ಬೆಂಗಳೂರು: ಗ್ರಾಮಪಂಚಾಯ್ತಿ ಮಟ್ಟದಲ್ಲಿಯೂ ಕೊರೊನಾ ಸೋಂಕು ಕುರಿತು ಅರಿವು ಮೂಡಿಸಲಾಗುತ್ತಿದ್ದು, ರಾಜ್ಯಾದ್ಯಂತ ಸೋಂಕು ಹರಡದಂತೆ ಕ್ರಮ ವಹಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಎಚ್ಚರಿಕೆ ಕೊಡುವ ಕೆಲಸ ಮಾಡಲಾಗುತ್ತಿದೆ. ಪ್ರಮುಖವಾಗಿ ಮಾಲ್ ಅಸೋಸಿಯೇಷನ್ ಮಾಲೀಕರನ್ನು ಕರೆದು ಅವರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದೇವೆ.
ಸ್ಥಳೀಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯ ಸಹಯೋಗದೊಂದಿಗೆ ಪ್ರತಿ ಗ್ರಾ.ಪಂ.ಗಳಲ್ಲಿಯೂ ಅರಿವು ಮೂಡಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ತಂಡವು ಆಯಾ ಜಿಲ್ಲೆಗಳಲ್ಲಿ ಸಂಪೂರ್ಣ ಮುಂಜಾಗ್ರತೆಗೆ ಕ್ರಮ ವಹಿಸಿದೆ ಎಂದರು. ವಿದೇಶಗಳಿಂದ ಬರುತ್ತಿರುವ ಎಲ್ಲರನ್ನೂ ತಪಾಸಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೂ ರಾಜ್ಯಕ್ಕೆ ವಿದೇಶದಿಂದ ಬಂದ 72,542 ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ.
ಈ ಪೈಕಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 49,594 ಮಂದಿಯನ್ನು ತಪಾಸಣೆ ಮಾಡಿದ್ದು, ಉಳಿದವರನ್ನು ಮಂಗಳೂರು ವಿಮಾನ ನಿಲ್ದಾಣ ಹಾಗೂ ಬಂದರು, ಕಾರಾವಾರ ಬಂದರಲ್ಲಿ ತಪಾಸಣೆ ಮಾಡಲಾಗಿದೆ. ಇನ್ನು, ಕೊರೋನಾ ಸೋಂಕಿತ ದೇಶಗಳಿಗೆ ಪ್ರಯಾಣ ಮಾಡಿ ರಾಜ್ಯಕ್ಕೆ ಮರಳಿದ ನಂತರ ಅನಾರೋಗ್ಯವಾದರೆ ಕೂಡಲೇ ಜಿಲ್ಲಾಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
296 ಮಂದಿಯ ವರದಿ ನೆಗೆಟಿವ್: ಇಲ್ಲಿಯವರೆಗೂ 296 ಮಂದಿ ಕೊರೋನಾ ಸೋಂಕು ಪರೀಕ್ಷೆ ವರದಿ ನೆಗೆಟಿವ್ ಬಂದಿದೆ. ಶುಕ್ರವಾರ 22 ಮಂದಿ ಶಂಕಿತರನ್ನು ಗುರುತು ಮಾಡಲಾಗಿದೆ. ಅವರ ಗಂಟಲು ದ್ರಾವಣದ ಮಾದರಿಯನ್ನು ಪರೀಕ್ಷೆಗೆ ಪಡೆಯಲಾಗಿದೆ. ಈ ಪೈಕಿ 3 ಮಂದಿಯನ್ನು ಒಳರೋಗಿಗಳನ್ನಾಗಿ ದಾಖಲಿಸಿಕೊಳ್ಳಲಾಗಿದೆ. ಇಲ್ಲಿಯವರೆಗೂ ಒಟ್ಟು 8 ಮಂದಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.