ಕಲಬುರಗಿ: ಕೊರೊನಾ ವೈರಸ್ ರೂಪಾಂತರಗೊಂಡಿದ್ದು, ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವುದರ ಜತೆಗೆ ಸ್ವಚ್ಚತೆ ಮೈಗೂಡಿಸಿಕೊಂಡಲ್ಲಿ ಮಾತ್ರ ಕೋವಿಡ್ ನಿಯಂತ್ರಿಸಲು ಸಾಧ್ಯ ಎಂದು ನಾಡೋಜ, ಖ್ಯಾತ ತಜ್ಞ ವೈದ್ಯ ಡಾ| ಪಿ.ಎಸ್. ಶಂಕರ ಹೇಳಿದರು.
ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ ಜಂಟಿಯಾಗಿ ಕೋವಿಡ್ ಎರಡನೇ ಅಲೆ ಕುರಿತಾಗಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಕೊರೊನಾ ಇನ್ನೂ ಹೆಚ್ಚಳವಾಗುವ ಆತಂಕತೆ ಕಂಡು ಬರುತ್ತಿದೆ. ಹೀಗಾಗಿ ಜನರೆಲ್ಲರೂ ಸರ್ಕಾರ ಹಾಗೂ ವ್ಯವಸ್ಥೆಯನ್ನು ದೂಷಿಸದೇ ನಮ್ಮಲ್ಲಿ ನಾವು ಕಡಿವಾಣ ಹಾಕಿಕೊಂಡಾಗ ಮಾತ್ರ ನಿಯಂತ್ರಣ ಹೇರಲು ಸಾಧ್ಯ ಎಂದರು.
ಲಸಿಕೆ ಎಲ್ಲರೂ ಪಡೆಯಬೇಕು. ಬಹು ಮುಖ್ಯವಾಗಿ ಒಂದನೇ ಎರಡನೇ ಲಸಿಕೆಯಲ್ಲದೇ ಮೂರನೇ ಲಸಿಕೆ ಹಾಕಲು ಸಿದ್ಧತೆಗಳು ಸಹ ನಡೆದಿವೆ ಎಂದು ನುಡಿದ ಡಾ| ಪಿ.ಎಸ್. ಶಂಕರ, ಕಳೆದ ವರ್ಷದ ಮೊದಲ ಹಂತದ ಕೋವಿಡ್ ಸೆಪ್ಟೆಂಬರ್ ಏರಿಕೆಯಾಗಿ ಇಳಿಕೆಯಾಗಿತ್ತು. ಈ ಸಲ ಇನ್ನೂ ಹೆಚ್ಚುಗೊಂಡು ಜೂನ್ ನಂತರ ಇಳಿಕೆಯಾಗುವ ಸಾಧ್ಯತೆಗಳಿವೆ. ಟಿ.ವಿ ಮಾಧ್ಯಮಗಳು ಹೆಚ್ಚಿನ ಭಯ ಹುಟ್ಟಿಸುತ್ತಿವೆ. ಆದ್ದರಿಂದ ನಮ್ಮಷ್ಟಕ್ಕೆ ನಾವು ನಿರ್ಬಂಧ ಹಾಕಿಕೊಳ್ಳುವುದು ಅಗತ್ಯವಾಗಿದೆ. ಯಾವುದೇ ಕಾರಣಕ್ಕೂ ಸಣ್ಣ ನಿರ್ಲಕ್ಷ್ಯತನ ಸಲ್ಲದು ಎಂದು ವಿವರಿಸಿದರು.
ಚೀನಾದ ನೆರೆ ರಾಷ್ಟ್ರ ವಿಯೋಟ್ನಾಂ ಹಾಗೂ ನ್ಯೂಜಿಲ್ಯಾಂಡ್ ರಾಷ್ಟ್ರವು ಕಳೆದ ವರ್ಷ ತನ್ನ ರಾಷ್ಟ್ರದೊಳಗೆ ಯಾರನ್ನು ಬಾರದಂತೆ ಕಟ್ಟುನಿಟ್ಟಾದ ಗಡಿ ನಿರ್ಬಂಧ ಹಾಕಿದ್ದರಿಂದ 1084 ಪ್ರಕರಣಗಳು ಮಾತ್ರ ವರದಿಯಾದವು. ಹೀಗಾಗಿ ಕೊರೊನಾ ವಿಸ್ತರಣೆಗೆ ಬ್ರೇಕ್ ಹಾಕಲು ಗಡಿ ಅಂದರೆ ಚೆಕ್‌ಪೋಸ್ಟ್‌ಗಳನ್ನು ಬಿಗಿಗೊಳಿಸಬೇಕು. ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ಸಂಚಾರ ಕೆಲ ಕಾಲ ಬೇಡವೇ ಬೇಡ. ಈಗಂತು ರೆಮ್‌ಡಿಸಿವಿಆರ್ ಚುಚ್ಚುಮದ್ದು ಕೊರತೆಯ ಮಾತೇ ಎಲ್ಲೆಡೆ ಕೇಳಿ ಬರುತ್ತಿದೆ. ಇದು ಕೊರೊನಾ ನಿಯಂತ್ರಣಕ್ಕೆ ರಾಮಬಾಣ ಅಲ್ಲ ಎಂದು ಸಲಹೆ ನೀಡಿದರು.
ಯುನೈಟೆಡ್ ಆಸ್ಪತ್ರೆ ಚೆರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ| ವಿಕ್ರಮ್ ಸಿದ್ಧಾರೆಡ್ಡಿ ಮಾತನಾಡಿ, ಸರ್ಕಾರ ರಾತ್ರಿ ಕರ್ಫ್ಯೂ ಜಾರಿಗೆ ತಂದಿರುವುದು ಒಂದು ನಿಟ್ಟಿನಲ್ಲಿ ಸ್ವಲ್ಪ ಕಡಿವಾಣ ಹಾಕಬಹುದಾದರೂ ಜನರೇ ಸ್ವಯಂವಾಗಿ ದೃಢ ನಿಲುವು ತಾಳಬೇಕು. ಈಗಂತು ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟಸಾಧ್ಯವಾಗಿದೆ ಎಂದರು. ಖ್ಯಾತ ವೈದ್ಯರು ಹಾಗೂ ವೈದ್ಯ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ| ಎಸ್.ಎಸ್. ಗುಬ್ಬಿ ಸಹ
ಉಪಸ್ಥಿತರಿದ್ದು, ಸಲಹೆ ನೀಡಿದರು. ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಸ್.ಎಸ್. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ ಸೇರಿದಂತೆ ಮುಂತಾದವರಿದ್ದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಅವಂಟಿ ನಿರೂಪಿಸಿದರು.