Advertisement

ಕೊರೊನಾ ಪತ್ತೆ, ನಿಯಂತ್ರಣಕ್ಕೆ ರಾಜ್ಯದಲ್ಲೇ ಸಂಶೋಧನೆ

10:02 AM Mar 28, 2020 | Lakshmi GovindaRaj |

ಬೆಂಗಳೂರು: ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ತಡೆಗಟ್ಟಲು ಜಗತ್ತಿನಾದ್ಯಂತ ಸಂಶೋಧನೆಗಳು ನಡೆಯುತ್ತಿದ್ದು, ರಾಜ್ಯದಲ್ಲೂ ಕೊರೊನಾ ನಿಯಂತ್ರಣಕ್ಕೆ ಸಂಶೋಧನೆ ನಡೆಯುತ್ತಿದೆ. ಶಂಕರ ಮಠದ ಶೃಂಗೇರಿ ಶಾರದಾ ಪೀಠ ಹತ್ತಿರದಲ್ಲಿರುವ ತಂಗಾದೊರೈ ಆಸ್ಪತ್ರೆಯಲ್ಲಿ ಕೊರೊನಾ ಪತ್ತೆ ಹಾಗೂ ನಿಯಂತ್ರಣಕ್ಕೆ ಕಿಟ್‌ ಸಿದ್ಧಪಡಿಸಲಾಗುತ್ತಿದೆ.

Advertisement

ಮಾಲಿಕ್ಯೂಲರ್‌ ಬಯಾಲಜಿ ತಂತ್ರಜ್ಞಾನದ ಮೂಲಕ ಈ ರೋಗ ಹರಡುವುದನ್ನು ತಡೆಗಟ್ಟಲು ಕ್ಯಾನ್ಸೆಟ್‌ ಟೆಕ್ನಾಲಜಿ ಸಂಶೋಧನಾ ಸಂಸ್ಥೆ ಅಗತ್ಯವಿರುವ ಕಿಟ್‌ ಸಿದ್ಧತೆ ಮಾಡಲು ಸಂಶೋಧನೆ ನಡೆಸುತ್ತಿದೆ. ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ನ ವಿಜ್ಞಾನಿಗಳು ಸಂಶೋಧನೆಯಲ್ಲಿ ಪಾಲ್ಗೊಂಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ವೈರಸ್‌ ವ್ಯಕ್ತಿಯಿಂದ ವ್ಯಕ್ತಿಗೆ ತಗಲುವುದರಿಂದ ವೇಗವಾಗಿ ಹೆಚ್ಚಿನ ಜನರನ್ನು ಆವರಿಸಿಕೊಳ್ಳುವ ಲಕ್ಷಣ ಹೊಂದಿದೆ. ಹೀಗಾಗಿ ಈ ವೈರಸ್‌ ಹರಡುವುದನ್ನು ತಡೆಯುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ತಂಗದೊರೈ ಆಸ್ಪತ್ರೆ ಆವರಣದಲ್ಲಿರುವ ಕ್ಯಾನ್ಸೆçಟ್‌ ಟೆಕ್ನಾಲಜಿ ಸಂಸ್ಥೆ ಮಾಲಿಕ್ಯೂರ್‌ ಬಯಾಲಜಿ ತಂತ್ರಜ್ಞಾನದ ಮೂಲಕ ತಯಾರಿಸುತ್ತಿರುವ ಕಿಟ್‌ ಮೂಲಕ ಈ ವೈರಸ್‌ ಸೋಂಕಿತ ವ್ಯಕ್ತಿಯಿಂದ ಬೇರೆಯವರಿಗೆ ಹರಡದಂತೆ ತಡೆಯಲು ಸಾಧ್ಯವಾಗುತ್ತದೆ.

ಜರ್ಮನಿ ತಂತ್ರಜ್ಞಾನ: ಸೋಂಕಿತರನ್ನು ಪತ್ತೆ ಹಚ್ಚಲು ರಾಜ್ಯ ಸರ್ಕಾರ ಸಾಕಷ್ಟು ಕಸರತ್ತು ನಡೆಸುತ್ತಿದೆ. ಅಲ್ಲದೇ ರಾಜ್ಯದಲ್ಲಿ ಕೇವಲ ಐದು ಪ್ರಯೋಗಾಲಯಗಳಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರ ಪತ್ತೆ ಹಚ್ಚಲು ಪರೀಕ್ಷೆ ನಡೆಸುವುದು ಕಷ್ಟವಾಗುತ್ತಿದೆ.

Advertisement

ಆದರೆ, ಕ್ಯಾನ್ಸೆಟ್‌ ಟೆಕ್ನಾಲಜಿ ಸಂಸ್ಥೆ ಜರ್ಮನಿಯಿಂದ ರೋಗ ಪತ್ತೆಹಚ್ಚುವ ಯಂತ್ರವನ್ನು ಆಮದು ಮಾಡಿಕೊಂಡಿದ್ದು, ಅದರ ಮೂಲಕ ರೋಗದ ಗುಣಲಕ್ಷಣ ಪತ್ತೆ ಹಚ್ಚುವ ಕಾರ್ಯ ಮಾಡಲಾಗುತ್ತಿದೆ. ಆದರೆ, ಇದು ಹೆಚ್ಚು ದುಬಾರಿಯಾಗಿರುವುದರಿಂದ ಸಾಮಾನ್ಯ ಜನರಿಗೂ ಪರೀಕ್ಷಿಸಿಕೊಳ್ಳುವುದು ಕಷ್ಟ ಸಾಧ್ಯವಾಗುತ್ತಿದೆ.

ಅದೇ ತಂತ್ರಜ್ಞಾನದ ಆಧಾರದಲ್ಲಿ ರಾಜ್ಯದಲ್ಲಿಯೇ ಕೊರೊನಾ ಪತ್ತೆ ಹಚ್ಚಿ ಹರಡುವುದನ್ನು ನಿಯಂತ್ರಿಸಲು ಕ್ಯಾನ್ಸೆಟ್‌ ಟೆಕ್ನಾಲಜಿ ಸಂಸ್ಥೆ ಸಂಶೋಧನೆ ನಡೆಸುತ್ತಿದ್ದು, ಈ ಕಿಟ್‌ ತಯಾರಿಸಲು ಸುಮಾರು 2 ವಾರಗಳ ಕಾಲ ಬೇಕಾಗಬಹುದು. ಜರ್ಮನ್‌ ನಿಂದ ಆಮದು ಮಾಡಿಕೊಂಡಿರುವ ಲ್ಯಾಬ್‌ ತಂತ್ರಜ್ಞಾನದಿಂದ ವೈರಸ್‌ ಪರೀಕ್ಷೆಗೆ ಸುಮಾರು 4 ರಿಂದ 5 ಸಾವಿರ ರೂ. ಚಾರ್ಜ್‌ ಮಾಡಲಾಗುತ್ತದೆ.

ಆದರೆ, ಇದೇ ತಂತ್ರಜ್ಞಾನವನ್ನು ಭಾರತದಲ್ಲೇ ಸಂಶೋಧಿಸಿದರೆ ಸುಮಾರು 1 ಸಾವಿರ ರೂ. ವೆಚ್ಚದಲ್ಲಿ ಪರೀಕ್ಷೆ ಮಾಡಬಹುದು. ಅದಕ್ಕಾಗಿ ಕ್ಯಾನ್ಸೆçಟ್‌ ಟೆಕ್ನಾಲಜಿ ಸಂಸ್ಥೆ ಈ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದು, ಎರಡು ವಾರದಲ್ಲಿ ಈ ಸಂಶೋಧನೆ ಯಶಸ್ವಿಯಾಗುವ ನಿರೀಕ್ಷೆಯಲ್ಲಿದ್ದಾರೆ.

ಆದರೆ, ಈ ಸಂಸ್ಥೆ ಸಂಶೋಧಿಸುವ ಕಿಟ್‌ ನೇರವಾಗಿ ಬಳಕೆಗೆ ಅವಕಾಶವಿಲ್ಲ. ತಮ್ಮ ಸಂಶೋಧನೆ ಸಾರ್ವಜನಿಕ ಬಳಕೆಗೆ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರದ ಅನುಮತಿ ಪಡೆಯುವ ಅಗತ್ಯವಿದೆ. ಈಗಾಗಲೇ ಕೇಂದ್ರದ ಅನುಮತಿ ಪಡೆಯಲು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವ ಡಿಸಿಜಿಐ ಡ್ರಗ್‌ ಕಂಟ್ರೋರ ಜನರಲ್‌ ಆಫ್ ಇಂಡಿಯಾ ಸಂಸ್ಥೆಯ ಅನುಮತಿಗೆ ಅಗತ್ಯವಿರುವ ಪ್ರಯತ್ನ ನಡೆಸುತ್ತಿದ್ದಾರೆ.

ಯಂತ್ರ ಆಮದಿಗೆ ಚಿಂತನೆ: ಕೊರೊನಾ ವೈರಸ್‌ ಪತ್ತೆಹಚ್ಚಲು ರಾಜ್ಯದಲ್ಲಿ ಕೇವಲ ಐದು ಲ್ಯಾಬೊರೇಟರಿಗಳು ಲಭ್ಯವಿದ್ದು, ರಾಜ್ಯದ ಇತರ ಭಾಗದಲ್ಲಿ ಈ ಲ್ಯಾಬ್‌ಗಳ ಕೊರತೆಯಿಂದ ವೈರಸ್‌ ಸೋಂಕಿತರ ಪತ್ತೆ ಹೆಚ್ಚಲು ರಾಜ್ಯ ಸರ್ಕಾರಕ್ಕೆ ಕಷ್ಟವಾಗುತ್ತಿದೆ. ಇದರಿಂದಾಗಿ ಜರ್ಮನಿಯಿಂದ ಕನಿಷ್ಠ ನಾಲ್ಕು ಲ್ಯಾಬ್‌ ಯಂತ್ರಗಳನ್ನು ಆಮದು ಮಾಡಿಕೊಳ್ಳುವಂತೆ ಕ್ಯಾನ್ಸೆಟ್‌ ಟೆಕ್ನಾಲಜಿ ಸಂಸ್ಥೆಯವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ಸರ್ಕಾರ ಕೊರೊನಾ ವೈರಸ್‌ ನಿಯಂತ್ರಿಸಲು ರಚಿಸಿರುವ ಸಚಿವರನ್ನೊಳಗೊಂಡ ಟಾಸ್ಕ್ ಫೋರ್ಸ್‌ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದ್ದು, ಕೊರೊನಾ ವೈರಸ್‌ ಪರೀಕ್ಷಾ ಯಂತ್ರಗಳನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ಒಂದು ಯಂತ್ರದ ಬೆಲೆ ಕನಿಷ್ಠ 4.5 ರಿಂದ 5 ಕೋಟಿ ರೂ.ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ಯಂತ್ರಗಳನ್ನು ಆಮದು ಮಾಡಿಕೊಳ್ಳುವ ಕುರಿತು ಸಂಬಂಧಿಸಿದ ಸಂಸ್ಥೆಗಳಿಂದ ರಾಜ್ಯ ಸರ್ಕಾರ ಕೊಟೇಶನ್‌ ತರಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಮಾಲುಕ್ಯುಲರ್‌ ಬಯಾಲಜಿ ತಂತ್ರಜ್ಞಾನ ಬಳಸಿ ಈ ವೈರಸ್‌ ಪತ್ತೆ ಹಚ್ಚಿ ಹೆಚ್ಚಿನ ಪ್ರಮಾಣದಲ್ಲಿ ಹರಡುವುದನ್ನು ತಡೆಗಟ್ಟಲು ಪ್ರಯತ್ನ ನಡೆಸುತ್ತಿದ್ದೇವೆ. ಸ್ಥಳೀಯವಾಗಿಯೇ ತಂತ್ರಜ್ಞಾನ ಸಂಶೋಧನೆ ನಡೆಸಲಾಗುತ್ತಿದೆ.
-ಕೆ.ಎನ್‌.ಶ್ರೀಧರ್‌, ಕ್ಯಾನ್ಸೆಟ್‌ ತಂತ್ರಜ್ಞಾನ ಸಂಸ್ಥೆ ನಿರ್ದೇಶಕರು

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next