ದೇವನಹಳ್ಳಿ: ಸುಗ್ಗಿಹಬ್ಬ ಸಂಕ್ರಾಂತಿಗೆ ಕೊರೊನಾ ಕರಿನೆರಳಿನಿಂದ ಹಬ್ಬದ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಮಹಾಮಾರಿ ಕೊರೊನಾ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ, ಸರ್ಕಾರ ಈಗಾಗಲೇ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು, ಸಂಕ್ರಾಂತಿ ಹಬ್ಬವೂ ಶನಿವಾರ ಬಂದಿರುವುದರಿಂದ ಸಂಭ್ರಮವನ್ನು ಕಸಿದುಕೊಂಡಿದೆ.
ಬೆಲೆ ಏರಿಕೆಗೂ ಜಗ್ಗದೇ ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಸಾರ್ವಜನಿಕರು ಅವರೇಕಾಯಿ, ಕಡಲೇಕಾಯಿ, ಗೆಣಸು, ಕಬ್ಬು, ಹೂವು ಹಾಗೂ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಗಗನ ಮುಟ್ಟಿರುವ ನಡುವೆಯೇ ಸಂಕ್ರಾಂತಿ ಹಬ್ಬ ಆಚರಿಸಲಾತ್ತಿದೆ.
ಆದರೆ, ಸಾರ್ವಜನಿಕ ವಲಯದಲ್ಲಿ ಮಾತ್ರ ಹಬ್ಬದ ವಾತಾವರಣ ನುಂಗಲಾರದ ತುತ್ತಾಗಿದೆ. ಆಚರಣೆಗೆ ಸನ್ನದ್ಧ: ಈಗಾಗಲೇ ಮಾರುಕಟ್ಟೆಗೆ ಗೆಣಸು, ಕಬ್ಬು, ಅವರೇಕಾಯಿ, ಕಡಲೇಕಾಯಿ, ಹೂವು, ಹಣ್ಣು, ಎಳ್ಳು ಬೆಲ್ಲ ದಾಳಿ ಮಾಡಿದ್ದು, ಖರೀದಿ ಭರಾಟೆಯೂ ಜೋರಾಗಿದೆ. ಹಬ್ಬದ ದಿನದಂದು ದೇವಾಲಯಗಳಲ್ಲಿ ಜನಸಂದಣಿ ಸೇರದಂತೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಅಲ್ಲದೆ ವಾರಾಂತ್ಯದ ಕರ್ಫ್ಯೂ ದಿನಗಳಂದು ಅನವಶ್ಯಕವಾಗಿ ಓಡಾಡುವಂತಿಲ್ಲ. ಹಾಗಾಗಿ, ಜನರು ಮನೆಗಳಲ್ಲಿಯೇ ಹಬ್ಬ ಆಚರಣೆಗೆ ಸನ್ನದ್ಧರಾಗಿದ್ದಾರೆ.
ವಾಹನಗಳ ದಟ್ಟಣೆಯಿಂದ ಟ್ರಾಫಿಕ್: ಕಡಲೆಕಾಯಿ ಮತ್ತು ಅವರೇಕಾಯಿ ಬೇಯಿಸಿ ತಿನ್ನುವ ಸಂಪ್ರದಾಯವಿದ್ದು, ಕಬ್ಬು, ಗೆಣಸು, ಎಳ್ಳು-ಬೆಲ್ಲ ಹಂಚುತ್ತಾರೆ. ಕಡಲೇಕಾಯಿ ಕೆ.ಜಿ. 80ರಿಂದ 100 ರೂ., ಸೊಗಡು ಅವರೇಕಾಯಿ ಕೆ.ಜಿ. 60 ರೂ.ದಿಂದ 70 ರೂ., ಕಬ್ಬು ಒಂದು ಜೊಲ್ಲೆಗೆ 50 ರೂ., ಗೆಣಸು ಕೆ.ಜಿ. 40 ರೂಪಾಯಿ ಗಳಂತೆ ಮಾರಾಟವಾಗುತ್ತಿದೆ. ಬಜಾರ್ ರಸ್ತೆಯಲ್ಲಿ ಸಂಕ್ರಾಂತಿ ಹಬ್ಬದ ಹಿನ್ನೆಲೆ ಹೂವು, ಅವರೇಕಾಯಿ, ಕಬ್ಬು, ಕಡಲೇಕಾಯಿ, ಗೆಣಸು ಹಾಗೂ ಇತರೆ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಹಲವಾರು ಜನರು ಬರುತ್ತಿರುವುದ ರಿಂದ ವಾಹನಗಳ ದಟ್ಟಣೆಯಿಂದ ಟ್ರಾಫಿಕ್ ಹೆಚ್ಚಾಗಿತ್ತು.