ನವಲಗುಂದ: ವೈಶಿಷ್ಟ್ಯ ಪೂರ್ಣ ಹೋಳಿ ಹಬ್ಬದ ಪ್ರತೀಕವಾಗಿರುವ ಇಲ್ಲಿಯ ಪ್ರಸಿದ್ಧ ರಾಮಲಿಂಗ ಕಾಮಣ್ಣನ ದರ್ಶನಾಶೀರ್ವಾದ ಪಡೆಯಲು ಹಾಗೂ ಹರಕೆ ತೀರಿಸಲು ಆಗಮಿಸುವ ಭಕ್ತರಿಗೆ ಕೊರೋನಾ ವೈರಸ್ ಆತಂಕ ಕಾಡುತ್ತಿದೆ.
ಜನರು ಗುಂಪುಗುಂಪಾಗಿ ಸೇರುವಲ್ಲಿ ವೈರಸ್ ಹರಡುತ್ತದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರುವ ಕಾರ್ಯಕ್ರಮ, ಹಬ್ಬ-ಹರಿದಿನ, ಜಾತ್ರೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೆಂದು ಸರಕಾರ ಆದೇಶ ಹೊರಡಿಸಿರುವುದು ಈ ಬೆಳವಣಿಗೆಗೆ ಸಾಕ್ಷಿಯಾಗಿದೆ.
ತಾಲೂಕಿನಲ್ಲಿ ಪ್ರಸಿದ್ಧಿ ಪಡೆದ ರಾಮಲಿಂಗ ಕಾಮಣ್ಣ ಹಾಗೂ ಯಮನೂರ ಚಾಂಗದೇವರ ಜಾತ್ರೆಗಳು ಇದೇ ಸಮಯದಲ್ಲಿ ನಡೆಯುತ್ತಿದ್ದು, ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ-ಹೊರ ರಾಜ್ಯದಿಂದ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ.
ಮುಂಜಾಗ್ರತಾ ಕ್ರಮಗಳ ಕುರಿತು ತಾಲೂಕು ವೈದ್ಯಾಧಿಕಾರಿ ರೂಪಾ ಕಿಣಗಿ ಪ್ರತಿಕ್ರಿಯಿಸಿ, ಮುನ್ನೆಚ್ಚರಿಕೆಯಾಗಿ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದ್ದು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಂಕಿತರನ್ನು ತಪಾಸಣೆಗೆ ಒಳಪಡಿಸಿ ರಕ್ತ ಪರೀಕ್ಷೆಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಪರಕಾಳಿ ಪ್ರತಿಕ್ರಿಯಿಸಿ, ಸಾವಿರಾರು ಭಕ್ತರು ಸರದಿ ಸಾಲಿನಲ್ಲಿರುತ್ತಾರೆ. ವೈರಸ್ ಕುರಿತು ಪತ್ತೆ ಮಾಡುವುದು ಅಸಾಧ್ಯ. ಈ ವೈರಸ್ ಗಾಳಿಯಲ್ಲಿ ಬರುವುದರಿಂದ ಗುಂಪು ಗುಂಪಾಗಿ ಸೇರಬಾರದು. ರಾಮಲಿಂಗ ಕಾಮಣ್ಣನಿಗೆ ಬರುವ ಭಕ್ತರಲ್ಲಿ ಜಾಗೃತಿ ಮೂಡಿಸಲು ಸಭೆ ಕರೆದು ನಿರ್ಧರಿಸುತ್ತೇವೆ. ಕರಪತ್ರಗಳನ್ನು ಸಾರ್ವಜನಿಕರಿಗೆ ನೀಡಿ ಜಾಗೃತಿ ಮೂಡಿಸುತ್ತೇವೆ. ಬರುವಂತಹ ಭಕ್ತರು ಸ್ವತಃ ಜಾಗೃತಿ ವಹಿಸಿ ಮುನ್ನೆಚ್ಚರಿಕೆ ವಹಿಸಬೇಕೆಂದು ಹೇಳಿದರು.
ನಾಳೆ ರಾಮಲಿಂಗ ಕಾಮಣ್ಣ ದರ್ಶನ : ಹೋಳಿ ಹಬ್ಬದ ಅಂಗವಾಗಿ ರಾಮಲಿಂಗ ಕಾಮಣ್ಣ ಮಾ.6ರಂದು ಏಕಾದಶಿ ರಾತ್ರಿ ಪ್ರತಿಷ್ಠಾಪನೆಗೊಂಡು, ದ್ವಾದಶಿ ಮಾ.7 ರಂದು ದರ್ಶನ ಲಭ್ಯವಾಗುತ್ತದೆ. ಮಾ.9 ರಂದು ಹೋಳಿ ಹುಣ್ಣೆಮೆ ಆಚರಿಸಲಾಗುವುದು. ಮಾ. 10ರಂದು ಮಂಗಳವಾರ ಬಣ್ಣ (ಓಕುಳಿ) ಇರುತ್ತದೆ. ರಾತ್ರಿ ರಾಮಲಿಂಗ ಕಾಮಣ್ಣನನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಕಾಮದಹನ ನಡೆಯಲಿದೆ ಎಂದು ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.