Advertisement

ಮಳೆಗಾಲದ ಸಿದ್ಧತೆಗಳಿಗೆ ಕೊರೊನಾ ಹೊಡೆತ ಭೀತಿ

01:36 AM Apr 25, 2021 | Team Udayavani |

ಕಾರ್ಕಳ : ಕೊರೊನಾ ಸೋಂಕು ಎರಡನೇ ಅಲೆಯಾಗಿ ವ್ಯಾಪಿಸು ತ್ತಿದೆ. ಜನಜೀವನದ ಮೇಲೆ ಅದು ವ್ಯತಿರಿಕ್ತ ಪರಿಣಾಮ ಬೀರಿರುವುದಲ್ಲದೆ ಮಳೆಗಾಲಕ್ಕೆ ಸಿದ್ಧತೆಯಾಗಿ ನಡೆಯಬೇಕಿದ್ದ ಅಗತ್ಯ ಕೆಲಸಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಎದುರಾಗಿವೆ.

Advertisement

ಹಿಂದಿನ ಮಳೆಗಾಲದ ಸಂದರ್ಭ ಹಲವೆಡೆ ತೋಡುಗಳಲ್ಲಿ ಹೂಳು, ಕಸ ತುಂಬಿ ಕೃತಕ ನೆರೆ ಉಂಟಾಗಿತ್ತು. ಈ ಬಾರಿ ಮಳೆಗಾಲ ಪೂರ್ವ ಸಿದ್ಧತೆ ಇಲಾಖೆಗಳಿಂದ ಇನ್ನಷ್ಟೇ ಆಗಬೇಕಿದೆ. ಕರ್ಫ್ಯೂ, ಲಾಕ್‌ಡೌನ್‌ ಆರ್ಥಿಕ ಹಿನ್ನಡೆ ಇವೆಲ್ಲವೂ ಮಳೆಗಾಲದ ಸಿದ್ಧತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಕಂದಾಯ, ಲೋಕೋಪಯೋಗಿ, ಮೆಸ್ಕಾಂ ಮತ್ತಿತರ ಮೂಲಸೌಕರ್ಯಕ್ಕೆ ಸಂಬಂಧಿಸಿ ಕೆಲಸ ನಿರ್ವಹಿಸುವ ಇಲಾಖೆಗಳು ಮಳೆಗಾಲಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಅದಕ್ಕೆ ಇದು ಸೂಕ್ತ ಸಮಯ. ಕಚೇರಿಗಳಲ್ಲಿ ಹಿಂದಿನಂತೆ ಕರ್ತವ್ಯ ನಿರ್ವಹಿಸುವುದು ಕಷ್ಟ. ಒಂದೆಡೆ ಸಿಬಂದಿ ಕೊರತೆ ಇನ್ನೊಂದೆಡೆ ಶೆ. 50 ರಷ್ಟು ಸಿಬಂದಿ ಮಾತ್ರ ಕೆಲಸ ಮಾಡುವ ಅನಿವಾರ್ಯತೆ ಇಲಾಖೆಗಳಿಗೂ ಇದೆ.

ಕಾರ್ಮಿಕರ ಕೊರತೆ
ವಲಸೆ ಕಾರ್ಮಿಕರ ಕೊರತೆ ಈ ಬಾರಿಯೂ ಇಲಾಖೆಗಳನ್ನು ಕಾಡುವ ಸಾಧ್ಯತೆ ಇದೆ. ತಾಲೂಕಿನಾದ್ಯಂತ ನಡೆಯು ತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗೆ ವೇಗ ನೀಡಿ ಮಳೆಗಾಲಕ್ಕೂ ಮುಂಚಿತ ಪೂರ್ಣಗೊಳಿಸುವ ಅಗತ್ಯತೆ ಇದೆ.

ನಗರದಲ್ಲೂ ಸಮಸ್ಯೆ
ನಗರದಲ್ಲಿ ಒಳಚರಂಡಿ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಹಲವೆಡೆಗಳಲ್ಲಿ ಒಳಚರಂಡಿ ಪೈಪ್‌ ಅಳವಡಿಸಲು ರಸ್ತೆ ಅಗೆಯಲಾಗಿದೆ. ಮುಖ್ಯ ಪೇಟೆಯ ಮೂರು ಮಾರ್ಗದಿಂದ ಆನೆಕೆರೆ ಕಡೆಗೆ ತೆರಳುವ ಡಾಮರು ರಸ್ತೆಗೆ ಪೈಪ್‌ ಅಳವಡಿಕೆ ಸಮಯದಲ್ಲಿ ಹಾನಿಯಾಗಿದೆ. ಹೊಂಡಗಳು ನಿರ್ಮಾಣವಾಗಿ ರಸ್ತೆ ಹದಗೆಟ್ಟು ಸಂಚಾರಕ್ಕೆ, ಕಾಲ್ನಡಿಗೆಯಲ್ಲಿ ತೆರಳಲು ಕಷ್ಟವಾಗುತ್ತಿದೆ. ಈ ಭಾಗದಲ್ಲಿ ಬಿದ್ದ ಒಂದೆರಡು ಮಳೆಗೆ ಸಮಸ್ಯೆ ಸೃಷ್ಟಿ ಯಾಗಿದ್ದು, ಕೂಡಲೇ ದುರಸ್ತಿ ನಡೆಯದೆ ಇದ್ದಲ್ಲಿ ಮಳೆಗಾಲದಲ್ಲಿ ದೊಡ್ಡ ಅವಾಂತರಕ್ಕೆ ಕಾರಣವಾಗಬಹುದು.

Advertisement

ಕೃಷಿ ಚಟುವಟಿಕೆಗಳು, ಕಚ್ಚಾ ವಸ್ತುಗಳ ಖರೀದಿ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ. ಸಮಯ ವ್ಯರ್ಥ ಮಾಡದೆ ಸಿದ್ಧತೆ ಮಾಡಬೇಕಿದ್ದು ಆದರೆ ಕಾರ್ಮಿಕರಿಂದ ಹಿಡಿದು, ಖರೀದಿಯವರೆಗೆ ಲಾಕ್‌ಡೌನ್‌ ಸಮಸ್ಯೆ ತಂದೊಡ್ಡುವ ಭೀತಿ ಇದೆ.

ನಿರ್ಮಾಣ ಕೆಲಸಕ್ಕೆ ಹಿನ್ನಡೆ
ಮಳೆಗಾಲದ ಪೂರ್ವದಲ್ಲಿ ಮನೆಗಳ ದುರಸ್ತಿ, ಕಟ್ಟಡ ನಿರ್ಮಿಸು ವುದು ಇತ್ಯಾದಿ ನಡೆಯುತ್ತವೆ. ಜಲ್ಲಿಕಲ್ಲು, ಮರಳು ಸಿಗದೆ ಈ ಬಾರಿ ಎಲ್ಲ ಕೆಲಸಗಳು ಸ್ಥಗಿತಗೊಂಡಿದ್ದವು. ಕರ್ಫ್ಯೂ, ಲಾಕ್‌ಡೌನ್‌ ಇತ್ಯಾದಿ ಎದುರಾಗಿ ಕಾಮಗಾರಿ ನಡೆಯದೆ ಇದ್ದಲ್ಲಿ ಜನಸಾಮಾನ್ಯರ ಪರಿಸ್ಥಿತಿ ಈ ಬಾರಿಯೂ ಮತ್ತೆ ಬಿಗಡಾಯಿಸುವ ಆತಂಕವಿದೆ.

ಸಿದ್ಧತೆ ಪರಾಮರ್ಶೆ
ಮಳೆಗಾಲ ಸಿದ್ಧತೆ ಕುರಿತು ಇಷ್ಟೊತ್ತಿಗಾಗಲೇ ಇಲಾಖಾವಾರು ತಾ| ಮಟ್ಟದ ಸಭೆ ನಡೆಯಬೇಕಿತ್ತು. ಕೋವಿಡ್‌ ಹೆನ್ನಲೆಯಲ್ಲಿ ಇದು ನಡೆದಿಲ್ಲ. ಆದಷ್ಟು ಬೇಗ ಸಭೆ ಕರೆದು ಸಿದ್ಧತೆ ಕುರಿತು ಪರಾಮರ್ಶಿಸಲಾಗುವುದು.

– ಪುರಂದರ ಹೆಗ್ಡೆ, ತಹಶೀಲ್ದಾರ್‌ , ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next