಬಗ್ಗೆಯೂ ತುರ್ತಾಗಿ ಕ್ರಮ ತೆಗೆದುಕೊಳ್ಳಲಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿಯನ್ನು ಹರಡಿದ ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.-ಎಚ್.ಡಿ. ಆನಂದಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ