Advertisement

ಕೊರೊನಾ: ಪರಿಣಾಮಕಾರಿ ಮುನ್ನೆಚ್ಚರಿಕೆ ಕ್ರಮ

08:53 PM Mar 14, 2020 | Lakshmi GovindaRaj |

ಚಾಮರಾಜನಗರ: ಕೊರೊನಾ ವೈರಸ್‌ ಸೋಂಕು ತಡೆ ಸಂಬಂಧ ಜಿಲ್ಲೆಯಲ್ಲಿ ಯಾವುದೇ ರೀತಿಯ ವೈದ್ಯಕೀಯ ಕೊರತೆ ಬಾರದಂತೆ ಪರಿಣಾಮಕಾರಿ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್‌-19 (ಕೊರೊನಾ ವೈರಸ್‌) ಕುರಿತ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ನಿರಂತರವಾಗಿ ಕೊರೊನಾ ವೈರಸ್‌ ಕುರಿತು ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಬೇಕು.

ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಾಜ್ಯ ಗಡಿಗಳಲ್ಲಿ ಆರೋಗ್ಯ ಇಲಾಖೆಯಿಂದ ಖುದ್ದು ತಪಾಸಣೆ ಕಾರ್ಯ ನಡೆಯಬೇಕು. ವಿದೇಶದಿಂದ ಜಿಲ್ಲೆಗೆ ಬರುವವರ ಮಾಹಿತಿ ಕಲೆಹಾಕಿ, ಅಂಥವರು ಬಂದ ದಿನದಿಂದ 14 ದಿನಗಳವರೆಗೆ ನಿಗಾ ವಹಿಸುವ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೊರೊನಾ ಚಿಕಿತ್ಸೆಗೆ ಪತ್ಯೇಕ ವಾರ್ಡ್‌: ಜಿಲ್ಲೆಯ ಖಾಸಗಿ ಆಸ್ಪತ್ರಗಳಲ್ಲಿ ಸಹ ಕೋವಿಡ್‌- 19 ಚಿಕಿತ್ಸೆಗಾಗಿ ಪತ್ಯೇಕ ವಾರ್ಡ್‌ಗಳನ್ನು ತೆರೆಯಬೇಕು. ಜತೆಗೆ ಖಾಸಗಿ ಆಸ್ಪತ್ರೆಗಳಿಗೆ ಸೋಂಕು ಚಿಕಿತ್ಸೆ ಸಂಬಂಧ ಅಗತ್ಯವಿರುವ ವೈದ್ಯಕೀಯ ಕಿಟ್‌ಗಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕು.

ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಸಂಶಯಾಸ್ಪದ ಪ್ರಕರಣಗಳು ದಾಖಲಾದಲ್ಲಿ, ಅದನ್ನು ಕೂಡಲೇ ಆರೋಗ್ಯ ಅಧಿಕಾರಿಗಳಿಗೆ ತಿಳಿಸಬೇಕು. ಜತೆಗೆ ವಿದೇಶಗಳಿಂದ ಜಿಲ್ಲೆಗೆ ಬರುವ ಸಂಬಂಧಿಕರ ಮಾಹಿತಿ ನೀಡಿ, ಸ್ವಯಂ ಪ್ರೇರಿತರಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.

Advertisement

ಯಾವುದೇ ಮಾಹಿತಿ ನೀಡಬೇಕಿದ್ದಲ್ಲಿ ಉಚಿತ ಸಹಾಯವಾಣಿ 104ನ್ನು ಅಥವಾ ಪೊಲೀಸ್‌ ಕಂಟ್ರೋಲ್‌ ರೂಂ 100ನ್ನು ಸಂಪರ್ಕಿಸಬೇಕು. ಮುಖಗವಸು (ಮಾಸ್ಕ್)ಗಳನ್ನು ಅಗತ್ಯ ಪ್ರಮಾಣದಲ್ಲಿ ಪೂರೈಸಬೇಕು. ಸೋಂಕಿನ ಪರಿಣಾಮಕಾರಿ ಪರೀಕ್ಷೆಗಾಗಿ ಥರ್ಮಲ್‌ ಸ್ಕ್ಯಾನರ್‌ ತರಿಸುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಬೋಯರ್‌ ಹರ್ಷಲ್‌ ನಾರಾಯಣರಾವ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ. ರವಿ, ಜಿಲ್ಲಾ ಸರ್ವೇಲೆನ್ಸ್‌ ಅಧಿಕಾರಿ ನಾಗರಾಜು, ಜಿಲ್ಲಾಸ್ಪತ್ರೆಯ ಡಾ.ಮಹೇಶ್‌, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜವರೇಗೌಡ, ಪೊಲೀಸ್‌ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next