Advertisement
ಹೌದು, ಕೊರೊನಾ ವೈರಸ್ ಪರಿಣಾಮ ಸಮೂಹ ಸಾರಿಗೆಗಳು ಪ್ರಯಾಣಿಕರ ಕೊರತೆ ಎದುರಿಸುತ್ತಿವೆ. ಮೂರ್‍ನಾಲ್ಕು ದಿನಗಳಿಂದ ಸಾರಿಗೆ ಸಂಸ್ಥೆಗಳ ಆದಾಯದಲ್ಲಿ ಖೋತಾ ಆಗಿದೆ. ಆ್ಯಪ್ ಆಧಾರಿತ ಟ್ಯಾಕ್ಸಿಗಳಿಗೆ ಅದರಲ್ಲೂ ವಿಶೇಷವಾಗಿ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಗ್ರಾಹಕರು ಬರುತ್ತಿಲ್ಲ. ಇನ್ನು ಕೆಲವು ರಸ್ತೆಗಳಲ್ಲಿ ಚಿತ್ರಣ ತದ್ವಿರುದ್ಧವಾಗಿದ್ದು, ಖಾಸಗಿ ವಾಹನಗಳ ದಟ್ಟಣೆ ದಿಢೀರ್ ಹೆಚ್ಚಳವಾಗಿದೆ. ಅಂದರೆ ಒಟ್ಟಾರೆ ನಗರದ ಎಂದಿನ ಸಂಚಾರ ವ್ಯವಸ್ಥೆಯನ್ನು ಈ ವೈರಸ್ ತಕ್ಕಮಟ್ಟಿಗೆ ಏರುಪೇರು ಮಾಡಿವೆ.
Related Articles
Advertisement
ಫ್ಲೈಬಸ್ ನಿತ್ಯ ಒಂದೂವರೆ ಲಕ್ಷ ಕುಸಿತ: ನಗರದ ದಟ್ಟಣೆ ಹಿನ್ನೆಲೆಯಲ್ಲಿ ನೇರವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೇ ವಿವಿಧ ಊರುಗಳಿಗೆ ಸಂಪರ್ಕ ಕಲ್ಪಿಸುವ ಫ್ಲೈಬಸ್ ಪರಿಚಯಿಸಲಾಗಿದ್ದು, ಅಲ್ಲಿಯೂ ಪ್ರಯಾಣಿಕರ ಕೊರತೆ ಕಾಡುತ್ತಿದೆ. ನಿತ್ಯ ವಿಮಾನ ನಿಲ್ದಾಣದಿಂದ ಮೈಸೂರು, ಮಡಿಕೇರಿ, ಕುಂದಾಪುರಕ್ಕೆ 15 ಶೆಡ್ನೂಲ್ ಗಳಿಂದ ಸುಮಾರು 25 ಸುತ್ತುವಳಿಗಳ ವ್ಯವಸ್ಥೆ ಇದೆ. ಇಲ್ಲಿ ನಿತ್ಯ 8-8.50 ಲಕ್ಷ ರೂ. ಆದಾಯ ಬರುತ್ತಿತ್ತು. ಆದರೆ, ವಿಮಾನ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದರ ಪರಿಣಾಮ ಆದಾಯ 7 ಲಕ್ಷ ರೂ. ಗೆ ಇಳಿಕೆಯಾಗಿದೆ ಎಂದು ವಿಭಾಗೀಯ ಸಂಚಾರ ಅಧಿಕಾರಿಗಳು ಮಾಹಿತಿ ನೀಡಿದರು.
ಟ್ಯಾಕ್ಸಿ ಬುಕಿಂಗ್ ಶೇ.50 ಕುಸಿತ: ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯೊಬ್ಬ ವಿಮಾನ ನಿಲ್ದಾಣದಲ್ಲಿ ಇಳಿದು, ನಗರದಲ್ಲಿ ವಾಸ್ತವ್ಯ ಹೂಡಿ ಹೈದರಾಬಾದ್‌ಗೆ ತೆರಳಿದ್ದಾರೆ ಎಂಬುದು ಖಾತ್ರಿಯಾದ ದಿನದಿಂದ ವಿಮಾನ ನಿಲ್ದಾಣ ಮಾರ್ಗಗಳಿಗೆ ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್ ಶೇ. 50ರಷ್ಟು ಕುಸಿದಿದೆ. ಇದರಲ್ಲಿ ಪ್ರಯಾಣಿಕರ ಕೊರತೆ ಮಾತ್ರವಲ್ಲ; ಕೆಲ ಚಾಲಕರು ಸ್ವಯಂಪ್ರೇರಿತವಾಗಿ ಆ ಮಾರ್ಗದಲ್ಲಿ ಬುಕಿಂಗ್ ತೆಗೆದುಕೊಳ್ಳುತ್ತಿಲ್ಲ ಎಂದು ಓಲಾ, ಟ್ಯಾಕ್ಸಿ ಫಾರ್ ಶ್ಯೂರ್ ಮತ್ತು ಉಬರ್ ಟ್ಯಾಕ್ಸಿ ಮಾಲಿಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಹೇಳಿದರು.
ನಗರದಿಂದ ವಿಮಾನ ನಿಲ್ದಾಣಕ್ಕೆ ಪ್ರತಿ ದಿನ ಕನಿಷ್ಠ ನಾಲ್ಕು ಟ್ರಿಪ್‌ಗ್ಳನ್ನು ಪೂರ್ಣಗೊಳಿಸುತ್ತಿದ್ದೆವು. ಒಂದು ಟ್ರಿಪ್‌ಗೆ ಕನಿಷ್ಠ 500 ರೂ. ಆದಾಯ ಬರುತ್ತಿತ್ತು. ಆದರೆ, ಮೂರ್‍ನಾಲ್ಕು ದಿನಗಳಿಂದ ಈ ಟ್ರಿಪ್ ಸಂಖ್ಯೆ ಎರಡಕ್ಕೆ ಇಳಿಕೆಯಾಗಿದೆ. ಅದೂ ಹೋಗಿ-ಬರುವ ಟ್ರಿಪ್ ಖಾತ್ರಿ ಮಾಡಿಕೊಂಡು ಕಾರ್ಯಾಚರಣೆ ಮಾಡಲಾಗುತ್ತಿದೆ. ಪರಿಚಿತ ಪ್ರಯಾಣಿಕರಿದ್ದರೆ ಅಂತಹವರಿಗೆ ಆದ್ಯತೆ ನೀಡಲಾಗುತ್ತಿದೆ. ಯಾಕೆಂದರೆ, ಯಾರು ಎಲ್ಲಿಂದ ಬಂದು ಟ್ಯಾಕ್ಸಿ ಏರುತ್ತಾರೆ ಎಂಬುದು ಯಾರಿಗೆ ಗೊತ್ತು. ಈ ಭೀತಿಯಿಂದ ಚಾಲಕರು ಬುಕಿಂಗ್‌ಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ತಿಳಿಸಿದರು.
ಮೆಟ್ರೋಗೂ ತಟ್ಟಿದ ಬಿಸಿ? : “ನಮ್ಮ ಮೆಟ್ರೋ‘ಗೂ ಪ್ರಯಾಣಿಕರ ಕೊರತೆ ಬಿಸಿ ತಟ್ಟಿದಂತೆ ಕಂಡುಬರುತ್ತಿದೆ. ಪೀಕ್ ಅವರ್‌ನಲ್ಲಿ ಮೂರ್‍ನಾಲ್ಕು ದಿನಗಳಿಂದ ಜನ ಸಂಚಾರ ತುಸು ಕಡಿಮೆ ಆಗಿದೆ ಎಂದು ಹೇಳ ಲಾಗುತ್ತಿದೆ. ಮೆಟ್ರೋ ಬಿಟ್ಟು, ತಾತ್ಕಾಲಿಕವಾಗಿ ಕೆಲ ಪ್ರಯಾಣಿಕರು ಸ್ವಂತ ವಾಹನಗಳಲ್ಲಿ ಕಚೇರಿಗಳು ಅಥವಾ ಕಂಪೆನಿಗಳಿಗೆ ತೆರಳುತ್ತಿದ್ದಾರೆ. ಹಾಗಾಗಿ, ಕೆಲವೆಡೆ ವಾಹನ ದಟ್ಟಣೆ ಕಂಡುಬರುತ್ತಿದೆ. ಸಾಮಾನ್ಯವಾಗಿ ದಿನಕ್ಕೆ “ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಕರ ಸಂಖ್ಯೆ 4.20ರಿಂದ 4.30 ಲಕ್ಷ ಇರುತ್ತಿತ್ತು. ಆದರೆ, ಕಳೆದೆರಡು ದಿನಗಳು ಕ್ರಮವಾಗಿ 4.18 ಮತ್ತು 4.10 ಲಕ್ಷ ದಾಖಲಾಗಿದೆ. ಶೇ. 2-3ರಷ್ಟು ಇಳಿಕೆಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಆದರೆ, ಇದನ್ನು ಮೆಟ್ರೋ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಬೋಗಿಗಳ ಸಂಖ್ಯೆ 3ರಿಂದ 6ಕ್ಕೆ ಏರಿಕೆಯಾಗಿದೆ. ಪೀಕ್ ಅವರ್‌ನಲ್ಲಿ ಫ್ರಿ ಕ್ವೆನ್ಸಿ 4.5 ನಿಮಿಷ ಇದ್ದದ್ದು, 3 ನಿಮಿಷಕ್ಕೆ ಏರಿಕೆಯಾಗಿದೆ. ಅದರ ಪರಿಣಾಮ ಅಷ್ಟಾಗಿ ನೂಕುನುಗ್ಗಲು ಕಾಣುತ್ತಿಲ್ಲ ಅಷ್ಟೇ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.
ವೋಲ್ವೊ ಬಸ್‌ಗಳ ಆದಾಯದಲ್ಲಿ ಕಳೆದೆರಡು ದಿನಗಳಿಂದ ನಿತ್ಯ ಒಂದೂವರೆಯಿಂದ ಎರಡು ಲಕ್ಷ ರೂ. ಖೋತಾ ಆಗುತ್ತಿದೆ. ವೋಲ್ವೊದಿಂದ ವಿಮುಖರಾದ ಜನ, ಮನೆಯಲ್ಲಿದ್ದು ಕೆಲಸ ಮಾಡುತ್ತಿರಬಹುದು ಅಥವಾ ಸ್ವಂತ ವಾಹನದಲ್ಲಿ ರಸ್ತೆಗಿಳಿಯುತ್ತಿರಬಹುದು. – ಬಿ.ಎಸ್.ನಾಗರಾಜ ಮೂರ್ತಿ, ಬಿಎಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ (ವೋಲ್ವೊ )
-ವಿಜಯಕುಮಾರ್ ಚಂದರಗಿ