ಔರಾದ: ದೇಶಾದ್ಯಂತ ಕೊರೊನಾ ವೈರಸ್ ಭೀತಿ ಹುಟ್ಟಿಸಿದ ಹಿನ್ನೆಲೆಯಲ್ಲಿ ವ್ಯಾಪಾರ ವ್ಯವಹಾರಗಳ ಮೇಲೆ ಅಡ್ಡ ಪರಿಣಾಮ ಬೀರಿದೆ. ಆದರೆ ಔರಾದ ಹಾಗೂ ಕಮಲನಗರ ತಾಲೂಗಳಲ್ಲಿ ಮಾತ್ರ ಯಾವುದೇ ರೀತಿಯ ಸಮಸ್ಯೆಯಿಲ್ಲದೆ ಜನರು ಎಂದಿನಂತೆ ಜೀವನ ಸಾಗಿಸುತ್ತಿದ್ದು, ಕೋಳಿ ಮಾಂಸದ ಮಾರುಕಟ್ಟೆ ಮೇಲೆ ಮಾತ್ರ ಬಿಸಿ ತಟ್ಟಿದೆ.
ಕೊರೊನಾ ವೈರಸ್ ಒಂದು ವಾರದಿಂದ ದೇಶ, ರಾಜ್ಯದಲ್ಲಿ ಜನರ ನೆಮ್ಮದಿ ಹಾಳು ಮಾಡಿದ್ದು, ಗಡಿ ತಾಲೂಕಿನಲ್ಲಿ ಮಾತ್ರ ಅಂತಹ ತೀವ್ರ ಸಮಸ್ಯೆಯೇನೂ ಆಗಿಲ್ಲ. ಪಟ್ಟಣದಲ್ಲಿ ವ್ಯಾಪಾರ- ವಹಿವಾಟು ಎಂದಿನಂತೆ ಇದ್ದು, ವ್ಯಾಪಾರಿಗಳು ಅಂಗಡಿ ಬಾಗಿಲು ತೆಗೆದು ನಿರ್ಭಯವಾಗಿ ವ್ಯಾಪಾರ ಮಾಡುತ್ತಿದ್ದಾರೆ. ಕೊರೊನಾ ಮುಂಜಾಗ್ರತೆಯ ಬಗ್ಗೆ ತಿಳಿದುಕೊಂಡು ಸ್ವಚ್ಛತೆ ಹಾಗೂ ವೈಯಕ್ತಿಕ ಸಂರಕ್ಷಣೆಗೂ ಮುಂದಾಗಿದ್ದಾರೆ.
ಪಟ್ಟಣದ ಹೋಟೆಲ್, ತರಕಾರಿ ಮಾರುಕಟ್ಟೆ, ಮೀನು ಮಾರಾಟ, ಹಾಲು ಮಾರಾಟ, ಬಟ್ಟೆ ಅಂಗಡಿಗಳು ಹಾಗೂ ಇನ್ನಿತ ಮಳಿಗೆಯಲ್ಲಿ ವ್ಯಾಪಾರಿಗಳು ಎಂದು ನಂತೆ ವ್ಯಾಪಾರ ನಡೆಸಿದ್ದಾರೆ. ಆದರೆ ಕೋಳಿ ಮಾಂಸ ಸೇವಿಸುವುದರಿಂದ ಕೊರೊನಾ ಸೋಂಕು ತಗಲುತ್ತದೆ ಎಂದು ಆತಂಕದಿಂದ ಮಾಂಸ ಸೇವನೆ ಬಿಟ್ಟಿರುವುದರಿಂದ ಮಾಂಸದ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ.
ಕೋಳಿಗಳಿಗೂ ಕೊರೊನಾ ವೈರಸ್ ತಗುಲಿದೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಕೂಡ ಕೋಳಿ ಮಾಂಸ ಸೇವಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿಯೇ ಶೇ.98ರಷ್ಟು ವ್ಯಾಪಾರ ಕುಸಿದಿದ್ದು, ಕೋಳಿ ಮೊಟ್ಟೆಗಳಿಗೂ ಕೂಡ ಎಂದಿನಂತೆ ಬೇಡಿಕೆ ಇಲ್ಲವಾಗಿದೆ. ಚಿಕನ್ ಅಂಗಡಿಗಳು ಗ್ರಾಹಕರಿಲ್ಲದೇ ಬಣಗುಡುತ್ತಿವೆ. ಅಲ್ಲದೇ ಬೆಲೆ ಕೂಡ ಕುಸಿದಿದೆ.
ಈ ಸಂದರ್ಭದಲ್ಲಿ ಮೀನಿನ ಬೇಡಿಕೆ ಹೆಚ್ಚಾಗಿದ್ದು, ಮೀನು ಪ್ರಿಯರಿಗೆ ದರ ಏರಿಕೆಯ ಬಿಸಿ ತಾಗಿದೆ. ಕೊರೊನಾ ಭಯದಿಂದ ಕೋಳಿ ಮಾಂಸ ಪ್ರಿಯರು ಕೂಡ ಮೀನು ಮಾಂಸದತ್ತ ಮುಖ ಮಾಡಿದ್ದಾರೆ.
ಸತತ ಬರಗಾಲದಿಂದ ತಾಲೂಕಿನ ಬಹುತೇಕ ಕೆರೆಗಳಲ್ಲಿ ನೀರಿನ ಅಭಾವದ ಹಿನ್ನೆಲೆಯಲ್ಲಿ ಮೀನುಗಾರರಿಗೆ ಮೀನು ಸಾಕಾಣೆಗೂ ಅವಕಾಶ ಇಲ್ಲದಂತಾಗಿದೆ. ಅದಾಗ್ಯೂ ತಾಲೂಕಿನ ಕೆಲ ಕರೆಗೆಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ದೊರೆಯುವ ಮೀನುಗಳಿಗೆ ಬೇಡಿಕೆ ಹೆಚ್ಚಾಗಿ ಹೆಚ್ಚು ದರದಲ್ಲಿ ಮೀನು ಮಾರಾಟ ಮಾಡಲಾಗುತ್ತಿದೆ.
ತಾಲೂಕು ಕೇಂದ್ರದಲ್ಲಿ ಒಟ್ಟು 38 ಕೋಳಿ ಮಾಂಸದ ಅಂಗಡಿಗಳಿವೆ. ಈ ಮುನ್ನ ಪ್ರತಿನಿತ್ಯ ಒಂದೊಂದು ಅಂಗಡಿಯಲ್ಲಿ ಐದರಿಂದ ಆರು ಸಾವಿರ ರೂ. ವ್ಯಾಪಾರ ನಡೆಯುತ್ತಿತ್ತು. ಕೊರೊನಾ ವೈರಸ್ ಹರಡಿದ ಹಿನ್ನೆಲೆಯಲ್ಲಿ ಒಂದು ವಾರದಿಂದ ವ್ಯಾಪಾರ ಪೂರ್ಣ ನಿಂತಿದೆ. –
ಮೈಬುಬ್, ಚಿಕನ್ ವ್ಯಪಾರಿ, ಔರಾದ
-ರವೀಂದ್ರ ಮುಕ್ತೇದಾರ